
ಬೆಂಗಳೂರಿಗರಿಗೆ ಟೋಲ್ ದರ ಏರಿಕೆ ಬಿಸಿ: ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಮಾರ್ಗಗಳಲ್ಲಿ ಇಂದಿನಿಂದಲೇ ಪ್ರಯಾಣ ದುಬಾರಿ!
ಹೊಸ ದರಗಳ ಪ್ರಕಾರ, ಬಹುತೇಕ ಎಲ್ಲಾ ವರ್ಗದ ವಾಹನಗಳ ಶುಲ್ಕದಲ್ಲಿ ಕನಿಷ್ಠ 5 ರೂಪಾಯಿಗಳ ಏರಿಕೆ ಕಂಡುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ ಮತ್ತು ಅತ್ತಿಬೆಲೆ ಟೋಲ್ ಬೂತ್‌ಗಳಲ್ಲಿ ಇಂದಿನಿಂದ (ಜುಲೈ 1) ಟೋಲ್ ಶುಲ್ಕಗಳನ್ನು ಪರಿಷ್ಕರಿಸಿದೆ. ಈ ಏರಿಕೆಯು ನಗರದ ವಾಹನ ಸವಾರರಿಗೆ, ವಿಶೇಷವಾಗಿ ನಿತ್ಯ ಪ್ರಯಾಣಿಸುವವರಿಗೆ, ಹೆಚ್ಚುವರಿ ಆರ್ಥಿಕ ಹೊರೆಯನ್ನುಂಟುಮಾಡಲಿದೆ.
ಹೊಸ ದರಗಳ ಪ್ರಕಾರ, ಬಹುತೇಕ ಎಲ್ಲಾ ವರ್ಗದ ವಾಹನಗಳ ಶುಲ್ಕದಲ್ಲಿ ಕನಿಷ್ಠ 5 ರೂಪಾಯಿಗಳ ಏರಿಕೆ ಕಂಡುಬಂದಿದೆ. ಇದು ದಿನದ ಟೋಲ್ ದರಗಳು ಮಾತ್ರವಲ್ಲದೆ, ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳ ಮೇಲೂ ಪರಿಣಾಮ ಬೀರಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಏರಿದ ದರಗಳು
* ಕಾರು, ಜೀಪ್ ಮತ್ತು ನಾಲ್ಕು ಚಕ್ರದ ಲಘು ವಾಹನಗಳು:
* ಒಂದು ಬದಿಯ ಪ್ರಯಾಣಕ್ಕೆ: 60 ರೂಪಾಯಿಯಿಂದ 65 ರೂಪಾಯಿಗೆ ಏರಿಕೆ.
* ಎರಡು ಬದಿಯ ಪ್ರಯಾಣಕ್ಕೆ: 85 ರೂಪಾಯಿಯಿಂದ 90 ರೂಪಾಯಿಗೆ ಏರಿಕೆ.
* ಮಾಸಿಕ ಪಾಸ್: 1,885 ರೂಪಾಯಿ
* ದ್ವಿಚಕ್ರ ವಾಹನಗಳು: ಒಂದು ಮಾರ್ಗದ ಪ್ರಯಾಣಕ್ಕೆ: 25 ರೂಪಾಯಿ (ಯಾವುದೇ ಬದಲಾವಣೆ ಇಲ್ಲ).
* ಲಾರಿ (ಟ್ರಕ್) ಮತ್ತು ಬಸ್‌ಗಳು: ಒಂದು ಬದಿಯ ಪ್ರಯಾಣಕ್ಕೆ: 170 ರೂಪಾಯಿಯಿಂದ 175 ರೂಪಾಯಿಗೆ ಏರಿಕೆ.
* ಮಲ್ಟಿ-ಆಕ್ಸಲ್ ವಾಹನಗಳು: ಒಂದು ಬದಿಯ ಪ್ರಯಾಣಕ್ಕೆ: 345 ರೂಪಾಯಿಯಿಂದ 350 ರೂಪಾಯಿಗೆ ಏರಿಕೆ.
ಅತ್ತಿಬೆಲೆ ಟೋಲ್ ಬೂತ್‌ನಲ್ಲಿ ಹೊಸ ಶುಲ್ಕಗಳು:
* ಕಾರುಗಳು: ಒಂದು ಬದಿಯ ಪ್ರಯಾಣಕ್ಕೆ: 35 ರೂಪಾಯಿಯಿಂದ 40 ರೂಪಾಯಿಗೆ ಏರಿಕೆ.
* ಲಘು ವಾಹನಗಳು ಮತ್ತು ಮಿನಿ ಬಸ್: ಒಂದು ಬದಿಯ ಪ್ರಯಾಣಕ್ಕೆ: 60 ರೂಪಾಯಿಯಿಂದ 65 ರೂಪಾಯಿಗೆ ಏರಿಕೆ.
* ಟ್ರಕ್ ಮತ್ತು ಬಸ್: ಒಂದು ಬದಿಯ ಪ್ರಯಾಣಕ್ಕೆ: 120 ರೂಪಾಯಿಯಿಂದ 125 ರೂಪಾಯಿಗೆ ಏರಿಕೆ.
* ದೊಡ್ಡ ಮಲ್ಟಿ-ಆಕ್ಸಲ್ ವಾಹನಗಳು: ಒಂದು ಟ್ರಿಪ್‌ಗೆ: 260 ರೂಪಾಯಿಯಿಂದ 265 ರೂಪಾಯಿಗೆ ಏರಿಕೆ.
ಈ ದರ ಏರಿಕೆಯು ಪ್ರಮುಖವಾಗಿ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ನಲ್ಲಿ ಕೆಲಸ ಮಾಡುವ ಸಾವಿರಾರು ಸಾಫ್ಟ್‌ವೇರ್ ಉದ್ಯೋಗಿಗಳು, ಹಾಗೆಯೇ ಸರಕು ಸಾಗಣೆ ವಾಹನಗಳು ಮತ್ತು ಬಸ್‌ಗಳ ಮೂಲಕ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ಒತ್ತಡವನ್ನು ತರಲಿದೆ. ಸದ್ಯ ಈ ಏರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ದರ ಪರಿಷ್ಕರಣೆಯ ಕುರಿತು NHAI ಅಧಿಕೃತವಾಗಿ ಹೆಚ್ಚಿನ ವಿವರಗಳನ್ನು ನೀಡಿಲ್ಲವಾದರೂ, ವಾಹನ ಸವಾರರು ಹೆಚ್ಚುವರಿ ವೆಚ್ಚಕ್ಕೆ ಸಿದ್ಧರಾಗಬೇಕಿದೆ.