
Series -2: ಜಿ.ಪಂ, ತಾ.ಪಂ. ಚುನಾವಣೆ ಆಗದಿರುವುದಕ್ಕೆ ಎಲ್ಲೆಡೆ ಅಸಮಾಧಾನ; ಕೇಂದ್ರ ಅನುದಾನ ವಾಪಸ್ ಆತಂಕ
ರಾಜ್ಯ ಹೈಕೋರ್ಟ್‌ನಲ್ಲಿ ಎರಡು ನ್ಯಾಯಾಂಗ ನಿಂದನೆ ಅನುಭವಿಸಿದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದೆ ಮೊಂಡುತನ ಅನುಸರಿಸುತ್ತಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಚುನಾವಣೆ ನಡೆಸದಿದ್ದರೆ ಕೇಂದ್ರದಿಂದ ಬರುವ ಅನುದಾನವು ವಾಪಸ್ ಹೋಗಲಿದೆ.
ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದಿರುವ ಸರ್ಕಾರದ ನಡೆಗೆ ಪಕ್ಷಾತೀತವಾಗಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೊಳಿಸಬೇಕಾದ ಸರ್ಕಾರವು ಅವುಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿರುವುದು ಖಂಡನೀಯ ಎಂಬ ವಿರೋಧಗಳು ಕೇಳಿಬರುತ್ತಿವೆ.
ರಾಜ್ಯ ಹೈಕೋರ್ಟ್‌ನಲ್ಲಿ ಎರಡು ನ್ಯಾಯಾಂಗ ನಿಂದನೆ ಅನುಭವಿಸಿದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದೆ ಮೊಂಡುತನ ಅನುಸರಿಸುತ್ತಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಚುನಾವಣೆ ನಡೆಸದಿದ್ದರೆ ಕೇಂದ್ರದಿಂದ ಬರುವ ಅನುದಾನವು ವಾಪಸ್ ಹೋಗಲಿದೆ. ಕರ್ನಾಟಕ ರಾಜ್ಯವು ಸಮಗ್ರ ಪಂಚಾಯತಿ ರಾಜ್ ಕಾಯ್ದೆಯನ್ನು ಮೊದಲು ಜಾರಿಗೆ ತಂದ ಹೆಗ್ಗಳಿಕೆಯನ್ನು ಹೊಂದಿದೆ. 73 ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಕಾಯ್ದೆಯು 1993ರ ಮೇ 10 ರಿಂದ ಜಾರಿಗೆ ಬಂದಿದ್ದು, ನಿಯಮಗಳನ್ನು ಅಳವಡಿಸಿಕೊಳ್ಳಲಾಯಿತು. ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್ ಎಂಬ ಮೂರು ಶ್ರೇಣಿ ವ್ಯವಸ್ಥೆ ಅನುಷ್ಠಾನಗೊಂಡಿತು. ಆದರೆ, ಮಾದರಿಯಾಗಿದ್ದ ರಾಜ್ಯವು ಇದೀಗ ಚುನಾವಣೆ ನಡೆಸದಿರುವುದು ಸರಿಯಾದ ಕ್ರಮವಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಕೇಂದ್ರದಿಂದ ಅನುದಾನ ವಾಪಸ್ ಹೋಗುವ ಆತಂಕ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತದೆ. ಈ ಅನುದಾನವನ್ನು ರಾಜ್ಯ ಸರ್ಕಾರವು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಹಂಚಿಕೆ ಮಾಡುತ್ತದೆ. 15ನೇ ಹಣಕಾಸು ಆಯೋಗವು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ಶಿಫಾರಸು ಮಾಡುತ್ತದೆ. ಇದರಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೂ ಅನುದಾನ ಸೇರಿದೆ. ಈ ಬಾರಿ ಎರಡು ಸಾವಿರ ಕೋಟಿ ರು.ನಷ್ಟು ಕೇಂದ್ರ ನೀಡಿದೆ. ಆದರೆ, ಚುನಾವಣೆ ನಡೆಸದ ಕಾರಣ ಅದನ್ನು ತಡೆಹಿಡಿಯಲಾಗಿದೆ. ಅದು ಬಿಡುಗಡೆಯಾಗಬೇಕಾದರೆ ಚುನಾವಣೆ ನಡೆಯಬೇಕಾದ ಅನಿವಾರ್ಯತೆ ಇದೆ.
ಕೇಂದ್ರವು ನೀಡುವ ಅನುದಾನವು ಮೂಲಭೂತ ಅನುದಾನ ಮತ್ತು ಕಾರ್ಯಕ್ಷಮತೆ ಆಧಾರಿತ ಅನುದಾನವಾಗಿರುತ್ತದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು ತಮ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಅನುದಾನವನ್ನು ಬಳಸುತ್ತವೆ. ಕುಡಿಯುವ ನೀರು, ರಸ್ತೆ, ಶಾಲಾ ಕಟ್ಟಡಗಳು ಮುಂತಾದವುಗಳ ನಿರ್ಮಾಣಕ್ಕೆ ಅನುದಾನವನ್ನು ಬಳಸಲಾಗುತ್ತದೆ.
ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಅಗತ್ಯತೆಯ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ದೇಶದಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳು ಜಾರಿ ಇವೆ. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಸರ್ಕಾರ ನಡೆಸಬೇಕು. ಯಾವುದೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳು ಕಾಲಕಾಲಕ್ಕೆ ಚುನಾವಣೆಗಳು ನಡೆಯಬೇಕು. ಒಂದು ವೇಳೆ ಯಾವ ರಾಜ್ಯದಲ್ಲಿ ಚುನಾವಣೆ ನಡೆಯುವುದಿಲ್ಲ, ಅಂತಹ ರಾಜ್ಯಗಳಿಗೆ ಅನುದಾನ ಮಂಜೂರು ಮಾಡಬಾರದು ಎಂಬ ಷರತ್ತು ಇದೆ. ಹೀಗಾಗಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ತಡೆಹಿಡಿಯಲಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕೋಟಿ ರು. ಬಿಡುಗಡೆಯಾದರೂ ಮಂಜೂರಾಗಿಲ್ಲ. ಈ ಅನುದಾನವು ಐದು ವರ್ಷಗಳ ಕಾಲ ಇರಲಿದೆ. ಮುಂದಿನ ಮಾರ್ಚ್ 31ರ ವೇಳೆ ಚುನಾವಣೆ ನಡೆದರೆ ಅನುದಾನವನ್ನು ಪಡೆದುಕೊಳ್ಳಬಹುದು. ಇಲ್ಲದಿದ್ದರೆ ಆ ಅನುದಾನ ಕೇಂದ್ರಕ್ಕೆ ವಾಪಸ್ ಹೋಗಲಿದೆ. ಹೀಗಾಗಿ ರಾಜ್ಯ ಸರ್ಕಾರವು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸಿದ್ಧತೆ ಕೈಗೊಂಡಿದೆ. ಸರ್ಕಾರವು ಮೀಸಲಾತಿ ಪಟ್ಟಿ ನೀಡಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದಲೂ ಚುನಾವಣೆ ತಡೆಹಿಡಿಯುವ ಕೆಲಸವಾಗಿದೆ. ಸಂವಿಧಾನದಡಿ ಐದು ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದರಿಂದ ಸ್ಥಳೀಯಮಟ್ಟದ ಸಮಸ್ಯೆಗಳಿಗೆ ಸ್ಥಳೀಯ ನಾಯಕರು ಸ್ಪಂದಿಸಲು ಸಾಧ್ಯವಾಗಲಿದೆ ಎಂದರು.
ಹಿಂದುಳಿದ ವರ್ಗಗಳ ಅವಕಾಶ ತಪ್ಪಿದಂತಾಗುತ್ತದೆ
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸರ್ಕಾರ ತನ್ನ ಹತೋಟಿಗೆ ತೆಗೆದುಕೊಳ್ಳುವ ಮುನ್ನ ಸರಿಯಾಗಿಯೇ ನಡೆಯುತ್ತಿತ್ತು. ಆಯೋಗವೇ ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ಮಾಡುವ ಅಧಿಕಾರ ಇತ್ತು. ಆದರೆ ಸರ್ಕಾರದ ನಡೆಯಿಂದಾಗಿ ಆಯೋಗಕ್ಕೆ ಅಧಿಕಾರ ಇಲ್ಲವಾಗಿದೆ. ಇದರಿಂದ ಸ್ಥಳೀಯ ನಾಯಕರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯು ಸಂವಿಧಾನಾತ್ಮಕ ವಿಕೇಂದ್ರಿಕರಣವಾಗಿದೆ. ಅಧಿಕಾರ ಎಂಬುದು ಒಂದು ಕಡೆ ಕೇಂದ್ರಿಕರಣವಾಗಿರಬಾರದು ಎಂಬ ಕಾರಣಕ್ಕಾಗಿ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ. ಆದರೆ, ಯಾವುದೇ ಪಕ್ಷದ ಸರ್ಕಾರ ಇದ್ದರೂ ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯ ಚುನಾವಣೆಗಳನ್ನು ಬಳಸಿಕೊಳ್ಳಬಾರದು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕಾದ ಮತ್ತೊಂದು ಪ್ರಮುಖ ಕಾರಣವೆಂದರೆ, ಬಹಳಷ್ಟು ಹಿಂದುಳಿದ ಸಮುದಾಯಗಳ ನಾಯಕರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಆದರೆ, ಜನಪ್ರತಿನಿಧಿಗಳು ಆಗಬೇಕು ಎಂಬ ಆಕಾಂಕ್ಷೆಯನ್ನು ಹೊಂದಿರುತ್ತಾರೆ. ಅಂತಹವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಹಳ ಮಹತ್ವದ್ದಾಗಿರುತ್ತದೆ. ಸಂವಿಧಾನದಡಿ ನೀಡಿರುವ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗುತ್ತದೆ. ಶಾಸಕರಾಗಲು ಸಾಧ್ಯವಿಲ್ಲದ ಹಿಂದುಳಿದ ಸಮುದಾಯದ ನಾಯಕರು ಕನಿಷ್ಠ ಪಕ್ಷ ಸ್ಥಳೀಯ ಸಂಸ್ಥೆಯ ಸದಸ್ಯರಾಗಬಹುದು. ಅದು ಅವರಿಗೆ ಜೀವನದಲ್ಲಿ ಏನೋ ಸಾಧಿಸಿದ ಸಂತಸವು ಇರಲಿದೆ. ಹೀಗಾಗಿ ಸರ್ಕಾರವು ಅದಷ್ಟು ಬೇಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೆಹಳ್ಳಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಎನ್. ರವಿ ಹಸನ್‌ಘಟ್ಟ ಮಾತನಾಡಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಸರ್ಕಾರವು ಕ್ರಮ ಕೈಗೊಳ್ಳಬೇಕು. ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ನಲ್ಲಿ ಜನಪ್ರತಿನಿಧಿಗಳು ಇಲ್ಲದಿರುವುದು ಅಧಿಕಾರಿಗಳು ತಾವೇ ಆಡಳಿತ ನಡೆಸುವಂತಾಗಿದೆ. ಅಧಿಕಾರಿಗಳು ಅಧಿಕಾರಿಗಳು ಲೂಟಿ ಹೊಡಿಯುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಆದರೆ, ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲು ಸ್ಥಳೀಯ ನಾಯಕರು ಇಲ್ಲದಂತಾಗಿದೆ ಎಂದು ತಿಳಿಸಿದರು.
ಚುನಾವಣೆ ನಡೆದರೆ ಶಾಸಕರ ಒತ್ತಡ ಕಡಿಮೆಯಾಗಲಿದೆ
ಯಾದಗಿರಿ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್‌ಚಂದ್ರ ಕಟಕಟಿ ಮಾತನಾಡಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ನಲ್ಲಿ ಜನಪ್ರತಿನಿಧಿಗಳು ಇದ್ದರೆ ಶಾಸಕರ ಒತ್ತಡ ಕಡಿಮೆ ಇರುತ್ತದೆ. ಸ್ಥಳೀಯಮಟ್ಟದ ನಾಯಕರು ಅಲ್ಲಿನ ಸಮಸ್ಯೆಗಳನ್ನು ನೋಡಿಕೊಂಡು ನಿಭಾಯಿಸುತ್ತಾರೆ. ಜನರು ಸಹ ಹೆಚ್ಚಾಗಿ ಸ್ಥಳೀಯ ನಾಯಕರ ಮೇಲೆ ಅವಲಂಬಿತರಾಗುತ್ತಾರೆ. ಇಡೀ ಕ್ಷೇತ್ರವನ್ನು ನೋಡಿಕೊಳ್ಳಲು ಶಾಸಕರೇ ನೋಡಿಕೊಳ್ಳುವುದು ಕಷ್ಟವಾಗಲಿದೆ. ಅವರ ಮೇಲೆ ಹೆಚ್ಚಿನ ಒತ್ತಡ ಇರಲಿದೆ. ಅದು ಹಂಚಿಕೆಯಾಗಬೇಕಾದರೆ ಸ್ಥಳೀಯ ಚುನಾವಣೆಗಳು ನಡೆಯಬೇಕು. ಆದರೆ, ಚುನಾವಣೆ ನಡೆಸಲು ಆಡಳಿತ ಪಕ್ಷದವರಿಗೆ ಇಷ್ಟವಿಲ್ಲ. ಪ್ರತಿಪಕ್ಷದವರಿಗೂ ಆಸಕ್ತಿ ಇಲ್ಲ. ಯಾರಿಗೂ ಚುನಾವಣೆ ಬೇಕಾಗಿಲ್ಲ. ಚುನಾವಣೆ ನಡೆದರೆ ಸ್ಥಳೀಯ ಮಟ್ಟದಲ್ಲಿ ಅಸಮಾಧಾನ ಪ್ರಾರಂಭವಾಗಲಿದ್ದು, ಅದನ್ನು ಶಮನ ಮಾಡುವುದು ತಲೆನೋವಿನ ಕೆಲಸ. ಹೀಗಾಗಿ ಚುನಾವಣೆ ನಡೆಸಲು ಹಿಂದೇಟು ಹಾಕಲಾಗುತ್ತಿದೆ ಎಂದು ತಿಳಿಸಿದರು.
ಸರಣಿ ಸುದ್ದಿ: ಹಿಂದಿನ ಸರಣಿ ವರದಿಗೆ ಕ್ಲಿಕ್ ಮಾಡಿ - Series-1|ಜಿ.ಪಂ, ತಾ.ಪಂ. ಚುನಾವಣೆ : ಸರ್ಕಾರ - ರಾಜ್ಯ ಚುನಾವಣಾ ಆಯೋಗ ನಡುವೆ ತಿಕ್ಕಾಟ