ರಾಹುಲ್‌ ಹೇಳಿದ ʼಮತಗಳವುʼ ಕ್ಷೇತ್ರ ಬೆಂಗಳೂರು ಸೆಂಟ್ರಲ್ : ಕಾಂಗ್ರೆಸ್‌ ಬಳಿ ʼ100% ಪುರಾವೆʼ ಇದೆಯೆ?
x

ರಾಹುಲ್‌ ಗಾಂಧಿ 

ರಾಹುಲ್‌ ಹೇಳಿದ ʼಮತಗಳವುʼ ಕ್ಷೇತ್ರ ಬೆಂಗಳೂರು ಸೆಂಟ್ರಲ್ : ಕಾಂಗ್ರೆಸ್‌ ಬಳಿ ʼ100% ಪುರಾವೆʼ ಇದೆಯೆ?

ರಾಹುಲ್‌ ಗಾಂಧಿ ಆರೋಪದ ಬಗ್ಗೆ ಒಂದು ವಾರದಲ್ಲಿ ಸಾಕ್ಷಿ ಸಮೇತ ದಾಖಲೆ ತೆರೆದಿಡುವುದಾಗಿ ಕಾಂಗ್ರೆಸ್‌ ಹೇಳಿದೆ. ಸಾಧ್ಯವಾಗದೇ ಹೋದರೆ ರಾಹುಲ್‌ ಗಾಂಧಿ ದೇಶದ ಮುಂದೆ ಮುಜುಗರ ಅನುಭವಿಸಬೇಕಾಗುತ್ತದೆ.


2024ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಮತಕಳವು ನಡೆದಿದೆ ಎಂಬ ರಾಹುಲ್‌ ಗಾಂಧಿ ಮಾಡಿರುವ ಗಂಭೀರ ಆರೋಪ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದೆ.

ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಮತಕಳವು ಪತ್ತೆ ಹಚ್ಚಿದ್ದು, ಶೀಘ್ರವೇ ಸಾಕ್ಷಿ ಸಮೇತ ಜನರ ಮುಂದೆ ದಾಖಲೆ ತೆರೆದಿಡುತ್ತೇವೆ ಎಂಬ ರಾಹುಲ್‌ ಗಾಂಧಿ ಹೇಳಿಕೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಳಕೆ ಕುರಿತ ಚರ್ಚೆಗಳು ಮುನ್ನೆಲೆಗೆ ಬರುವಂತೆ ಮಾಡಿದೆ.

ರಾಜ್ಯದ ಲೋಕಸಭೆ ಕ್ಷೇತ್ರವೊಂದರಲ್ಲಿ ಚುನಾವಣಾ ಅಕ್ರಮದ ಅಧ್ಯಯನದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿರುವುದು ಇನ್ನಷ್ಟು ಚರ್ಚೆ ಹುಟ್ಟು ಹಾಕಿದೆ.

'ದ ಫೆಡರಲ್‌ ಕರ್ನಾಟಕ'ದ ಜತೆ ಮಾತನಾಡಿದ ಅವರು, "ಮುಂದಿನ ವಾರ ಚುನಾವಣಾ ಅಕ್ರಮದ ಬಗ್ಗೆ ಬಹಿರಂಗ ಪಡಿಸುತ್ತೇವೆ. ದಾಖಲೆ ಸಮೇತ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಪಡಿಸಲಾಗುವುದು,"ಎಂದು ಹೇಳಿದ್ದಾರೆ.

ಈ ಮಧ್ಯೆ, ಬೆಂಗಳೂರಿನ ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲೇ ಚುನಾವಣಾ ಅಕ್ರಮದ ನಡೆದಿರುವುದು ಕಾಂಗ್ರೆಸ್‌ ಪಕ್ಷ ನಡೆಸಿದ ಅಧ್ಯಯನದಿಂದ ಬಯಲಾಗಿದೆ. ಈ ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆ ಹೊಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಕೊನೆ ಸುತ್ತಿನಲ್ಲಿ ನಿರಾಸೆಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ವಿರುದ್ಧ 32,707 ಮತಗಳ ಅಂತರದಿಂದ ಪರಾಜಿತರಾಗಿದ್ದರು.

ರಾಹುಲ್‌ ಗಾಂಧಿ ಹೇಳಿದ್ದೇನು?

ಕರ್ನಾಟಕದ ಒಂದು ಕ್ಷೇತ್ರದಲ್ಲಿ ಚುನಾವಣಾ ಆಯೋಗವು ವಂಚನೆಗೆ ಅವಕಾಶ ನೀಡಿದೆ ಎಂಬುದಕ್ಕೆ ಕಾಂಗ್ರೆಸ್ "ಶೇಕಡಾ 100 ರಷ್ಟು ಪುರಾವೆ" ಹೊಂದಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ಮತಕಳವು ಮಾಡಲಾಗಿದೆ ಎಂಬುದನ್ನು ದೇಶದ ಜನ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಸಾಕ್ಷ್ಯ ಸಮೇತ ಇಡುತ್ತೇವೆ ಎಂದಿದ್ದರು.

ಸಂಸತ್ ಅಧಿವೇಶನದಲ್ಲಿ ಚುನಾವಣಾ ಅಕ್ರಮಗಳ ಕುರಿತು ಮಾತನಾಡುವ ವೇಳೆ ಕರ್ನಾಟಕದ ಲೋಕಸಭಾ ಕ್ಷೇತ್ರದ ಹೆಸರು ಉಲ್ಲೇಖಿಸದೇ ಗಂಭೀರ ಆರೋಪ ಮಾಡಿದ್ದರು. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರ ಚುನಾವಣಾ ಪ್ರಕ್ರಿಯೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದೇವೆ. ಬೋಗಸ್ ವೋಟಿಂಗ್ ಬಗ್ಗೆ ಮಾಹಿತಿ ಸಿಕ್ಕಿದೆ. ಯಾವ ರೀತಿ ಮತಕಳವು ಮಾಡಲಾಗಿದೆ ಎಂಬ ವಿಚಾರಗಳ ಸತ್ಯವನ್ನು ಬಹಿರಂಗಪಡಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಈ ಬಗ್ಗೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿ, "ಚುನಾವಣಾ ಅರ್ಜಿ ಸಲ್ಲಿಸಿದ್ದರೆ, ಗೌರವಾನ್ವಿತ ಹೈಕೋರ್ಟ್‌ನ ತೀರ್ಪಿಗಾಗಿ ಕಾಯಿರಿ. ಇಲ್ಲದಿದ್ದರೆ, ಈಗ ಆಧಾರರಹಿತ ಆರೋಪಗಳನ್ನು ಏಕೆ ಮಾಡಬೇಕು?" ಎಂದು ಪ್ರಶ್ನಿಸಿತ್ತು. ತೀರ್ಪಿನಿಂದ ತೃಪ್ತರಾಗದ ಯಾರಾದರೂ ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ 45 ದಿನಗಳ ಒಳಗೆ ಚುನಾವಣಾ ಅರ್ಜಿಯನ್ನು ಸಲ್ಲಿಸಬಹುದು. ಅಂತಹ ಅರ್ಜಿಗಳನ್ನು ಸಂಬಂಧಪಟ್ಟ ಕ್ಷೇತ್ರದ ರಾಜ್ಯದ ಹೈಕೋರ್ಟ್‌ಗಳಲ್ಲಿ ಸಲ್ಲಿಸಬಹುದು ಎಂದೂ ಆಯೋಗ ವಿವರಿಸಿತ್ತು.

"ಚುನಾವಣಾ ಸಮಿತಿಯು ಭಾರತದ ಚುನಾವಣಾ ಆಯೋಗವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು "ತನ್ನ ಕೆಲಸವನ್ನು ಮಾಡುತ್ತಿಲ್ಲ" ಎಂದು ಗಾಂಧಿ ಆರೋಪಿಸಿದ್ದರು. ಈಗ ತಮ್ಮ ಅರೋಪವನ್ನು ಸಾಬೀತುಪಡಿಸುವ ಸವಾಲು ರಾಹುಲ್‌ ಗಾಂಧಿ ಮುಂದಿದೆ.

ರಾಹುಲ್‌ ಹೇಳಿದ ಲೋಕಸಭಾ ಕ್ಷೇತ್ರ ಬೆಂಗಳೂರು ಸೆಂಟ್ರಲ್

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿ ಹಾಗೂ ಕಾಯಂ ಮತಗಳ ಆಧಾರದ ಮೇಲೆ ಗೆಲುವಿನ ಲೆಕ್ಕಾಚಾರ ಹಾಕಿತ್ತು. ಎಲ್ಲ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಯು ಮಹದೇವಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ದಿಢೀರ್‌ ಹಿನ್ನೆಡೆ ಅನುಭವಿಸಿ ಸೋತಿದ್ದರು. ಅನುಮಾನಗೊಂಡ ಕಾಂಗ್ರೆಸ್‌ ನಾಯಕರು, ಮಹಾದೇವಪುರ ಕ್ಷೇತ್ರದಲ್ಲಿ ಮತಗಳಿಕೆ ಕುರಿತು ಅಧ್ಯಯನ ನಡೆಸಿದ್ದರು.

ಮಹಾದೇವಪುರ ಕ್ಷೇತ್ರದ ಪ್ರತಿ ಬೂತ್‌ವಾರು ಕಾಂಗ್ರೆಸ್ ಅಧ್ಯಯನ ನಡೆಸಿ ಸಂಭಾವ್ಯ ಮತ ಗಳಿಕೆ ಹಾಗೂ ಮತದಾರರ ವಸ್ತುಸ್ಥಿತಿ ಕುರಿತು ಮಾಹಿತಿ ಕಲೆ ಹಾಕಿತ್ತು. ಆಗ ಅಲ್ಪಸಂಖ್ಯಾತರು, ದಲಿತರ ಮತಗಳಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ.

ಬಹುತೇಕ ದಲಿತ ಹಾಗೂ ಮುಸ್ಲಿಂ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಕಾಂಗ್ರೆಸ್ ಗೆ ಬರುವ ಮತದಾರರನ್ನು ಗಮನಿಸಿಯೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಜತೆಗೆ ಹೊಸದಾಗಿ ಮತಗಳನ್ನು ಸೇರ್ಪಡೆ ಮಾಡಲಾಗಿದೆ ಎಂಬ ಅಂಶ ಕಾಂಗ್ರೆಸ್ ಅಧ್ಯಯನದಿಂದ ಕಂಡು ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಇಷ್ಟು ದಿನ ಸುಮ್ಮನಿದ್ದಿದ್ದು ಏಕೆ?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತ ಕಳವು ನಡೆದಿರುವ ಕುರಿತು ಅಧ್ಯಯನ ನಡೆಸಿದ್ದ ಕಾಂಗ್ರೆಸ್‌ ನಾಯಕರು ಇಷ್ಟು ದಿನ ಏಕೆ ಸುಮ್ಮನಿದ್ದರು ಎಂಬ ಪ್ರಶ್ನೆ ಎದುರಾಗಿದೆ.

ಚುನಾವಣೆ ನಡೆದು 1 ವರ್ಷ ಮುಗಿದಿದೆ. ಇಲ್ಲಿಯವರೆಗೂ ಕಾಂಗ್ರೆಸ್‌ ನಾಯಕರು ಚಕಾರ ಎತ್ತಲಿಲ್ಲ. ಚುನಾವಣಾ ಆಯೋಗಕ್ಕೆ ದೂರು ನೀಡಲಿಲ್ಲ. ರಾಹುಲ್‌ ಗಾಂಧಿ ಆರೋಪಿಸಿದ ಬಳಿಕ ಅಧ್ಯಯನದ ಮಾಹಿತಿ ಬಹಿರಂಗಪಡಿಸಿರುವುದು ಏಕೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಕ್ಷೇತ್ರದ ಪ್ರತಿ ಬೂತ್‌ನಲ್ಲಿ ಅವರವರ ಪಕ್ಷದ ಏಜೆಂಟ್ ಹಾಗೂ ಮುಖಂಡರು ಇರುತ್ತಾರೆ. ಮತದಾನದ ಮುಂಚಿತವಾಗಿ ಮತದಾರರ ವಿವರ, ಬಿಟ್ಟು ಹೋದವರು, ಸೇರ್ಪಡೆಯಾದವರ ಮಾಹಿತಿ ಲಭ್ಯವಿರುತ್ತದೆ. ಆಗ ಕಾಂಗ್ರೆಸ್‌ ನಾಯಕರು ಏಕೆ ಆಕ್ಷೇಪಿಸಲಿಲ್ಲ ಎಂದಿದ್ದಾರೆ.

ಆರೋಪ ಸಾಬೀತುಪಡಿಸಲು ಸಾಧ್ಯವೇ?

ಮಹದೇವಪುರದಲ್ಲಿ ದಲಿತ ಹಾಗೂ ಮುಸ್ಲಿಂ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಇದನ್ನು ಹೇಗೆ ಸಾಬೀತು ಮಾಡಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಏಕೆಂದರೆ, ಕೇಂದ್ರ ಚುನಾವಣಾ ಆಯೋಗದ ಆಣತಿಯಂತೆ ಎಲ್ಲಾ ಪ್ರಕ್ರಿಯೆ ನಡೆದಿರುತ್ತದೆ. ಆಯೋಗದ ನಿರ್ದೇಶನವಿದ್ದರೂ ರಾಜ್ಯ ಸರ್ಕಾರದ ಅಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಾರೆ. ಮತದಾರರ ಸೇರ್ಪಡೆ, ತೆಗೆದುಹಾಕುವಿಕೆ ಪ್ರಕ್ರಿಯೆಯ ಎಲ್ಲಾ ಮಾಹಿತಿ ಸ್ಥಳೀಯ ಸರ್ಕಾರಕ್ಕೂ ಇರಲಿದೆ. ಹೀಗಿರುವಾಗ ಮತ ಕಳವು ಆಗಿದೆ ಎಂಬುದನ್ನು ಹೇಗೆ ಸಾಬೀತುಪಡಿಸಲಿದೆ. ಅದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 11.50 ಲಕ್ಷ ಪುರುಷರು ಹಾಗೂ 10.58 ಲಕ್ಷ ಮಹಿಳೆಯರು ಒಳಗೊಂಡು ಒಟ್ಟು 23.9 ಲಕ್ಷ ಮತದಾರರಿದ್ದಾರೆ. ಶೇ.3.95ರಷ್ಟು ಗ್ರಾಮೀಣ ಮತ್ತು ಶೇ.96.05 ರಷ್ಟು ಜನಸಂಖ್ಯೆ ನಗರ ಭಾಗದಲ್ಲಿದೆ.

ಅಲ್ಪಸಂಖ್ಯಾತ ಮತದಾರರು, ಭಾಷಾ ಅಲ್ಪಸಂಖ್ಯಾತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 6 ಲಕ್ಷ ತಮಿಳರು, 5 ಲಕ್ಷ ಮುಸ್ಲಿಮರು ಮತ್ತು ಸುಮಾರು 2 ಲಕ್ಷ ಕ್ರೈಸ್ತರು ಇದ್ದಾರೆ. ಬಲಿಜಿಗ, ಗೊಲ್ಲ, ಕುರುಬ, ತಿಗಳ, ವಿಶ್ವಕರ್ಮ, ಮಡಿವಾಳ, ಕಮ್ಮ ಇತ್ಯಾದಿ ಹಿಂದುಳಿದ ವರ್ಗದವರು ಸುಮಾರು 6 ಲಕ್ಷ ಜನರಿದ್ದಾರೆ. ಹಾಗಾಗಿ, ಯಾರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ, ಯಾರ ಮತ ಕಳವಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಕಾಂಗ್ರೆಸ್‌ ಪಕ್ಷಕ್ಕೆ ಸವಾಲಿನ ಕೆಲಸವಾಗಲಿದೆ.

ರಾಹುಲ್‌ ಗಾಂಧಿ ಅವರು ಮಾಡಿರುವ ಗುರುತರ ಆರೋಪದ ಬಗ್ಗೆ ಒಂದು ವಾರದಲ್ಲಿ ಸಾಕ್ಷಿ ಸಮೇತ ದಾಖಲೆ ತೆರೆದಿಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕರು ದೇಶದ ಜನರ ಎದುರು ತೀವ್ರ ಮುಜುಗರ ಅನುಭವಿಸುವಂತಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿ ಎಷ್ಟಿದೆ?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಎಂಟು ವಿಧಾನಸಭೆ ಕ್ಷೇತ್ರಗಳು ಬರಲಿವೆ. ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೂವರು ಬಿಜೆಪಿ ಶಾಸಕರಿದ್ದಾರೆ.

1.ಸರ್ವಜ್ಞನಗರ - ಕೆಜೆ ಜಾರ್ಜ್‌ - ಕಾಂಗ್ರೆಸ್

2. ಸಿವಿ ರಾಮನ್ ನಗರ - ಎಸ್.ರಘು - ಬಿಜೆಪಿ

3. ಶಿವಾಜಿನಗರ - ರಿಜ್ವಾನ್ ಅರ್ಷದ್‌ - ಕಾಂಗ್ರೆಸ್‌

4. ಶಾಂತಿ ನಗರ - ಎನ್ಎ ಹ್ಯಾರೀಸ್‌ - ಕಾಂಗ್ರೆಸ್

5. ಗಾಂಧಿ ನಗರ - ದಿನೇಶ್ ಗುಂಡೂರಾವ್ - ಕಾಂಗ್ರೆಸ್

6. ರಾಜಾಜಿ ನಗರ - ಎಸ್.ಸುರೇಶ್ ಕುಮಾರ್‌ - ಬಿಜೆಪಿ

7. ಚಾಮರಾಜಪೇಟೆ - ಜಮೀರ್ ಅಹಮದ್‌ - ಕಾಂಗ್ರೆಸ್

8. ಮಹದೇವಪುರ - ಮಂಜುಳಾ ಅರವಿಂದ ಲಿಂಬಾವಳಿ - ಬಿಜೆಪಿ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಬೆನ್ನಲ್ಲೇ ಆರೋಪ

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಗದ್ದಲದ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಈ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಇಲ್ಲಿಯವರೆಗೆ 52 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ವಿಳಾಸಗಳಲ್ಲಿ ಇರಲಿಲ್ಲ. 18 ಲಕ್ಷ ಮತಗಳು ಮೃತಪಟ್ಟವರ ಹೆಸರಿನಲ್ಲಿವೆ ಎಂಬ ಸ್ಫೋಟಕ ವಿಚಾರ ಬಹಿರಂಗವಾಗಿತ್ತು.

ಈ ಕುರಿತು ಮಾತನಾಡುವ ವೇಳೆ ರಾಹುಲ್‌ ಗಾಂಧಿ ಅವರು, ಮಹಾರಾಷ್ಟ್ರದಲ್ಲಿ ಹೇಗೆ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬುದನ್ನು ತೋರಿಸಿದ್ದೆವು. ಈಗ ಅದೇ ರೀತಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲೂ ಮತ ಕಳವು ನಡೆದಿದೆ. ನಾವು ಕಳೆದ ಆರು ತಿಂಗಳಿಂದ ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಡಿಜಿಟಲೀಕರಣ ಮಾಡಿದ್ದು, ಇದರಲ್ಲಿಆಯೋಗದ ಕಳ್ಳಾಟ ಬಯಲಾಗಿದೆ ಎಂದು ಆರೋಪಿಸಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಒಂಬತ್ತು ಸ್ಥಾನ ಗೆದ್ದರೆ, ಬಿಜೆಪಿ 17 ಸ್ಥಾನಗಳನ್ನು ಪಡೆದಿತ್ತು. ಪಂಚರಾಜ್ಯಗಳ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ರಾಹುಲ್‌ ಗಾಂಧಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಆಯೋಗ , ರಾಹುಲ್‌ ಗಾಂಧಿ ಹೇಳಿಕೆ ನಿರಾಧಾರ, ಜನರನ್ನು ದಿಕ್ಕು ತಪ್ಪಿಸುವಂತದ್ದು ಎಂದು ಕಿಡಿಕಾರಿತ್ತು.




Read More
Next Story