ಮೋದಿಯಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದರೂ ಆಯೋಗದ ಕ್ರಮವಿಲ್ಲ:  ಪರಕಾಲ ಪ್ರಭಾಕರ್
x
“ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು” ಜನಾಭಿಪ್ರಾಯದ ರಕ್ಷಣೆಗೆ ಜನಕಾರ್ಯಾಚರಣೆ ಎನ್ನುವ ಸಮಾಲೋಚನಾ ಸಭೆಯಲ್ಲಿ ಪರಕಾಲ ಪ್ರಭಾಕರ್ ಮಾತನಾಡಿರು.

ಮೋದಿಯಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದರೂ ಆಯೋಗದ ಕ್ರಮವಿಲ್ಲ: ಪರಕಾಲ ಪ್ರಭಾಕರ್

ಚುನಾವಣಾ ಆಯೋಗವು ಸಂವಿಧಾನಕ್ಕೆ ಬದ್ಧವಾಗಿರಬೇಕೇ ಹೊರತು, ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಅಲ್ಲ. ಚುನಾವಣಾ ಆಯೋಗ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ದೇಶದ ಜನ ಗಮನಿಸುತ್ತಿದ್ದಾರೆ. ಡಿಜಿಟಲ್‌ ಆರ್ಮಿ ಈಗ ಸಶಕ್ತವಾಗಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞಪರಕಾಲ ಪ್ರಭಾಕರ್ ಹೇಳಿದ್ದಾರೆ.


ʻಚುನಾವಣಾ ಆಯೋಗವು ಸಂವಿಧಾನಕ್ಕೆ ಬದ್ಧವಾಗಿರಬೇಕೇ ಹೊರತು, ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಅಲ್ಲ. ಚುನಾವಣಾ ಆಯೋಗ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ದೇಶದ ಜನ ಗಮನಿಸುತ್ತಿದ್ದಾರೆʼ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ಮಂಗಳವಾರ ಆಯೋಜಿಸಿದ್ದ “ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು” ಜನಾಭಿಪ್ರಾಯದ ರಕ್ಷಣೆಗೆ ಜನಕಾರ್ಯಾಚರಣೆ ಎನ್ನುವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ʻಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗುತ್ತಿದೆ. ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೆಲವು ಮಾಧ್ಯಮಗಳು ತಮ್ಮಿಷ್ಟದಂತೆ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಆದರೆ, ಚುನಾವಣಾ ಆಯೋಗ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಚುನಾವಣಾ ಆಯೋಗವು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಬೇಕು ಹಾಗೂ ಎಲ್ಲರೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಗಮನಿಸುತ್ತಿರುತ್ತಾರೆ ಎನ್ನುವ ಅರಿವು ಇರಬೇಕುʼ ಎಂದರು.

ʻಆಯೋಗವು ನಿಖರವಾದ ಮಾಹಿತಿಯನ್ನು ಜನರಿಗೆ ನೀಡುತ್ತಿಲ್ಲ. ಮತದಾನದ ದತ್ತಾಂಶವನ್ನು ನೀಡುತ್ತಿಲ್ಲ. ವಿರೋಧ ಪಕ್ಷದ ನಾಯಕರು ಆಯೋಗಕ್ಕೆ ಪತ್ರ ಬರೆದರೆ, ಅದಕ್ಕೆ ಸಮಾಧಾನವಾಗಿ ಉತ್ತರಿಸುವ ಬದಲು, ಬೆದರಿಕೆಯ ಧ್ವನಿಯಲ್ಲಿ ಉತ್ತರ ನೀಡಲಾಗುತ್ತಿದೆ. ಈ ರೀತಿಯ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿರ್ದಿಷ್ಟ ವಿಷಯಗಳ ಆಧಾರದ ಮೇಲೆ ನಾಗರಿಕ ಸಮಾಜ ಸವಾಲೊಡ್ಡಬೇಕು. ಕೆಲವು ಪ್ರದೇಶದಲ್ಲಿ ನೂರು ಜನ ಮತದಾನ ಮಾಡಿದರೆ 150 ಜನ ಮತದಾನ ಮಾಡಿದ್ದಾರೆ ಎನ್ನುವ ಅಂಕಿ – ಅಂಶಗಳು ಬಂದಿವೆ. ಇನ್ನೂ ಕೆಲವು ಕಡೆ ಮತದಾನದ ಪ್ರಮಾಣದ ವಿವರವನ್ನು ವಿಳಂಬವಾಗಿ ನೀಡಲಾಗಿದೆ. ಇದೆಲ್ಲವನ್ನೂ ನಾಗರಿಕ ಸಮಾಜ ಪ್ರಶ್ನೆ ಮಾಡಬೇಕುʼ ಎಂದು ಒತ್ತಾಯಿಸಿದರು.

ʻಅಂತಿಮವಾಗಿ ಜನರ ಇಚ್ಛೆಯೇ ಅಂತಿಮವಾಗಬೇಕು ಮತ್ಯಾರದೂ ಅಲ್ಲʼ ಎಂದು ಹೇಳಿದರು.

ಡಿಜಿಟಲ್ ಆರ್ಮಿ ಸಶಕ್ತವಾಗಿದೆ

ಸಭೆಯಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ಗಂಭೀರವಾಗಿ ಪ್ರಸಾರ ಮಾಡುತ್ತಿಲ್ಲ. ಹೀಗಾಗಿ, ಈ ವಿಷಯಗಳು ಜನರನ್ನು ಮುಟ್ಟಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪರಕಾಲ ಪ್ರಭಾಕರ್ ಅವರು, “ದೇಶದಲ್ಲಿ ಈಗ ಮುಖ್ಯಭೂಮಿಕೆಯ ಮಾಧ್ಯಮಗಳನ್ನಷ್ಟೇ ನಂಬುವ ಸ್ಥಿತಿಯಲ್ಲಿ ಜನ ಇಲ್ಲ. ಈಗ ಡಿಜಿಟಲ್ ಆರ್ಮಿ ಸಶಕ್ತವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಯೂಟ್ಯೂಬ್ ನ ಮೂಲಕವೂ ಮಾಹಿತಿ ಪಡೆಯುತ್ತಿದ್ದಾರೆʼ ಎಂದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ʻಸರ್ವಾಧಿಕಾರಿಗಳು ಪ್ರಜಾಪ್ರಭುತ್ವಕ್ಕೆ ಗೌರವ ನೀಡುತ್ತಿಲ್ಲ. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು. ನಾವು ಐದು ಅಂಶಗಳ ಆಧಾರದ ಮೇಲೆ ಜಾಗೃತಿ ಸಮಾಲೋಚನಾ ಸಭೆಯನ್ನು ದೇಶದಾದ್ಯಂತ ಆಯೋಜಿಸುತ್ತಿದ್ದೇವೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ನಾವು ಅವಕಾಶ ನೀಡುವುದಿಲ್ಲ. ಇದೇ 28ರಂದು ದೆಹಲಿಯಲ್ಲೂ ಸಮಾಲೋಚನಾ ಸಭೆ ನಡೆಯಲಿದೆʼ ಎಂದರು.

ಐದು ಅಂಶಗಳು

ʻಐದು ಅಂಶಗಳನ್ನು ಸಿದ್ಧಪಡಿಸಿಕೊಂಡಿದ್ದು ಈ ಅಂಶಗಳ ಮೇಲೆ ಯೋಜನೆ ರೂಪಿಸಿಕೊಳ್ಳುತ್ತಿದ್ದೇವೆʼ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ʻರಾಷ್ಟ್ರಪತಿಗೆ ಪತ್ರ ಬರೆದು ಸಂವಿಧಾನ ಉಳಿವಿಗೆ ಕೆಲಸ ಮಾಡುವಂತೆ ಮನವಿ ಮಾಡಲಿದ್ದೇವೆ. ಈಗ ದೇಶದಲ್ಲಿ ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಿದ್ದು, ಸ್ಪಂದಿಸುವಂತೆ ಮನವಿ ಮಾಡುತ್ತೇವೆ. ಲೋಕಸಭೆ ಚುನಾವಣೆ ಫಲಿತಾಂಶದ ವರೆಗೆ ನಾಗರಿಕ ಸಮಾಜದಿಂದ ಮೇಲ್ವಿಚಾರಣೆ (ಗಮನ) ನಡೆಯಲಿದೆ. ಮುಂದೆ ಪ್ರಜಾತಂತ್ರ ವ್ಯವಸ್ಥೆಯು ಜನರ ವಿರುದ್ಧವಾಗಿ ನಡೆದರೆ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ. ಯಾವುದೇ ಕಾರಣಕ್ಕೂ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲʼ ಎಂದರು.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಮಾತನಾಡಿ, ʻಚುನಾವಣಾ ಆಯೋಗವು ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ. ಮತದಾನದ ಪ್ರಮಾಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿಖರ ಮಾಹಿತಿ ನೀಡುತ್ತಿಲ್ಲ. ವಿವರವನ್ನು ತಡವಾಗಿ ಪ್ರಕಟಿಸುತ್ತಿದೆ. ಇನ್ನು ಈ ಸಮಾಲೋಚನಾ ಸಭೆಯನ್ನು ನಾವು ಮೂರು ತಿಂಗಳಿನಿಂದ ನಡೆಸುತ್ತಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುವ ವರೆಗೂ ಜಾಗೃತಿ ಅಭಿಯಾನ ನಡೆಯಲಿದೆʼ ಎಂದರು.

ʻಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸೋತಿದ್ದು, ಅವರ ಮಾನಸಿಕ ಸ್ಥಿತಿಯ ಬಗ್ಗೆ ಅರಿವಿರುವುದರಿಂದ, ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾದ ನಂತರ ಅವರು ಯಾವ ರೀತಿ ವರ್ತಿಸಲಿದ್ದಾರೆ ಎನ್ನುವ ಬಗ್ಗೆ ನಮಗೆ ಆತಂಕವಿದೆʼ ಎಂದು ಭಾಷಾ ಶಾಸ್ತ್ರಜ್ಞ ಎಂ.ಗಣೇಶ್ ದೇವಿ ಕಳವಳ ವ್ಯಕ್ತಪಡಿಸಿದರು.

ʻಚುನಾವಣಾ ಫಲಿತಾಂಶದ ನಂತರದಲ್ಲಿ ರಾಷ್ಟ್ರಪತಿಗಳು ಕುದುರೆ ವ್ಯಾಪಾರಕ್ಕೆ (ಶಾಸಕರನ್ನು ಖರೀದಿಸುವುದು ಅಥವಾ ಅವರ ಪಕ್ಷಕ್ಕೆ ಸೆಳೆಯಲು) ಅವಕಾಶ ನೀಡುವ ಸಾಧ್ಯತೆ ಇದೆ. ಇಂಡಿಯಾ ಮೈತ್ರಿಕೂಟದ ಹೊರತಾದ ಪಕ್ಷಗಳಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡುವ ಸಾಧ್ಯತೆಯೂ ಇದೆʼ ಎಂದು ಹೇಳಿದರು.

ʻಇಂಡಿಯಾ ಮೈತ್ರಿಕೂಟದ ಸಂಯೋಜಕ ಗುರುದೀಪ್ ಸಂಫಾಲ್ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಕೌಂಟರ್ ನರೇಟಿವ್ ಎನ್ನುವುದೇ ರಚನೆಯಾಗಲಿಲ್ಲ ಎಂದು ಹೇಳಿದ್ದರು. ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ. ದೇಶದಲ್ಲಿ ಕೌಂಟರ್ ನರೇಟಿವ್ ಬೃಹತ್ ಪ್ರಮಾಣದಲ್ಲಿ ಇದೆ. ಕೆಲವು ಕಡೆ ಕಾಣಿಸುತ್ತಿದೆ ಇನ್ನೂ ಕೆಲವು ಕಡೆ ಕಾಣಿಸುತ್ತಿಲ್ಲ ಇಷ್ಟೇ ವ್ಯತ್ಯಾಸʼ ಎಂದು ಹೇಳಿದರು.

ಸಮಾಲೋಚನಾ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ರೈತ ಸಂಘಟನೆಗಳು, ಜನಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಸೇರಿದಂತೆ ಹಲವರು ಭಾಗವಹಿಸಿದ್ದರು.

Read More
Next Story