ಚುನಾವಣೆ- 2024 | ಮಲೆನಾಡಿನ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲಾಟ
x

ಚುನಾವಣೆ- 2024 | ಮಲೆನಾಡಿನ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲಾಟ


ಲೋಕಸಭಾ ಚುನಾವಣೆಯ ಅಖಾಡ ಸಿದ್ಧವಾಗುತ್ತಿದೆ. ಇನ್ನು ಒಂದೆರಡು ದಿನಗಳಲ್ಲಿ ಬಹುತೇಕ ಎರಡೂ ಪಕ್ಷಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ಆಕಾಂಕ್ಷಿಗಳ ಎದೆಬಡಿತ ವೇಗ ಪಡೆಯತೊಡಗಿದೆ.

ಈ ನಡುವೆ ಮಲೆನಾಡಿನ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲೇ ಅಭ್ಯರ್ಥಿಗಳನ್ನು ಘೋಷಿಸುವ ಸೂಚನೆ ಸಿಗುತ್ತಿದ್ದಂತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಬೆಂಗಳೂರಿನಲ್ಲಿ ಡೇರೆ ಹಾಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ರಾಜ್ಯ ಪ್ರಮುಖರ ಮೇಲೆ ಒತ್ತಡ ಹೇರುವ ಯತ್ನ ಬಿರುಸುಗೊಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರಿನಲ್ಲಿ ಇಬ್ಬರ ಪೈಪೋಟಿ

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ಚಿಕ್ಕಮಗಳೂರಿನ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಅವರು ಪೈಪೋಟಿಯ ಮುಂಚೂಣಿಯಲ್ಲಿದ್ದಾರೆ.

ಆ ಪೈಕಿ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಕಾಂಗ್ರೆಸ್ಸಿನ ಸಂಭಾವ್ಯರ ಪಟ್ಟಿಯಲ್ಲಿದೆ ಎಂಬ ವಿಷಯ ಸಾಕಷ್ಟು ಪ್ರಚಾರ ಪಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೆಗ್ಡೆ ಅವರನ್ನು ಕಣಕ್ಕಿಳಿಸಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವರ ಪಕ್ಷದಲ್ಲೇ ಇರುವ ಪ್ರಬಲ ವಿರೋಧದ ಅಲೆಯನ್ನು ಸದುಪಯೋಗಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎಂಬ ಚರ್ಚೆ ಕೇಳಿಬಂದಿತ್ತು. ಆದರೆ, ಬುಧವಾರ ಚಿಕ್ಕಮಗಳೂರು ಮತ್ತು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಹಾಲಿ ಶಾಸಕರು, ಮಾಜಿ ಸಚಿವರು ಕಾಂಗ್ರೆಸ್ನ ಪ್ರಮುಖರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುಧೀರ್ ಕುಮಾರ್ ಮುರೊಳ್ಳಿ ಪರ ವಕಾಲತು ವಹಿಸಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯಿಂದಲೂ ಟಿಕೆಟ್ ಕೋರುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲೂ ಇದ್ದಾರೆ. ಹಾಗಾಗಿ ಅವರ ಬದಲಿಗೆ ಯುವ ನಾಯಕ ಹಾಗೂ ಸ್ಥಳೀಯವಾಗಿ ಉಭಯ ಜಿಲ್ಲೆಯಲ್ಲಿ ಜನಪ್ರಿಯರಾಗಿರುವ ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ನಿಯೋಗ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದೆ. ನಿಯೋಗದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕಿಮ್ಮನೆ ರತ್ನಾಕರ್, ಹಾಲಿ ಶಾಸಕರಾದ ಟಿ ಡಿ ರಾಜೇಗೌಡ, ಉದಯಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ, ರಮೇಶ್ ಕಾಂಚನ್, ದೀಪಕ್ ಕೋಟ್ಯಾನ್ ಮತ್ತಿತರ ೫೦ಕ್ಕೂ ಹೆಚ್ಚು ಮಂದಿ ಇದ್ದರು.

ಮತ್ತೊಂದು ಕಡೆ, ಜಯಪ್ರಕಾಶ್ ಹೆಗ್ಡೆ ಅವರು ಈವರೆಗೆ ತಮ್ಮ ಸ್ಪರ್ಧೆಯ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿಲ್ಲ. ಅವರು ಈಗಲೂ ಬಿಜೆಪಿ ಪಕ್ಷದಲ್ಲೇ ಗುರುತಿಸಿಕೊಂಡಿದ್ದಾರೆ. ಆದರೆ, ಇನ್ನೊಂದು ವಾರದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವೆ. ರಾಜಕೀಯದಲ್ಲಿ ಮುಂದುವರಿಯಬೇಕೆ? ಬೇಡವೇ? ಎಂಬುದನ್ನು ನಿರ್ಧರಿಸುವೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಹಿಂದೆ 2012ರಿಂದ 2014ವರೆಗೆ ಅವರು ಕ್ಷೇತ್ರದ ಸಂಸದರಾಗಿದ್ದರು. ಸಂಸದರಾಗಿದ್ದ ಡಿ ವಿ ಸದಾನಂದ ಗೌಡರು ರಾಜೀನಾಮೆ ನೀಡಿ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೆಗ್ಡೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು.

ಶಿವಮೊಗ್ಗದಲ್ಲೂ ಗೊಂದಲ, ಅಸಮಾಧಾನ

ಮಲೆನಾಡಿನ ಮತ್ತೊಂದು ಲೋಕಸಭಾ ಕ್ಷೇತ್ರ ಶಿವಮೊಗ್ಗದ ವಿಷಯದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಒಮ್ಮತವಿಲ್ಲ. ವಾಸ್ತವವಾಗಿ ಉಸ್ತುವಾರಿ ಸಚಿವರಾಗಿರುವ ಸೊರಬ ಶಾಸಕ ಮಧು ಬಂಗಾರಪ್ಪ ಅವರು ತಮ್ಮ ಹಿರಿಯ ಸಹೋದರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರೇ ಈ ಬಾರಿ ಮತ್ತೆ ಕಣಕ್ಕೆ ಇಳಿಯಲಿದ್ದಾರೆ ಎಂದು ಪರೋಕ್ಷ ಘೋಷಣೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಗೀತಾ ಮತ್ತು ಶಿವರಾಜ್ ಕುಮಾರ್ ಅವರನ್ನು ವೇದಿಕೆ ಹತ್ತಿಸಿ, ಅವರಿಂದ ಪರೋಕ್ಷ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಡಿಸಿಯೂ ಬಿಟ್ಟಿದ್ದಾರೆ.

ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೀತಾ ಅವರು ಬಿ ಎಸ್ ಯಡಿಯೂರಪ್ಪ ವಿರುದ್ಧ ಕೇವಲ 2.40 ಲಕ್ಷ ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಜೊತೆಗೆ ಆ ಸೋಲಿನ ಬಳಿಕ ಅವರು ಕ್ಷೇತ್ರ ಮತ್ತು ರಾಜಕಾರಣದಿಂದ ಬಹುತೇಕ ದೂರವೇ ಉಳಿದಿದ್ದರು. ಕಳೆದ ವರ್ಷದ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಪರ್ಕವಿಲ್ಲದ ಗೀತಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಮೂಲ ಕಾಂಗ್ರೆಸ್ಸಿಗರಿಗೆ ಒಮ್ಮತವಿಲ್ಲ. ಹಾಗಾಗಿ ಪಕ್ಷದ ಜಿಲ್ಲಾ ಮಟ್ಟದ ನಾಯಕರಲ್ಲಿ ಬಹಳಷ್ಟು ಮಂದಿ ಮಧು ಅವರ ಏಕಪಕ್ಷೀಯ ನಿರ್ಧಾರದ ವಿಷಯದಲ್ಲಿ ಅಸಮಾಧಾನಗೊಂಡಿದ್ದಾರೆ. ಚುನಾವಣೆ ವಿಷಯವಷ್ಟೇ ಅಲ್ಲದೆ, ಸಚಿವರಾದ ಬಳಿಕ ಅವರು ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎಲ್ಲಾ ವಿಷಯದಲ್ಲೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಅತೃಪ್ತಿಯ ಮಾತುಗಳು ಕೇಳಿಬರುತ್ತಿವೆ.

ಈ ಅಸಮಾಧಾನ ಇದೀಗ ಮತ್ತೊಂದು ಮಜಲಿಗೆ ಹೊರಳಿದ್ದು, ಮೂಲ ಕಾಂಗ್ರೆಸ್ಸಿಗರು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತಂದು ಚುನಾವಣಾ ಕಣಕ್ಕಿಳಿಸುವ ಪ್ರಯತ್ನ ನಡೆಸಿದ್ದಾರೆ. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಂತೂ ಅದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಅವರ ಜೊತೆಗೆ ಪಕ್ಷದ ಹಿರಿಯ ನಾಯಕರೂ ಕುಮಾರ್ ಪರ ಒಲವು ಹೊಂದಿದ್ದಾರೆ. ಜಾತಿ ಬಲದ ಜೊತೆಗೆ ವ್ಯಕ್ತಿಗತ ಸಜ್ಜನಿಕೆ ಮತ್ತು ಗ್ಲಾಮರ್ ಕೂಡ ಕುಮಾರ್ ಪರ ಇವೆ. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿರುವ ಕುಮಾರ್, ಕೂಡ ಕಾಂಗ್ರೆಸ್ ನತ್ತ ಮುಖ ಮಾಡಿದ್ದು, ಪಕ್ಷದ ರಾಜ್ಯಾದ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಕೂಡ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಮಧು ಬಂಗಾರಪ್ಪ ಮಾತ್ರ ಕುಮಾರ್ ವಿಷಯದಲ್ಲಿ ಹಳೆಯ ವ್ಯಕ್ತಿಗತ ವಿರೋಧವನ್ನೇ ಸಾಧಿಸುತ್ತಿದ್ದು, ಯಾವ ಕಾರಣಕ್ಕೂ ಕುಮಾರ್ ಪಕ್ಷಕ್ಕೆ ಬರದಂತೆ ನೋಡಿಕೊಳ್ಳುವ ತಂತ್ರವಾಗಿಯೇ ಪಕ್ಷದ ಅಧಿಕೃತ ಘೋಷಣೆಗೂ ಮುನ್ನವೇ ಗೀತಾ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ದು ಅವರೇ ಲೋಕಸಭಾ ಅಭ್ಯರ್ಥಿ ಎಂಬಂತೆ ಬಿಂಬಿಸಿದ್ದಾರೆ. ಹಾಗೆ ಅವರು ಬಿಂಬಿಸಿದ ಬಳಿಕ ಪಕ್ಷದ ಜಿಲ್ಲಾ ಘಟಕದಲ್ಲಿ ಅವರ ನಡೆಯ ಕುರಿತು ಇದ್ದ ಅಸಮಾಧಾನ ಇನ್ನಷ್ಟು ಭುಗಿಲೆದ್ದಿದೆ ಎಂಬುದು ಪಕ್ಷದ ಆಂತರಿಕ ವಲಯದ ಮಾತು.

ಒಟ್ಟಾರೆ, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಸಾಧ್ಯತೆ ಇದ್ದು, ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

ಆದರೆ, ಸದ್ಯಕ್ಕಂತೂ ಶಿವಮೊಗ್ಗ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳೆರಡಲ್ಲೂ ಕಾಂಗ್ರೆಸ್ ವಲಯದಲ್ಲಿ ಭಾರೀ ಮೇಲಾಟಗಳು ಬಿರುಸುಗೊಂಡಿವೆ.

Read More
Next Story