Elderly Woman Murdered Over Gold Ornaments After Being Lured With Kajjaya Treat
x

ಕೊಲೆಯಾದ ದುರ್ದೈವಿ ಭದ್ರಮ್ಮ, ಆರೋಪಿ ನೆರೆಮನೆಯ ನಿವಾಸಿ ದೀಪಾ

ಕಜ್ಜಾಯದ ಆಸೆ ತೋರಿಸಿ ವೃದ್ಧೆಯ ಕೊಲೆ: ಆಭರಣ ದೋಚಿ, ಶವವನ್ನು ಕೆರೆಗೆ ಎಸೆದ ನೆರೆಮನೆ ಮಹಿಳೆ!

ಕೂಗೂರು ಗ್ರಾಮದ ನಿವಾಸಿ ಭದ್ರಮ್ಮ (68) ಕೊಲೆಯಾದ ದುರ್ದೈವಿ. ಇದೇ ಗ್ರಾಮದ, ನೆರೆಮನೆಯ ನಿವಾಸಿ ದೀಪಾ (35) ಕೊಲೆಗೈದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.


Click the Play button to hear this message in audio format

ಹಬ್ಬಕ್ಕೆ ಕಜ್ಜಾಯ ಕೊಡುವುದಾಗಿ ನಂಬಿಸಿ ವೃದ್ಧೆಯೊಬ್ಬರನ್ನು ಮನೆಗೆ ಕರೆದು, ಅವರ ಮೈಮೇಲಿದ್ದ ಚಿನ್ನಾಭರಣಕ್ಕಾಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರಿನಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಆರೋಪಿ ಮಹಿಳೆ ಕೊಲೆಯ ನಂತರ ಎರಡು ದಿನಗಳ ಕಾಲ ಶವವನ್ನು ಮನೆಯಲ್ಲೇ ಇಟ್ಟುಕೊಂಡು, ನಂತರ ಕೆರೆಗೆ ಎಸೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಕೂಗೂರು ಗ್ರಾಮದ ನಿವಾಸಿ ಭದ್ರಮ್ಮ (68) ಕೊಲೆಯಾದ ದುರ್ದೈವಿ. ಇದೇ ಗ್ರಾಮದ, ನೆರೆಮನೆಯ ನಿವಾಸಿ ದೀಪಾ (35) ಕೊಲೆಗೈದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

ಘಟನೆಯ ಹಿನ್ನೆಲೆ

ಕಳೆದ ಅಕ್ಟೋಬರ್ 30ರಂದು ಮಧ್ಯಾಹ್ನದಿಂದ ಭದ್ರಮ್ಮ ಅವರು ಕಾಣೆಯಾಗಿದ್ದರು. ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದಿದ್ದಾಗ, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕರಪತ್ರಗಳನ್ನು ಹಂಚಿ ವೃದ್ಧೆಯ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.

ತನಿಖೆಯ ವೇಳೆ, ನವೆಂಬರ್ 6ರಂದು, ಭದ್ರಮ್ಮ ಅವರು ಕೊನೆಯದಾಗಿ ಆರೋಪಿ ದೀಪಾಳ ಮನೆಯ ಕಡೆಗೆ ಹೋಗಿದ್ದರು ಎಂಬ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ದೀಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ಭದ್ರಮ್ಮ ಅವರ ಬಳಿ ಇದ್ದ ಚಿನ್ನದ ಸರಕ್ಕಾಗಿ ಅವರನ್ನು ಹಬ್ಬದ ನೆಪದಲ್ಲಿ ಮನೆಗೆ ಕರೆದು ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

ಎರಡು ದಿನ ಮನೆಯಲ್ಲೇ ಇಟ್ಟಿದ್ದಳು ಶವ!

ಭದ್ರಮ್ಮಳನ್ನು ಕೊಂದ ನಂತರ, ದೀಪಾ ಶವವನ್ನು ಒಂದು ಮೂಟೆಯಲ್ಲಿ ಕಟ್ಟಿ ಎರಡು ದಿನಗಳ ಕಾಲ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಳು. ಶವ ಕೊಳೆತು ವಾಸನೆ ಬರಲಾರಂಭಿಸಿದಾಗ, ಅದನ್ನು ಮತ್ತೊಂದು ಚೀಲಕ್ಕೆ ಹಾಕಿ, ತನ್ನ ಮಗನ ಸಹಾಯದಿಂದ ದೊಡ್ಡತಿಮ್ಮಸಂದ್ರ ಕೆರೆಯ ಬಳಿಯ ಪೊದೆಯೊಂದರಲ್ಲಿ ಎಸೆದು ಬಂದಿದ್ದಳು. ನಂತರ, ಏನೂ ತಿಳಿಯದವಳಂತೆ ಗ್ರಾಮಸ್ಥರೊಂದಿಗೆ ಓಡಾಡಿಕೊಂಡಿದ್ದಳು.

ಸರ್ಜಾಪುರ ಇನ್ಸ್‌ಪೆಕ್ಟರ್ ನವೀನ್ ನೇತೃತ್ವದ ಪೊಲೀಸ್ ತಂಡವು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿ ದೀಪಾಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಮೃತದೇಹವನ್ನು ಪೊದೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Read More
Next Story