
ದಂಪತಿ ಜಗಳ ಬಿಡಿಸಲು ಹೋಗಿದ್ದ ವೃದ್ಧನ ದುರಂತ ಸಾವು; ಚಿಕ್ಕಬಳ್ಳಾಪುರದಲ್ಲಿ ಮನಕಲಕುವ ಘಟನೆ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಅಕ್ಕಪಕ್ಕದ ಮನೆಯ ದಂಪತಿ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಮಧ್ಯಪ್ರವೇಶಿಸಿದ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಗುರಂಪಲ್ಲಿ ಗ್ರಾಮದಲ್ಲಿ ವರದಿಯಾಗಿದೆ. 'ಬೋರ್‌ವೆಲ್ ನಾರಾಯಣಸ್ವಾಮಿ' (67) ಎಂಬವರೇ ಮೃತಪಟ್ಟವರು.
ಗುರಂಪಲ್ಲಿ ಗ್ರಾಮದ ನಿವಾಸಿಗಳಾದ ಮಧು ಮತ್ತು ಶೈಲಾ ದಂಪತಿ ನಡುವೆ ಕೌಟುಂಬಿಕ ಕಾರಣಗಳಿಂದ ಕಲಹ ಏರ್ಪಟ್ಟಿತ್ತು. ಇವರ ಜಗಳ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ನೆರೆಮನೆಯ ನಿವಾಸಿ ನಾರಾಯಣಸ್ವಾಮಿ ಅವರು, ಸದುದ್ದೇಶದಿಂದ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ನಡೆದ ನೂಕಾಟ-ತಳ್ಳಾಟದಲ್ಲಿ ನಾರಾಯಣಸ್ವಾಮಿ ಅವರು ಆಯತಪ್ಪಿ ಬಿದ್ದಿದ್ದಾರೆ.
ನೂಕಾಟದಲ್ಲಿ ಆಯತಪ್ಪಿದ ನಾರಾಯಣಸ್ವಾಮಿ ಅವರು ಮನೆಯ ಮುಂಭಾಗದ ಗೇಟ್‌ಗೆ ರಭಸವಾಗಿ ಅಪ್ಪಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಲೆಯ ಹಿಂಬದಿಗೆ ಬಲವಾದ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವ ಮತ್ತು ಪೆಟ್ಟಿನ ಆಘಾತದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

