ಚರ್ಚ್‌ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ: ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ
x
ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸುತ್ತಿರುವ ಧರ್ಮಗುರು

ಚರ್ಚ್‌ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ: ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ

ʼಮನೆ ಆಶಿರ್ವಾದʼಕ್ಕೆ ತೆರಳಿದ್ದ ಚರ್ಚ್‌ ಧರ್ಮಗುರುವೊಬ್ಬರು ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಘಟನೆ ಕುರಿತಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.


ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯ ಪರಿಯಾಲ್ತಡ್ಕ ಗ್ರಾಮದಲ್ಲಿ ವೃದ್ಧ ದಂಪತಿ ಮೇಲೆ ಚರ್ಚ್‌ ಧರ್ಮಗುರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಧರ್ಮಗುರುವಿನ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಘಟನೆ ಕುರಿತಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಫಾದರ್‌ ನೆಲ್ಸನ್ ಒಲಿವೆರಾ ಅವರು ಫೆಬ್ರವರಿ 29 ರಂದು ʼಮನೆ ಆಶಿರ್ವಾದʼ(House Blessing) ಗಾಗಿ ಜಾರ್ಜ್ ಮಾಂತೇರಿಯೋ (79) ಮತ್ತು ಅವರ ಪತ್ನಿ ಫಿಲೋಮಿನಾ (72) ಅವರ ಮನೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.

ವೃದ್ಧ ದಂಪತಿ ಹಾಗೂ ಧರ್ಮಗುರು ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲೇ ಮನಸ್ತಾಪವಿತ್ತು ಎನ್ನಲಾಗಿದೆ. ಸಂತ್ರಸ್ತ ದಂಪತಿ ಮಾತ್ರವಲ್ಲದೆ ಚರ್ಚ್‌ನ ಇತರೆ ಭಕ್ತರೊಂದಿಗೂ ಧರ್ಮಗುರುವಿಗೆ ಉತ್ತಮ ಸಂಬಂಧವಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಈಸ್ಟರ್‌ಗೂ ಮುನ್ನ ʼಕಪ್ಪು ತಿಂಗಳʼಲ್ಲಿ ಮನೆ ಮನೆಗೆ ಭೇಟಿ ನೀಡಿ ಆಶೀರ್ವದಿಸುವ ಸಂಪ್ರದಾಯ ಕ್ರೈಸ್ತರಲ್ಲಿದ್ದು, ಈ ವೇಳೆ ಘಟನೆ ನಡೆದಿದೆ.

ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯವು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಬಿಷಪ್ ಸಂಬಂಧಪಟ್ಟ ಪಾದ್ರಿಯನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದುವರೆಗೂ ಆರೋಪಿಯ ಬಂಧನ ನಡೆದಿಲ್ಲ ಎಂದು ವಿಟ್ಲ ಪೊಲೀಸ್‌ ಠಾಣೆ ಮೂಲಗಳು ತಿಳಿಸಿವೆ.

ಮನೆಯ ಹೊರಗೆ ವೃದ್ಧ ದಂಪತಿ ಜೊತೆ ವಾಗ್ವಾದ ನಡೆಸಿದ ಬಳಿಕ ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಘಟನೆ ಕುರಿತು ʼದಿ ಫೆಡೆರಲ್‌ ಕರ್ನಾಟಕʼ ದ ಜೊತೆಗೆ ಮಾತನಾಡಿದ ಮಂಗಳೂರು ಕ್ಯಾಥೋಲಿಕ್‌ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೊನಾಲ್ಡ್ ಕ್ಯಾಸ್ಟೆಲಿನೊ (Ronald Castelino) ಘಟನೆ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ನೊಂದವರೊಂದಿಗೆ ಕ್ಷಮೆಯನ್ನು ಯಾಚಿಸಿದ ಧರ್ಮಪ್ರಾಂತ್ಯವು ಕಾನೂನಿಗೆ ತಲೆಬಾಗಿ ಎಲ್ಲ ಪ್ರಕ್ರಿಯೆಗಳಿಗೂ ಸಹಕಾರ ನೀಡಲಿದೆ ಎಂದು ತಿಳಿಸಿದೆ.

"ವಿಡಿಯೋ ನೋಡಿ ಸಂಬಂಧಪಟ್ಟ ಧರ್ಮಗುರುವನ್ನು ಅಮಾನತು ಮಾಡಲಾಗಿದೆ. ಸದ್ಯ ಅಲ್ಲಿಗೆ ಬೇರೆ ಧರ್ಮಗುರುವನ್ನು ನಿಯೋಜಿಸಲಾಗುವುದು. ಪ್ರಕರಣವು ಕಾನೂನು ವ್ಯಾಪ್ತಿಗೆ ಬರುವ ಕಾರಣ, ಅದರ ಅಡಿಯಲ್ಲಿ ಮುಂದಿನ ಕ್ರಮವನ್ನು ವಹಿಸಲಾಗುವುದು. ಸದ್ಯ, ಆಂತರಿಕ ತನಿಖೆ ಆಗದೆ ತಪ್ಪು ಯಾರದ್ದು ಎಂಬುದನ್ನು ಹೇಳಲು ಸಾಧ್ಯವಿಲ್ಲ" ಎಂದು ರೊನಾಲ್ಡ್ ಕ್ಯಾಸ್ಟೆಲಿನೊ ತಿಳಿಸಿದ್ದಾರೆ.

"ಅದಾಗ್ಯೂ, ಆಂತರಿಕ ತನಿಖೆಯ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ. ತನಿಖೆಯ ಬಳಿಕ ಆರೋಪಿ ಧರ್ಮಗುರುವನ್ನು ಸೇವೆಯಲ್ಲಿ ಮುಂದುವರೆಸಬೇಕೆ ಅಥವಾ ಆಡಳಿತಾತ್ಮಕ ಸೇವೆಗಳಲ್ಲಿ ಮುಂದುವರೆಸಬೇಕೆ ಎನ್ನುವುದನ್ನು ಬಿಷಪ್‌ ತೀರ್ಮಾನಿಸಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

"ಆರೋಪಿ ಧರ್ಮಗುರು ಬಗ್ಗೆ ಸ್ಥಳೀಯ ಕ್ರೈಸ್ತರಲ್ಲಿ ಹಲವಾರು ಅಸಮಾಧಾನವಿದ್ದು, ಚರ್ಚ್‌ನ ಭಕ್ತರೊಂದಿಗೆ ಹಾಗೂ ಚುನಾಯಿತ ಉಪಾಧ್ಯಕ್ಷರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಘಟನೆ ನಡೆಯುತ್ತಿದ್ದಂತೆಯೇ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಅಸಮಾಧಾನಗೊಂಡಿರುವ ಕ್ರೈಸ್ತ ಸಮುದಾಯದ 250-300 ಜನರು ಸೇರಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದರು. ಅದಾಗ್ಯೂ, ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆರೋಪಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ" ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ಚರ್ಚ್‌ ಭಕ್ತರೊಬ್ಬರು ʼದಿ ಫೆಡೆರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಆರೋಪಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಚರ್ಚ್‌ ಉಪಾಧ್ಯಕ್ಷರನ್ನು ಸಂಪರ್ಕಿಸಲು ʼದಿ ಫೆಡೆರಲ್‌ ಕರ್ನಾಟಕʼ ಪ್ರಯತ್ನಿಸಿತ್ತಾದರೂ, ತಕ್ಷಣಕ್ಕೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

ಹಲ್ಲೆಗೆ ಕಾರಣವೇನು?

"ಚರ್ಚ್‌ ನ ವಾರ್ಷಿಕ ಶುಲ್ಕ ಪಾವತಿ ಮಾಡಿಲ್ಲ, ಬಾಕಿ ಮೊತ್ತವನ್ನು ಪಾವತಿ ಮಾಡಬೇಕೆಂದು ಧರ್ಮಗುರು ದಂಪತಿ ಬಳಿ ಒತ್ತಾಯ ಪಡಿಸಿದ್ದು, ನಮ್ಮ ಬಳಿ ಅಷ್ಟು ದುಡ್ಡಿಲ್ಲ ಎಂದು ಹೇಳಿದ್ದಕ್ಕೆ ಧರ್ಮಗುರು ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ಈ ವಾಗ್ವಾದವು ಮುಂದುವರೆದು ಹಲ್ಲೆ ಮಾಡುವ ಮಟ್ಟಕ್ಕೆ ಬೆಳೆದಿದೆ" ಎಂದು ಸ್ಥಳೀಯರು ಹೇಳಿದ್ದಾರೆ.

ಧರ್ಮಗುರು ವಿರುದ್ಧ ಅಸಮಾಧಾನ ಹೊಂದಿರುವ ಸ್ಥಳೀಯ ಕ್ರೈಸ್ತರು ಆರೋಪಿ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದು, “ಸಾಮಾನ್ಯ ಭಕ್ತರೊಡನೆ ಫಾದರ್‌ ಅನುಚಿತವಾಗಿ ವರ್ತಿಸುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಧರ್ಮಗುರು ತಮ್ಮ ವಿರುದ್ಧ ಅವಹೇಳನಕಾರಿ ಬೈಗುಳ ಬಳಸಿದ್ದರಿಂದ ಅಸಮಾಧಾನಗೊಂಡ ದಂಪತಿ, ಫಾದರ್‌ ಮನೆ ಆವರಣದಿಂದ ಹೊರ ಹೋಗದಂತೆ ಗೇಟ್‌ಗೆ ಬೀಗ ಹಾಕಿ, ಸ್ಪಷ್ಟನೆ ಕೇಳಲು ಬಯಸಿದ್ದರು. ಇದರಿಂದ ಇನ್ನಷ್ಟು ಕುಪಿತಗೊಂಡ ಆರೋಪಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದಿದ್ದಾರೆ.

ಫಾದರ್‌ ಬೆಂಬಲಿಗರ ವಾದವೇನು?

“ಚರ್ಚ್‌ಗೆ ಕಟ್ಟಬೇಕಾದ ಪಾವತಿ ಮೊತ್ತವನ್ನು ಕೇಳಿದ್ದಕ್ಕೆ ವೃದ್ಧ ವ್ಯಕ್ತಿ ಫಾದರ್‌ ಮೇಲೆ ಹರಿಹಾಯ್ದು, ಫಾದರ್‌ ಅವರ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿದ್ದಾರೆ. ಅಲ್ಲದೆ, ಫಾದರ್‌ ಹೊರ ಹೋಗದಂತೆ ಗೇಟಿಗೆ ಬೀಗ ಹಾಕಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಸ್ವರಕ್ಷಣೆಗಾಗಿ ಫಾದರ್‌ ಪ್ರತಿದಾಳಿ ನಡೆಸಿದ್ದಾರೆ” ಎಂದು ಫಾದರ್‌ ಬೆಂಬಲಿಗರು ಹೇಳಿದ್ದಾರೆ. ಧರ್ಮಗುರು ನೀಡಿದ ದೂರಿನಲ್ಲೂ ಇದೇ ಆರೋಪವನ್ನು ಮಾಡಿದ್ದಾರೆ.

ಘಟನೆ ಕುರಿತು ಪ್ರಕಟಣೆ ಹೊರಡಿಸಿರುವ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾಲ್ತಡ್ಕದಲ್ಲಿ ಧಾರ್ಮಿಕ ವ್ಯಕ್ತಿಯೊಬ್ಬರು ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಹಾಗೂ ಹಲ್ಲೆಗೊಳಗಾದವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಯಾವುದೇ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

Read More
Next Story