ಅಂದು ʼಭೂತಯ್ಯನ ಮಗ ಅಯ್ಯುʼ; ಇಂದು ʼಎಕ್ಕʼ: 50 ವರ್ಷ ಬಳಿಕ ಸಹಕಾರಿ ಪದ್ಧತಿಯ ಸಿನಿಮಾ ನಿರ್ಮಾಣ
ಅಂದು ನಾಲ್ವರು ಚಿತ್ರ ನಿರ್ಮಾಪಕರು ಸಹಕಾರಿ ಪದ್ಧತಿಯಲ್ಲಿ "ಭೂತಯ್ಯನ ಮಗ ಅಯ್ಯು" ಸಿನಿಮಾ ನಿರ್ಮಾಣ ಮಾಡಿದ್ದರು. ಈಗ ಮೂರು ನಿರ್ಮಾಣ ಸಂಸ್ಥೆಗಳು ಯುವ ರಾಜ್‌ಕುಮಾರ್ ಅಭಿನಯದ ʼಎಕ್ಕʼ ನಿರ್ಮಾಣಕ್ಕೆ ಮುಂದಾಗಿದೆ.
ಐದು ದಶಕಗಳ ಹಿಂದೆ ಚಂದನವನದಲ್ಲಿ ನಡೆದ ಪ್ರಯೋಗಗಳು ಮತ್ತೆ ಚಾಲ್ತಿಗೆ ಬಂದಿವೆ.. ಜನಪ್ರಿಯ ಚಿತ್ರ ನಿರ್ಮಾಪಕರು ಸಹಕಾರಿ ಪದ್ಧತಿಯಲ್ಲಿ ಕನ್ನಡದ ಖ್ಯಾತ ಸಿನಿಮಾ "ಭೂತಯ್ಯನ ಮಗ ಅಯ್ಯು" ನಿರ್ಮಾಣ ಮಾಡಿದ್ದರು. ಈಗ ಕನ್ನಡದ ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಾಗಿ ಯುವ ರಾಜ್‌ಕುಮಾರ್ ಅಭಿನಯದ ʼಎಕ್ಕʼ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.
ಬೇರೆ ಭಾಷೆಗಳಲ್ಲಿ ಈ ತರಹದ ಪ್ರಯೋಗಗಳು ಹೊಸದೇನಲ್ಲ. ಹಿಂದಿ, ತಮಿಳು, ತೆಲುಗಿನಲ್ಲಿ ಈಗಾಗಲೇ ಈ ತರಹ ಒಂದೇ ಚಿತ್ರವನ್ನು ಎರಡು-ಮೂರು ನಿರ್ಮಾಣ ಸಂಸ್ಥೆಗಳು ಜೊತೆಗೂಡಿ ನಿರ್ಮಿಸಿದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಕನ್ನಡದಲ್ಲಿ ಮಾತ್ರ ಯಾಕೋ ಇದು ಸಾಧ್ಯವಾಗಿರಲಿಲ್ಲ. ಈಗ ಇದು ಸಾಧ್ಯವಾಗಿದೆ.
ʼಎಕ್ಕʼ ಸಿನಿಮಾವನ್ನು ಕನ್ನಡದ ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ನಿರ್ಮಾಣ ಮಾಡುತ್ತಿರುವುದು ವಿಶೇಷ. PRK ಪ್ರೊಡಕ್ಷನ್ಸ್ ಸಂಸ್ಥೆಯಡಿ ಅಶ್ವಿನಿ ಪುನೀತ್ ರಾಜಕುಮಾರ್, KRG ಸ್ಟುಡಿಯೋಸ್ ಅಡಿ ಕಾರ್ತಿಕ್ ಗೌಡ ಮತ್ತು ಯೋಗಿ, ಜಯಣ್ಣ ಫಿಲಂಸ್‍ನಡಿ ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರವನ್ನು ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
50 ವರ್ಷಗಳ ಹಿಂದೆಯೇ ಈ ತರಹದ ಪ್ರಯೋಗ
50 ವರ್ಷಗಳ ಹಿಂದೆಯೇ ಅಂದರೆ 1974ರಲ್ಲಿ ಈ ತರಹದ ಪ್ರಯೋಗವಾಗಿತ್ತು. ಆಗಿನ ಜನಪ್ರಿಯ ನಿರ್ಮಾಪಕರು ಸಹಕಾರಿ ಪದ್ಧತಿಯಲ್ಲಿ ಚಿತ್ರವೊಂದನ್ನು ನಿರ್ಮಿಸಿದ್ದರು. ಅದೇ ‘ಬೂತಯ್ಯನ ಮಗ ಅಯ್ಯು’. ವಿಷ್ಣುವರ್ಧನ್, ಲೋಕೇಶ್ ಮುಂತಾದವರು ಅಭಿನಯಿಸಿದ ಈ ಚಿತ್ರಕ್ಕೆ ಕನ್ನಡದ ನಾಲ್ವರು ಜನಪ್ರಿಯ ನಿರ್ಮಾಪಕರು ಕೈಜೋಡಿಸಿದ್ದರು. ಈಶ್ವರಿ ಎಂಟರ್‌ಪ್ರೈಸಸ್‌ನ ಎನ್. ವೀರಾಸ್ವಾಮಿ (ರವಿಚಂದ್ರನ್ ಅವರ ತಂದೆ), ಜೈನ್ ಫಿಲಂಸ್‍ನ ಚಂದೂಲಾಲ್ ಜೈನ್ ಜೊತೆಗೆ ಡಾ. ರಾಜಕುಮಾರ್ ಸಹೋದರ ವರದಪ್ಪ ಮತ್ತು ನಿರ್ದೇಶಕ ಸಿದ್ಧಲಿಂಗಯ್ಯ ಈ ಚಿತ್ರವನ್ನು ಜೊತೆಯಾಗಿ ನಿರ್ಮಿಸಿದ್ದರು. ಜೈನ್ ಕಂಬೈನ್ಸ್ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾದರೂ, ನಾಲ್ವರು ಜನಪ್ರಿಯ ನಿರ್ಮಾಪಕರು ಈ ಚಿತ್ರದ ಹಿಂದಿದ್ದರು.
ಈ ಚಿತ್ರದ ಯಶಸ್ಸಿನ ನಂತರ ವೀರಾಸ್ವಾಮಿ, ಚಂದೂಲಾಲ್ ಜೈನ್, ವರದಪ್ಪ ಮತ್ತು ಸಿದ್ದಲಿಂಗಯ್ಯ ನಾಲ್ವರೂ ಸೇರಿ ಅನಂತ್ ನಾಗ್ ಅಭಿನಯದ ‘ನಾರದ ವಿಜಯ’ ಮತ್ತು ಶ್ರೀನಿವಾಸಮೂರ್ತಿ ಅಭಿನಯದ ‘ಹೇಮಾವತಿ’ ಚಿತ್ರಗಳನ್ನೂ ನಿರ್ಮಿಸಿದ್ದರು. ದ್ವಾರಕೀಶ್, ಕೆ.ಸಿ.ಎನ್. ಚಂದ್ರಶೇಖರ್ ಮುಂತಾದವರು ನಂತರದ ವರ್ಷಗಳಲ್ಲಿ ಈ ತರಹದ ಕೋ-ಪ್ರೊಡಕ್ಷನ್‍ನಲ್ಲಿ ತೊಡಗಿಸಿಕೊಂಡು, ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳು ಸೇರಿ ಜೊತೆಯಾಗಿ ಚಿತ್ರ ನಿರ್ಮಿಸುವ ಸಂಪ್ರದಾಯವೇ ಇರಲಿಲ್ಲ. ಈಗ ಅಂದರೆ 2024ರಲ್ಲಿ ‘ಎಕ್ಕ’ ಚಿತ್ರವು ಇದಕ್ಕೆ ಮುನ್ನುಡಿ ಬರೆದಿದೆ.
ಈ ಸಹಯೋಗದ ಕುರಿತು ಮಾತನಾಡಿರುವ ಯುವ ರಾಜಕುಮಾರ್, ‘ಮೂರು ದೊಡ್ಡ ನಿರ್ಮಾಣ ಸಂಸ್ಥೆಗಳು ಜೊತೆಯಾದಾಗ, ಚಿತ್ರದ ಶಕ್ತಿ ಸಹ ಹೆಚ್ಚಾಗುತ್ತಿದೆ. ಒಂದೊಳ್ಳೆಯ ತಂಡ ರೂಪುಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ’ ಎನ್ನುತ್ತಾರೆ.
ಈ ಕುರಿತು ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ‘ಯುವ ಅಭಿನಯದ ಎರಡನೇ ಚಿತ್ರವನ್ನು ನಿರ್ಮಿಸುವ ಯೋಚನೆ ಇತ್ತು. ಈ ನಿಟ್ಟಿನಲ್ಲಿ ನಾವಿಬ್ಬರೂ ಕಥೆಗಳನ್ನು ಕೇಳುತ್ತಿದ್ದೆವು. ಆದರೆ, ಯಾವುದೂ ಇಷ್ಟವಾಗಿರಲಿಲ್ಲ. ಒಮ್ಮೆ ಕಾರ್ತಿಕ್ ಗೌಡ ಫೋನ್ ಮಾಡಿ ಯುವಗೆ ಒಂದು ಕಥೆ ಇರುವುದಾಗಿ ಹೇಳಿದರು. ಆ ಕಥೆ ಇಷ್ಟವಾಯ್ತು. ಯಾಕೆ ನಾವು ಜೊತೆಯಾಗಿ ಚಿತ್ರ ಮಾಡಬಾರದು ಎಂಬ ಯೋಚನೆ ಬಂತು. ಜಯಣ್ಣ ಸಹ ನಮ್ಮ ಜೊತೆಗೆ ಸೇರಿಕೊಂಡರು. ಹೀಗೆ ‘ಎಕ್ಕ’ ಶುರುವಾಯಿತು’ ಎನ್ನುತ್ತಾರೆ.
ಇನ್ನು, ಈ ಕುರಿತು ಮಾತನಾಡುವ KRG ಸ್ಟುಡಿಯೋಸ್‍ನ ಕಾರ್ತಿಕ್ ಗೌಡ, ‘ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಸೇರಿ ಚಿತ್ರ ಮಾಡುವುದು ಬೇರೆ ಚಿತ್ರರಂಗಗಳಲ್ಲಿ ಇದೆ. ಭವಿಷ್ಯದಲ್ಲಿ ಅದು ಇನ್ನಷ್ಟು ಹೆಚ್ಚಾಗಲಿದೆ’ ಎನ್ನುತ್ತಾರೆ.
ಮುಹೂರ್ತದ ದಿನವೇ ಬಿಡುಗಡೆ ಘೋಷಣೆ
ಹಿಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಈ ಸಂಪ್ರದಾಯವಿತ್ತು. ಚಿತ್ರದ ಮುಹೂರ್ತದ ದಿನವೇ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತಿತ್ತು. ಚಿತ್ರೀಕರಣ ಮತ್ತು ಇತರೆ ಚಟುವಟಿಕೆಗಳನ್ನು ಮೊದಲೇ ಪ್ಲಾನ್ ಮಾಡಿಟ್ಟುಕೊಂಡು, ಒಂದು ಡೆಡ್‍ಲೈನ್ ಇಟ್ಟುಕೊಂಡು, ಅದಕ್ಕೆ ಪೂರಕವಾಗಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ, ಈ ಸಂಪ್ರದಾಯ ಇತ್ತೀಚೆಗೆ ಮರೆಯಾಗಿತ್ತು. ಚಿತ್ರದ ಬಿಡುಗಡೆ ಯಾವಾಗ ಎಂಬ ಸ್ಪಷ್ಟತೆ ಚಿತ್ರತಂಡಕ್ಕೆ ಇರುತ್ತಿರಲಿಲ್ಲ. ಎಲ್ಲಾ ಕೆಲಸ ಮುಗಿದು, ಒಂದು ದಿನಾಂಕ ಘೋಷಣೆಯಾದರೂ, ಆ ದಿನ ಬಿಡುಗಡೆ ಆಗುತ್ತದೆ ಎಂಬ ಖಾತ್ರಿ ಇರುತ್ತಿರಲಿಲ್ಲ.
ಈಗ ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಚಿತ್ರದಿಂದ ಪುನಃ ಈ ಸಂಪ್ರದಾಯ ಶುರುವಾಗಿದೆ. ಚಿತ್ರದ ಮುಹೂರ್ತ, ಗುರುವಾರ ಬೆಳಿಗ್ಗೆ ಗವಿಪುರ ಗುಟ್ಟಳ್ಳಿಯಲ್ಲಿರುವ ಬಂಡಿ ಮಹಾಂಕಾಳಿ ದೇವಸ್ಥಾನದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರವು 2025ರ ಜೂನ್ 06ರಂದು ಬಿಡುಗಡೆಯಾಗಲಿದೆ. ಅದಕ್ಕೆ ಪೂರಕವಾಗಿ ಚಿತ್ರತಂಡ ಕೆಲಸ ಮಾಡಲಿದೆ.
ಚಿತ್ರಮಂದಿರಳಿಗೆಂದೇ ಸಿನಿಮಾ
ಈ ಚಿತ್ರವನ್ನು ಒಂದೇ ಭಾಷೆಯಲ್ಲಿ ಮತ್ತು ಪ್ರಮುಖವಾಗಿ ಚಿತ್ರಮಂದಿರಳಿಗೆಂದೇ ಮಾಡಲಾಗುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಜಯಣ್ಣ. ‘ಚಿತ್ರಮಂದಿರಗಳನ್ನು ಮುಖ್ಯವಾಗಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಹಾಗಂತ ಚಿತ್ರದ ಹಕ್ಕುಗಳನ್ನು ಮಾರಾಟ ಮಾಡುವುದಿಲ್ಲ ಎಂದರ್ಥವಲ್ಲ. ಚಾನಲ್ ಮತ್ತು ಓಟಿಟಿಯವರು ಕೇಳಿದರೆ ಖಂಡಿತಾ ಕೊಡುತ್ತೇವೆ. ಹಾಗಂತ ಆ ಹಕ್ಕುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಚಾನಲ್ ಮತ್ತು ಓಟಿಟಿಯವರು ಬಂದು ಮೊದಲೆಲ್ಲಾ ಒಳ್ಳೆಯ ದುಡ್ಡು ಕೊಟ್ಟು, ಚಿತ್ರದ ಬಜೆಟ್ ಜಾಸ್ತಿ ಮಾಡಿಸಿ, ಈಗ ಹಕ್ಕುಗಳನ್ನು ಖರೀದಿಸುವುದೇ ಬಿಟ್ಟಿದ್ದಾರೆ. ಹಾಗಾಗಿ, ನಾವು ಚಿತ್ರಮಂದಿರಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಇಷ್ಟು ವರ್ಷ ನಿರ್ಮಾಪಕರು ಮತ್ತು ವಿತರಕರನ್ನು ಸಾಕಿ ಸಲುಹಿದ್ದೇ ಚಿತ್ರಮಂದಿರಗಳು. ಹಾಗಾಗಿ, ಮೊದಲು ಅವರಿಗೆ ಸಿನಿಮಾ ಮಾಡುತ್ತೇವೆ’ ಎಂದರು.
‘ಎಕ್ಕ’ ಒಂದು ಮಾಸ್ ಚಿತ್ರವಾಗಿದ್ದು, ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅವರು, ‘ಇದೊಂದು ರಾ ಚಿತ್ರ. ಸಾಕಷ್ಟು ಭಾವನೆಗಳಿವೆ. ಈ ಚಿತ್ರದ ಮೂಲಕ ಮನುಷ್ಯನ ತಳಮಳವಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ‘ರತ್ನನ್ ಪ್ರಪಂಚ’ ಚಿತ್ರದಲ್ಲೂ ತಳಮಳವಿತ್ತು. ಆದರೆ, ಅದರಲ್ಲಿ ರಕ್ತ ಇರಲಿಲ್ಲ. ಇದರಲ್ಲಿ ರಕ್ತ ಇದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ವಿಷಯ ಈ ಚಿತ್ರದಲ್ಲಿದೆ’ ಎಂದರು.
ಇದು ಯುವ ರಾಜಕುಮಾರ್ ಅಭಿನಯದ ಎರಡನೆಯ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅವರು ಮಾಸ್ ಪಾತ್ರವನ್ನು ಮಾಡುತ್ತಿದ್ದಾರೆ. ‘ನನ್ನ ಮೊದಲ ಚಿತ್ರಕ್ಕೂ, ಈ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದು ಸಲೈಂಟ್ ಪಾತ್ರವಾಗಿತ್ತು. ಇದು ವೈಲೆಂಟ್ ಪಾತ್ರವಾಗಲಿದೆ’ ಎಂದರು.
‘ಎಕ್ಕ’ ಚಿತ್ರಕ್ಕೆ ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಯುವ ರಾಜಕುಮಾರ್, ಸಂಪದ ಹುಲಿವಾನ, ಅತುಲ್ ಕುಲಕರ್ಣಿ, ಶ್ರುತಿ, ಡಾ. ಸೂರಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಚಿತ್ರಕ್ಕೆ ಬೆಂಗಳೂರು, ಮೈಸೂರು ಮತ್ತು ಕಾಶ್ಮೀರಗಳಲ್ಲಿ ಚಿತ್ರೀಕರಣ ನಡೆಯಲಿದೆ. ಕಾಶ್ಮೀರದಿಂದ ಚಿತ್ರ ಶುರುವಾಗಿ ಅಲ್ಲೇ ಮುಗಿಯಲಿದೆಯಂತೆ.