Mysore MUDA Case | ಇಡಿ ಬಿಡುಗಡೆ ಮಾಡಿದ್ದು ಜಪ್ತಿ ವರದಿ; ತನಿಖಾ ವರದಿಯಲ್ಲ; ಸಿಎಂ ಸಿದ್ದರಾಮಯ್ಯ
x
ಸಿಎಂ ಸಿದ್ದರಾಮಯ್ಯ

Mysore MUDA Case | ಇಡಿ ಬಿಡುಗಡೆ ಮಾಡಿದ್ದು ಜಪ್ತಿ ವರದಿ; ತನಿಖಾ ವರದಿಯಲ್ಲ; ಸಿಎಂ ಸಿದ್ದರಾಮಯ್ಯ

ಮುಡಾ ಪ್ರಕರಣದಲ್ಲಿ ವಿರೋಧ ಪಕ್ಷಗಳು ನನ್ನ ತೇಜೋವಧೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಜಾರಿ ನಿರ್ದೇಶನಾಲಯದ ತನಿಖೆ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಹಿತಿ ವರದಿ ಬಿಡುಗಡೆ ಮಾಡಿದೆಯೇ ಹೊರತು ತನಿಖಾ ವರದಿಯನ್ನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಹಣ ಅಕ್ರಮ ವಹಿವಾಟು ಕಾಯ್ದೆ(ಪಿಎಂಎಲ್ಎ) ಅಡಿ ಪ್ರಕರಣ ದಾಖಲಾಗಿದೆ. ಆದರೆ, ಇಲ್ಲಿ ಯಾವುದೇ ಹಣದ ವ್ಯವಹಾರ ನಡೆದಿಲ್ಲ. ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್‌ ಅವರಿಗೆ ಇಡಿ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದಲೇ ಇಡಿ ತನಿಖೆ ಕಾನೂನು ಪ್ರಕಾರ ಅಲ್ಲ ಎಂಬುದು ತಿಳಿಯುತ್ತದೆ. ಇಡಿ ತನಿಖೆ ಕಾನೂನುಬದ್ಧವಾಗಿದ್ದರೆ ನ್ಯಾಯಾಲಯ ಏಕೆ ತಡೆಯಾಜ್ಞೆ ನೀಡುತ್ತಿತ್ತು ಎಂದು ಪ್ರಶ್ನಿಸಿದರು.

'ಮುಡಾ ಪ್ರಕರಣದಲ್ಲಿ ವಿರೋಧ ಪಕ್ಷಗಳು ನನ್ನ ತೇಜೋವಧೆಗೆ ಸಾಕಷ್ಟು ಯತ್ನ ನಡೆಯುತ್ತಿವೆ. ಇಡಿ ಗುರುವಾರ ಬಿಡುಗಡೆ ಮಾಡಿರುವುದು ಜಪ್ತಿ ವರದಿ ಕೂಡ ಅಂತಹದ್ದೇ ಒಂದು ಪ್ರಯತ್ನ. ಜಾರಿ ನಿರ್ದೇಶನಾಲಯದ ತನಿಖೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆʼ ಎಂದು ಹೇಳಿದರು.

'ಮುಡಾ ವಿಚಾರದಲ್ಲಿ ನಾನು, ನಮ್ಮ ಕುಟುಂಬ ಯಾವುದೇ ತಪ್ಪು ಮಾಡಿಲ್ಲ. ವಿರೋಧ ಪಕ್ಷಗಳು ಅನಗತ್ಯವಾಗಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆʼ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮದವರ ಮೇಲೆ ಸಿಎಂ ಗರಂ

ಸಿಎಂ ಸ್ಥಾನ ಬದಲಾವಣೆ ಕುರಿತು ಪ್ರಸ್ತಾಪಿಸಿದ ಮಾಧ್ಯಮದವರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. 'ನನಗೆ ಮತ್ತೆ ಮತ್ತೆ ಅದನ್ನೇ ಕೇಳಬೇಡಿ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಆಗುತ್ತದೆ. ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಈ ವಿಚಾರದ ಬಗ್ಗೆ ನಾನು ಎಷ್ಟು ಬಾರಿ ಸ್ಪಷ್ಟೀಕರಣ ಕೊಡಲಿ ಹೇಳಿʼ ಎಂದು ಗರಂ ಆದರು.

'ಇಬ್ಬರು, ಮೂವರು ಸಚಿವರು ಕುಳಿತು ಮಾತನಾಡಿದ ತಕ್ಷಣ ಸಿಎಂ ಬದಲಾವಣೆಗೆ ವಿಚಾರ ಎಂದು ಅರ್ಥ ಕಲ್ಪಿಸುವುದು ಸಲ್ಲದು. ಊಹಾ ಪತ್ರಿಕೋದ್ಯಮ ಬಿಡಿ. ಮೂರ್ನಾಲ್ಕು ಜನ ಸೇರಿದಾಗ ರಾಜಕೀಯ ಚರ್ಚೆ ನಡೆಯುತ್ತದೆ. ಡಿನ್ನರ್ ಮೀಟಿಂಗ್ ಅಥವಾ ಸಭೆ ಮಾಡುವುದರಲ್ಲಿ ತಪ್ಪೇನಿದೆ. ನಿಮ್ಮ ಗ್ರಹಿಕೆ ಸರಿ ಇಲ್ಲʼ ಎಂದು ಹೇಳಿದರು.

ಕೇಂದ್ರದಿಂದ ನಿರಂತರ ಅನ್ಯಾಯ

'ಕೇಂದ್ರ ಬಜೆಟ್‌ನಿಂದ ನಾವು ಏನನ್ನೂ ನಿರೀಕ್ಷೆ ಮಾಡಲು ಆಗುವುದಿಲ್ಲ. ಈ ಹಿಂದೆ ಸಾಕಷ್ಟು ಬಜೆಟ್ಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವುದಾಗಿ ಹಿಂದಿನ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ ನಯಾಪೈಸೆ ನೀಡಿಲ್ಲ. ಹೀಗಾಗಿ ಬಜೆಟ್ ಮೇಲೆ ಯಾವ ನಿರೀಕ್ಷೆ ಇಟ್ಟುಕೊಂಡಿಲ್ಲʼ ಎಂದು ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ಪದೇಪದೆ ಅನ್ಯಾಯವಾಗಿದೆ. ಪ್ರತಿ ವರ್ಷ ರಾಜ್ಯದಿಂದ 4 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ರಾಜ್ಯಕ್ಕೆ ಕೇವಲ 68ಸಾವಿರ ಕೋಟಿ ತೆರಿಗೆ ಪಾಲು ಸಿಗುತ್ತಿದೆ. ಹಾಗಾಗಿ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ

ʼಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸುಗ್ರಿವಾಜ್ಞೆ ಹೊರಡಿಸಲಾಗುವುದು. ಜನ ಅನಿವಾರ್ಯ ಹಾಗೂ ತುರ್ತು ಕಾರಣಗಳಿಂದ ಸಾಲ ಪಡೆಯುತ್ತಾರೆ. ಆದರೆ, ಅವರಿಂದ ಹೆಚ್ಚಿನ ಬಡ್ಡಿ ಸಂಗ್ರಹಿಸಲಾಗುತ್ತದೆ. ಸಾಲ ವಸೂಲಿಗಾಗಿ ಹೊರಗುತ್ತಿಗೆ ಮೇಲೆ ಗೂಂಡಾಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ಗಳು ಆರ್‌ಬಿಐ ನಿಯಮದಡಿ ಬರುತ್ತವೆ. ಇವುಗಳಿಗೆ ಕಡಿವಾಣ ಹಾಕಲು ಇನ್ನೂ ಸುಗ್ರೀವಾಜ್ಞೆ ಹೊರಡಿಸಿಲ್ಲ. ಸುಗ್ರೀವಾಜ್ಞೆ ಹೊರಡಿಸಿದ ನಂತರ ಇದಕ್ಕೆ ಕಡಿವಾಣ ಬೀಳಲಿದೆ. ಯಾರೂ ಕೂಡ ಆತ್ಮಹತ್ಯೆಯ ಹಾದು ತುಳಿಯಬಾರದು. ಸರ್ಕಾರ ನಿಮ್ಮ ಪರವಿದೆʼ ಎಂದು ಹೇಳಿದರು.

Read More
Next Story