Mysore MUDA Controversy| ಮುಡಾ ಕಚೇರಿ ಮೇಲೆ ಇಡಿ ದಾಳಿ
x
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

Mysore MUDA Controversy| ಮುಡಾ ಕಚೇರಿ ಮೇಲೆ ಇಡಿ ದಾಳಿ

ಮುಡಾ ಸೈಟ್​​ ಹಂಚಿಕೆ ದಾಖಲೆ, ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ ಕೇಸ್​ ಅನ್ನು ಇಡಿ ದಾಖಲು ಮಾಡಿದ್ದು, ಇದಕ್ಕಾಗಿ ಮುಡಾ ಕಚೇರಿಯನ್ನು ಪರಿಶೀಲಿಸಿದೆ.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದಾಳಿ ಮಾಡಿದೆ. ಮೈಸೂರು ತಾಲೂಕು ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿಯ ಹೆಸರು ಇರುವ ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮುಡಾ ಸೈಟ್​​ ಹಂಚಿಕೆ ದಾಖಲೆ, ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ ಕೇಸ್​ ಅನ್ನು ಇಡಿ ದಾಖಲು ಮಾಡಿದ್ದು, ಇದಕ್ಕಾಗಿ ಮುಡಾ ಕಚೇರಿಯನ್ನು ಪರಿಶೀಲಿಸಿದೆ. ಸಿದ್ದರಾಮಯ್ಯ, ಅವರ ಪತ್ನಿ ಬಿಎಂ ಪಾರ್ವತಿ, ಸೋದರ ಮಾವ ಬಿಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿತ್ತು. ಮುಡಾ ಸ್ವಾಧೀನಪಡಿಸಿಕೊಳ್ಳದೆ ಪಾರ್ವತಿ ಅವರ ಜಮೀನಿಗೆ ಬದಲಾಗಿ ಅವರಿಗೆ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ಬೆನ್ನಲ್ಲೇ ಇ.ಡಿ ದಾಳಿ ನಡೆಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇಡಿ ಅಧಿಕಾರಿಗಳು ತಲಾ 10ಕ್ಕೂ ಹೆಚ್ಚು ಸಿಬ್ಬಂದಿಯ ಎರಡು ತಂಡಗಳಲ್ಲಿ ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆಯಲ್ಲಿರುವ ಮುಡಾ ಕಚೇರಿ ಮತ್ತು ನಜರ್‌ಬಾದ್‌ನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಪ್ರವೇಶಿಸಿದರು. ಮುಡಾ ಅಧಿಕಾರಿಗಳು, ಇಡಿ ಅಧಿಕಾರಿಗಳು ಮುಡಾ ಮತ್ತು ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಅವರು ಕನಿಷ್ಠ ಎರಡು ದಿನಗಳ ಕಾಲ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಎರಡೂ ಕಚೇರಿಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಮುಡಾ ಕಚೇರಿಗೆ ಹೊಕ್ಕ ಇಡಿ ಅಧಿಕಾರಿಗಳು, ಸೈಟ್‌ ಹಂಚಿಕೆ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹಗರಣದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಡಿ ಈಗಾಗಲೇ 3 ನೋಟಿಸ್‌ ಹಾಗೂ 1 ಸಮನ್ಸ್‌ ಜಾರಿ ಮಾಡಿತ್ತು.ಆದರೆ, ಇ.ಡಿ ನೋಟಿಸ್​, ಸಮನ್ಸ್‌ಗೆ ಅಧಿಕಾರಿಗಳು ಯಾವುದೇ ಉತ್ತರ ನೀಡಿರಲಿಲ್ಲ. ದಾಖಲೆ ನೀಡದ ಮುಡಾಗೆ ದಾಳಿ ಮೂಲಕ ಇ.ಡಿ. ಶಾಕ್​ ನೀಡಿದೆ. ಮೈಸೂರು ಬೆನ್ನಲ್ಲೇ ಬೆಂಗಳೂರಿನಲ್ಲೂ ಇ.ಡಿ ದಾಳಿ ನಡೆಸಿದೆ.

ಇ.ಡಿ ಕೇಳುವ ಎಲ್ಲ ದಾಖಲೆ ಒದಗಿಸುತ್ತೇವೆ' ಎಂದು ಮೈಸೂರು ಮುಡಾ ಕಾರ್ಯದರ್ಶಿ ಪ್ರಸನ್ನ ಹೇಳಿದ್ದಾರೆ. ‘ಇಂದು, ನಾಳೆಯೂ ಇ.ಡಿ. ಮುಂದುವರಿಯಲಿದೆ. ಮುಡಾ ಕಾರ್ಯವೈಖರಿಗೆ ಬಗ್ಗೆ ಪ್ರಾಥಮಿಕ ಮಾಹಿತಿ ಕೇಳಿದೆ.ಇ.ಡಿ ದಾಳಿ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ.

ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿದೆ. ಮೈಸೂರಿನ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅದಾಗ್ಯೂ ನಾನು ಅಥವಾ ನನ್ನ ಕುಟುಂಬದವರು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಸಿಎಂ ಹೇಳುತ್ತಲೇ ಬಂದಿದ್ದಾರೆ. ಇದರ ಜೊತೆಗೆ ಪಡೆದುಕೊಂಡಿದ್ದ ನಿವೇಶನಗಳನ್ನೂ ಸಹ ವಾಪಾಸ್ ನೀಡಲಾಗಿದೆ. ಆದರೆ ಪ್ರತಿಪಕ್ಷಗಳು ರಾಜಕೀಯ ಉದ್ದೇಶದಿಂದ ನನ್ನ ಮೇಲೆ ಈ ರೀತಿ ಆರೋಪ ಮಾಡುತ್ತಿವೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Read More
Next Story