
ED Raid: ಗೃಹ ಸಚಿವ ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ; ಬೆನ್ನಿಗೆ ನಿಂತ ಸಚಿವ ಸಂಪುಟ
ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆಗಳು ಕೊಟ್ಟಿರಬಹುದು. ಪರಮೇಶ್ವರ್ ರವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಹೇಳಲು ಸಾಧ್ಯವೇ? ಆ ಹೆಣ್ಣು ಮಗಳು ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ ಎಂದಿದ್ದಾರೆ ಡಿ.ಕೆ. ಶಿವಕುಮಾರ್
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು ಅವರ ಬೆನ್ನ ಹಿಂದೆ ನಿಂತಿದ್ದಾರೆ.
ಸಂಪುಟ ಸಭೆಯಲ್ಲಿ ಇಡಿ ದಾಳಿ ಬಗ್ಗೆ ಸ್ವತಃ ಗೃಹ ಸಚಿವ ಪರಮೇಶ್ವರ್ ಅವರು ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. "ಇಡಿ ದಾಳಿ ವೇಳೆ ಏನು ಸಿಕ್ಕಿಲ್ಲ . ನಮ್ಮ ಸಂಸ್ಥೆಗಳ ಮೇಲಿನ ದಾಳಿ ವೇಳೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ, ಅಂತಹ ಯಾವುದೇ ದಾಖಲೆಗಳು ಸಿಕ್ಕಿಲ್ಲ," ಎಂದಿರುವ ಪರಮೇಶ್ವರ್, ಈ ಸಂಬಂಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ, "ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಇತರ ಸಚಿವ ಸಂಪುಟದ ಸಹೋದ್ಯೋಗಿಗಳು ಭರವಸೆ ನೀಡಿದ್ದಾರೆ.
ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ಇಡಿ ದಾಳಿ ಎರಡನೇ ದಿನವೂ ಮುಂದುವರಿದಿದ್ದು, ಅಕ್ರಮ ಚಿನ್ನ ಕಳ್ಳಸಾಗಾಣಿಕೆ ಆರೋಪಿ ಚಿತ್ರನಟಿ ರನ್ಯಾರಾವ್‌ಗೂ ಇಡಿ ದಾಳಿಗೂ ತಳಕು ಹಾಕಿಕೊಂಡಿದೆ. ದುಬೈನಿಂದ ಚಿನ್ನ ಅಕ್ರಮ ಕಳ್ಳಸಾಗಾಣಿಗೆ ಮಾಡಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಪ್ರಕರಣ ಸಂಬಂಧವೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರನ್ಯಾರಾವ್ ಪ್ರತಿ ಬಾರಿ ಚಿನ್ನ ಕಳ್ಳಸಾಗಾಣಿಕೆ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆಗೆ ಒಳಗಾಗದೇ ಹೊರಬರುತ್ತಿದ್ದರು. ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುವ ಮುನ್ನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಕರೆ ಮಾಡಿರುವ ಕುರಿತು ಇಡಿ ತನಿಖೆ ವೇಳೆ ಕಂಡು ಬಂದಿತ್ತು. ಈ ಪ್ರಕರಣದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೆಸರು ತಳುಕು ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪರಮೇಶ್ವರ್ ತಪ್ಪು ಮಾಡಿಲ್ಲ
ರನ್ಯಾ ರಾವ್ ಅವರಿಗೆ ಪರಮೇಶ್ವರ್ ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 25ಲಕ್ಷ ರೂ. ವರ್ಗಾವಣೆ ಆಗಿದೆ ಎಂಬ ವಿಚಾರದಲ್ಲೂ ಇಡಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಪತ್ರಕರ್ತರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಾನು ಪರಮೇಶ್ವರ್ ಅವರ ಮನೆಗೆ ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡಿದೆ. ನಾವು ಸಾರ್ವಜನಿಕ ಜೀವನದಲ್ಲಿದ್ದು ಬೇಕಾದಷ್ಟು ಜನ ಟ್ರಸ್ಟ್ ನಡೆಸುತ್ತಾರೆ. ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆಗಳು ಕೊಟ್ಟಿರಬಹುದು. ಪರಮೇಶ್ವರ್ ರವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಹೇಳಲು ಸಾಧ್ಯವೇ? ಈ ರೀತಿ ಯಾವುದೇ ರಾಜಕಾರಣಿ ಹೇಳಲು ಸಾಧ್ಯವಿಲ್ಲ. ಆ ಹೆಣ್ಣು ಮಗಳು ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಆಕೆಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪರಮೇಶ್ವರ್ ಅವರ ಪ್ರಕರಣದಲ್ಲಿ ಅವರು ಕಾನೂನಿಗೆ ತಲೆಬಾಗುವ ವ್ಯಕ್ತಿ. ರಾಜ್ಯದ ಗೃಹ ಸಚಿವರು. ಅವರು ದೊಡ್ಡ ನಾಯಕರು, ಎಂಟು ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. 1990ರಿಂದಲೂ ಅವರು ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಅವರು ಯಾವುದೇ ತಪ್ಪು ಮಾಡಿಲ್ಲ” ಎಂದು ತಿಳಿಸಿದರು.
“ನಾನು ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೇನೆ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದೇನೆ” ಎಂದರು.