
ವೀರೇಂದ್ರ ಪಪ್ಪಿ
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಮನೆ, ಕಚೇರು ಸೇರಿ 30 ಕಡೆ ಇಡಿ ದಾಳಿ
ಕಿಂಗ್ 567, ರಾಜಾ 567 ಸೇರಿದಂತೆ ಅಕ್ರಮ ಬೆಟ್ಟಿಂಗ್ ತಾಣಗಳಿಗೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ ನಡೆಸಿದ್ದು, ಸಿಕ್ಕಿಂನಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರನಿಗೆ ಸೇರಿದ 30 ಕ್ಕೂ ಹೆಚ್ಚುಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಹುಬ್ಬಳ್ಳಿ, ಮುಂಬೈ, ಜೋದ್‌ಪುರ ಹಾಗೂ ಗೋವಾದ 5 ಕ್ಯಾಸಿನೋ ಸೇರಿ ಒಟ್ಟು 30 ಕಡೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ನೆಟ್‌ವರ್ಕ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ದಾಳಿಯಲ್ಲಿ, ಕಿಂಗ್ 567, ರಾಜಾ 567, ಪಪ್ಪಿಸ್ 003, ರತ್ನ ಗೇಮಿಂಗ್ ತಾಣಗಳು ಹಾಗೂ ಕೆ.ಸಿ. ತಿಪ್ಪೇಸ್ವಾಮಿಗೆ ಸೇರಿದ ದುಬೈನ ಡೈಮಂಡ್ ಸಾಫ್ಟೆಕ್, ಟಿಆರ್‌ಎಸ್ ಟೆಕ್ನಾಲಜಿಸ್, ಪ್ರೈಮ್ 9 ಟೆಕ್ನಾಲಜಿಸ್, ಕಾಲ್ ಸೆಂಟರ್ ಸರ್ವೀಸ್ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ.
20ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ 40ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಬೆಳಗಿನ ಜಾವದಿಂದಲೇ ದಾಳಿ ಆರಂಭಿಸಿದ್ದು, ಹಲವಾರು ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. 2016ರ ಡಿಸೆಂಬರ್‌ನಲ್ಲಿ ಕೂಡ ಕೆ.ಸಿ. ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ಮನೆಯ ಬಾತ್‌ರೂಮ್‌ನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ನಗದು, 30 ಕೆ.ಜಿ ಚಿನ್ನ ಪತ್ತೆಯಾಗಿತ್ತು.
ಈಗ ಮತ್ತೆ ಅಕ್ರಮ ಹಣ ವರ್ಗಾವಣೆ ಆರೋಪದ ನೆಲೆಯಲ್ಲಿ ಗೇಮಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಶಾಸಕ ವೀರೇಂದ್ರ ವಶಕ್ಕೆ?
ಇಡಿ ದಾಳಿಯ ಬೆನ್ನಲ್ಲೇ ಸಿಕ್ಕಿಂನಲ್ಲಿ ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಇಡಿ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.