
ಸಾಂದರ್ಭಿಕ ಚಿತ್ರ
Enforcement Directorate | 30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿಸಿದರೆ ಇಡಿಗೆ ಮಾಹಿತಿ ನೀಡಲೇಬೇಕು; ಹೊಸ ನಿಯಮ ಜಾರಿ
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಸುವಾಗ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಆಸ್ತಿ ಖರೀದಿದಾರರು ವಿವರ ಸಲ್ಲಿಸದಿದ್ದಲ್ಲಿ ಆಸ್ತಿ ನೋಂದಣಿ ರದ್ದಾಗಲಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.
ಆಸ್ತಿ ಖರೀದಿ ಹಾಗೂ ಮಾರಾಟಗಾರರು ಇನ್ನು ಮುಂದೆ ಜಾರಿ ನಿರ್ದೇಶನಾಲಯದ ಗಮನಕ್ಕೆ ತಾರದೇ ದೊಡ್ಡ ಮೊತ್ತದ ಆಸ್ತಿ ವಹಿವಾಟು ನಡೆಸುವಂತಿಲ್ಲ. 30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿ ಹಾಗೂ ಮಾರಾಟ ಮಾಡಲು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಸುವಾಗ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಆಸ್ತಿ ಖರೀದಿದಾರರು ವಿವರ ಸಲ್ಲಿಸದಿದ್ದಲ್ಲಿ ಆಸ್ತಿ ನೋಂದಣಿ ರದ್ದಾಗಲಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.
ಇಲಾಖೆ ಆಯುಕ್ತ ಕೆ.ಎ. ದಯಾನಂದ ಅವರು ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿ ಹಾಗೂ ಉಪನೋಂದಣಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಖರೀದಿದಾರರು, ಮಾರಾಟಗಾರರಿಂದ ಪಡೆದ ಆಸ್ತಿ ವಿವರ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ವಿಳಾಸ ಪತ್ರ ಸೇರಿ ಇತರೆ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಕಾವೇರಿ-2 ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದ್ದಾರೆ.
ಆಸ್ತಿ ಖರೀದಿ ವೇಳೆ ಕಪ್ಪುಹಣ ಬಳಸುವ ಸಾಧ್ಯತೆ ಕುರಿತು ಜಾರಿ ನಿರ್ದೇಶನಾಲಯ ಅನುಮಾನ ವ್ಯಕ್ತಪಡಿಸಿತ್ತು. ಎಲ್ಲಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವಾಗ ಬೇಕಾದರೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ನಿಯಮ ಮೊದಲಿನಿಂದ ಜಾರಿಯಲ್ಲಿದ್ದರೂ ಉಪನೋಂದಣಾಧಿಕಾರಿಗಳು ಪಾಲಿಸುತ್ತಿರಲಿಲ್ಲ. ಕಂದಾಯ ಇಲಾಖೆ ನಮ್ಮ ಜತೆ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ನಿಯಮ ಜಾರಿಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಹೊಸ ನಿಯಮ
ಕೇಂದ್ರ ಸರ್ಕಾರ ಈ ಹಿಂದೆ ಆಸ್ತಿ ಖರೀದಿ ಮಾಡುವವರು ಹಾಗೂ ಮಾರಾಟ ಮಾಡುವವರಿಗೆ ಕೆಲ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಆಸ್ತಿ ಮಾರಾಟ ಪ್ರಕ್ರಿಯೆ ಸರಳೀಕರಣ, ಭ್ರಷ್ಟಾಚಾರ ನಿಯಂತ್ರಣ ಹಾಗೂ ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ.
ಆಧಾರ್ ಆಧಾರಿತ ದೃಢೀಕರಣ, ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಭೂ ದಾಖಲೆ ವ್ಯವಸ್ಥೆ ಅಭಿವೃದ್ಧಿ, ಮಾರಾಟ ಪತ್ರಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಬಯೋಮೆಟ್ರಿಕ್ ಪರಿಶೀಲನೆ ಮಾಡುವುದಕ್ಕೆ ಮಾತ್ರ ಸಬ್-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು. ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕೇವಲ 10 ದಿನಗಳ ಕಾಲಮಿತಿ ನಿಗದಿ ಮಾಡಬೇಕು. ದೇಶದಾದ್ಯಂತ ಭೂ ನೋಂದಣಿ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಏಕರೂಪದ ಮುದ್ರಾಂಕ ಶುಲ್ಕ ನಿಗದಿ ಹಾಗೂ ನಿಖರತೆಗಾಗಿ ಜಿಐಎಸ್ ಆಧಾರಿತ ಭೂ ನಕ್ಷೆಯ ಬಳಸಬೇಕೆಂಬ ನಿಯಮಗಳನ್ನು ಜಾರಿಗೆ ತಂದಿತ್ತು.