ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ: ಆರ್‌ ಅಶೋಕ್‌ ಸಮರ್ಥನೆ
x
ಆರ್‌ ಅಶೋಕ್‌

ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ: ಆರ್‌ ಅಶೋಕ್‌ ಸಮರ್ಥನೆ

ಸರ್ಕಾರದಲ್ಲಿ ಖಜಾನೆ ಖಾಲಿಯಾಗಿ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಖಜಾನೆಗೆ ಹಣ ಬಂದರೆ ಒಳ್ಳೆಯದು. ಇದನ್ನು ಕಾಂಗ್ರೆಸ್‌ನವರು ಸ್ವಾಗತಿಸಬೇಕು. ಇದನ್ನು ರಾಜಕಾರಣ ಎನ್ನಲು ಬಿಜೆಪಿ ನಾಯಕರೇನೂ ದೂರು ನೀಡಿಲ್ಲ.


Click the Play button to hear this message in audio format

ಮುಡಾದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರದ್ದೂ ಸೇರಿದಂತೆ ಸುಮಾರು 1,200 ಕ್ಕೂ ಅಧಿಕ ನಿವೇಶನಗಳ ಹಗರಣ ನಡೆದಿದೆ ಎಂಬ ದೂರು ಬಂದಿದ್ದು, ಅದಕ್ಕಾಗಿ ದಾಳಿ ಮಾಡಲಾಗಿದೆ. ಈ ದಾಳಿಗೆ ರಾಜಕೀಯ ಕಾರಣವಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. 3-4 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮುಡಾ ಅಧ್ಯಕ್ಷರಾಗಿದ್ದ, ಕಾಂಗ್ರೆಸ್‌ನವರೇ ಆದ ಮರಿಗೌಡ ಪತ್ರದಲ್ಲಿ ತಿಳಿಸಿದ್ದರು. ಅದಾದ ಬಳಿಕ ಸ್ನೇಹಮಯಿ ಕೃಷ್ಣ ಇಡಿಗೆ ದೂರು ನೀಡಿದ್ದಾರೆ. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವವೇ ಆಗುವುದಿಲ್ಲ. ಇದರಲ್ಲಿ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದರು. ಇದನ್ನು ರಾಜಕೀಯವಾಗಿ ನೋಡಬಾರದು. ನಿವೇಶನಗಳು ವಾಪಸ್ ಸಿಕ್ಕರೆ ಹಾಗೂ ಹಣ ಸಿಕ್ಕರೆ ರಾಜ್ಯ ಸರ್ಕಾರಕ್ಕೆ ಲಾಭವಾಗುತ್ತದೆ. ಸರ್ಕಾರದಲ್ಲಿ ಖಜಾನೆ ಖಾಲಿಯಾಗಿ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಖಜಾನೆಗೆ ಹಣ ಬಂದರೆ ಒಳ್ಳೆಯದು. ಇದನ್ನು ಕಾಂಗ್ರೆಸ್‌ನವರು ಸ್ವಾಗತಿಸಬೇಕು. ಇದನ್ನು ರಾಜಕಾರಣ ಎನ್ನಲು ಬಿಜೆಪಿ ನಾಯಕರೇನೂ ದೂರು ನೀಡಿಲ್ಲ ಎಂದರು.

ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದಾದರೆ 3-4 ಸಾವಿರ ಕೋಟಿ ರೂ. ಹಣದ ಅಕ್ರಮ ನಡೆದಿರುವುದು ಹೇಗೆ? ನಿವೇಶನ ಮಂಜೂರಾಗಿದೆ ಎಂದಮೇಲೆ ಅದರ ಹಣ ಯಾರಿಗಾದರೂ ಸಿಕ್ಕೇ ಸಿಕ್ಕಿರುತ್ತದೆ. ಅದಕ್ಕೆ ನಗದಿನಲ್ಲಿ ಹಣ ನೀಡಲಾಗಿರುತ್ತದೆ. ಅಂತಹ ನಗದು ಕಪ್ಪು ಹಣವೇ ಆಗಿರುತ್ತದೆ. ಇಡಿ ಬಗ್ಗೆ ಪ್ರಶ್ನೆ ಮಾಡುವವರು ಕೋರ್ಟ್ನಲ್ಲಿ ಪ್ರಶ್ನೆ ಮಾಡಬಹುದಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು ಕೋರ್ಟ್‌ಗೆ ಹೋಗಲೇ ಇಲ್ಲ. ಇಡಿಗೆ ಅಧಿಕಾರ ಇಲ್ಲವೆಂದಾದರೆ ಎಸ್‌ಐಟಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು. ಮುಂದಿನ ಹೋರಾಟದ ಕುರಿತು ಪಕ್ಷದ ಮಟ್ಟದಲ್ಲಿ ಚರ್ಚಿಸಲಾಗುವುದು. ಇಡಿ ದಾಳಿಯ ನಂತರ ದಾಖಲೆಗಳು ಸಿಕ್ಕ ಬಳಿ ಪರಿಶೀಲಿಸಿ ಹೋರಾಟ ಮಾಡಲಾಗುವುದು ಎಂದರು.

Read More
Next Story