
ಜಾರಿ ನಿರ್ದೇಶನಾಲಯ
ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟ ಪ್ರಕರಣ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಬಂಧನ
ವಿಚಾರಣೆ ಬಳಿಕ ಮಂಜುನಾಥ್ ಗೌಡ ಅವರನ್ನು ಅಧಿಕೃತವಾಗಿ ಬಂಧಿಸಿ, ಬೆಂಗಳೂರಿನ ಪ್ರಥಮ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮಂಜುನಾಥ್ ಗೌಡರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡುವಂತೆ ಆದೇಶ ಹೊರಡಿಸಿದೆ.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ನೀಡಿದ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಏಪ್ರಿಲ್ 8 ರಂದು ಇಡಿ ಅಧಿಕಾರಿಗಳು ಮಂಜುನಾಥ್ ಗೌಡ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದು, ಬೆಂಗಳೂರು ಚಾಮರಾಜಪೇಟೆಯಲ್ಲಿರುವ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ನಡೆಸಲಾಯಿತು.
ವಿಚಾರಣೆ ಬಳಿಕ ಮಂಜುನಾಥ್ ಗೌಡ ಅವರನ್ನು ಅಧಿಕೃತವಾಗಿ ಬಂಧಿಸಿ, ಬೆಂಗಳೂರಿನ ಪ್ರಥಮ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮಂಜುನಾಥ್ ಗೌಡರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡುವಂತೆ ಆದೇಶ ಹೊರಡಿಸಿದೆ.
ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ, ನ್ಯಾಯಾಲಯ ಮಂಜುನಾಥ್ ಗೌಡ ಅವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದೆ. ಜೊತೆಗೆ, ದಿನಕ್ಕೆ 30 ನಿಮಿಷಗಳ ಕಾಲ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ.
ಈ ಹಗರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಇತರರ ಮೇಲೆಯೂ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದ್ದು, ಇಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನೆಲೆ:
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 62 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಸಾಲವನ್ನು ನಕಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ವಿತರಿಸಿದ ಆರೋಪವಿದೆ. ಈ ಪ್ರಕರಣ 2014 ರಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಇಡಿ ಸಹ ಇಸಿಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಮಂಜುನಾಥ್ ಗೌಡಗೆ ಸಮನ್ಸ್ ಜಾರಿಗೊಳಿಸಿತ್ತು. ಇಡಿ ಸಮನ್ಸ್ ಪ್ರಶ್ನಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನ ಇತ್ತೀಚೆಗೆ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಡಿ ಮಂಜುನಾಥ್ ಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಬಳಿಕ ಮಂಗಳವಾರ(ಏಪ್ರಿಲ್ 08) ಬೆಂಗಳೂರಿನಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಸಿದ್ದರು. ಇದೀಗ ಮಂಜುನಾಥ್ ಅವರನ್ನು ಇಡಿ ಬಂಧಿಸಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.