ದಕ್ಷಿಣ ರಾಜ್ಯಗಳ ಮೈತ್ರಿಕೂಟ ರಚನೆ: ಬಸವರಾಜ ರಾಯರೆಡ್ಡಿ ಪ್ರತಿಪಾದನೆ
x

ದಕ್ಷಿಣ ರಾಜ್ಯಗಳ ಮೈತ್ರಿಕೂಟ ರಚನೆ: ಬಸವರಾಜ ರಾಯರೆಡ್ಡಿ ಪ್ರತಿಪಾದನೆ

`ಒಕ್ಕೂಟ ವ್ಯವಸ್ಥೆಯಲ್ಲಿನ ಎಲ್ಲ ರಾಜ್ಯಗಳಿಗೂ ಸಮಾನ ಹಕ್ಕು ಹಾಗೂ ಅವಕಾಶ ನೀಡಲು ದಕ್ಷಿಣ ರಾಜ್ಯಗಳ ಆರ್ಥಿಕ ಮೈತ್ರಿಕೂಟ ರಚನೆ ಅಗತ್ಯ' ಎಂದು ಬಸವರಾಜ ರಾಯರೆಡ್ಡಿ ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.


ಒಕ್ಕೂಟ ವ್ಯವಸ್ಥೆ ಗಂಡಾಂತರದಲ್ಲಿದ್ದು, ಎಲ್ಲವೂ ಕೇಂದ್ರ ನಿಯಂತ್ರಿತ ವ್ಯವಸ್ಥೆಯಾಗುತ್ತಿದೆ ಎಂಬ ಭಾವನೆ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ರಾಜ್ಯಗಳ ಆರ್ಥಿಕ ಮೈತ್ರಿಕೂಟ ರಚನೆ ಅಗತ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಲಹೆಗಾರ ಹಾಗೂ ಹಿರಿಯ ರಾಜಕಾರಣಿ ಬಸವರಾಜ ರಾಯರೆಡ್ಡಿ ಪ್ರತಿಪಾದಿಸಿದ್ದಾರೆ.

`ಒಕ್ಕೂಟ ವ್ಯವಸ್ಥೆಯಲ್ಲಿನ ಎಲ್ಲ ರಾಜ್ಯಗಳಿಗೂ ಸಮಾನ ಹಕ್ಕು ಹಾಗೂ ಅವಕಾಶ ನೀಡಲು ದಕ್ಷಿಣ ರಾಜ್ಯಗಳ ಆರ್ಥಿಕ ಮೈತ್ರಿಕೂಟ ರಚನೆ ಅಗತ್ಯ' ಎಂದು ಬಸವರಾಜ ರಾಯರೆಡ್ಡಿ ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ದಕ್ಷಿಣದ ರಾಜ್ಯಗಳಿಗೆ ನ್ಯಾಯಸಮ್ಮತ ಪಾಲು ದೊರೆಯುವ ಆರ್ಥಿಕ ಸಹಯೋಗ ವೇದಿಕೆಯೊಂದನ್ನು ರೂಪಿಸುವ ಮೂಲಕ ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವ ವ್ಯವಸ್ಥೆ ಆಗಬೇಕಿದೆ ಎಂದು ರಾಯರೆಡ್ಡಿ ಹೇಳಿದರು. ಇತ್ತೀಚೆಗೆ ಸಂಸದ ಡಿ.ಕೆ.ಸುರೇಶ್ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮುಂದುವರಿದಲ್ಲಿ, ದಕ್ಷಿಣದ ರಾಜ್ಯಗಳು ಪ್ರತ್ಯೇಕವಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದೀಗ ರಾಯರೆಡ್ಡಿ ಅವರು `ದಕ್ಷಿಣದ ರಾಜ್ಯಗಳ ಆರ್ಥಿಕ ಸಹಯೋಗ'ವನ್ನು ಪ್ರಸ್ತಾಪಿಸಿದ್ದಾರೆ.

`ವೇದಿಕೆಯೊಂದನ್ನು ಒಕ್ಕೂಟ ಮಾದರಿಯಲ್ಲೇ ರಚಿಸಲಾಗುತ್ತಿದ್ದು, ಇದರಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಇರುತ್ತವೆ. ತಮ್ಮ ಧ್ವನಿ ಕೇಳುವಂತೆ ಆಗಲು ದಕ್ಷಿಣದ ರಾಜ್ಯಗಳಿಗೆ ಪ್ರಭಾವಶಾಲಿ ವೇದಿಕೆಯೊಂದು ಅಗತ್ಯವಿದೆ' ಎಂದು ಹೇಳಿದರು.

ಹದಿನೈದನೇ ಹಣಕಾಸು ಆಯೋಗ

ಕಳೆದ ನಾಲ್ಕು ವರ್ಷಗಳಲ್ಲಿನ ತೆರಿಗೆ ಪಾಲು ನೀಡಿಕೆಯಲ್ಲಿ ಅಸಮರ್ಪಕತೆಯಿಂದ ರಾಜ್ಯಕ್ಕೆ 45,000 ಕೋಟಿ ರೂ. ನಷ್ಟವಾಗಿದೆ ಎಂದು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದರು. `ಕನ್ನಡಿಗರು ನೀಡುತ್ತಿರುವ ತೆರಿಗೆ ಹಣ ಅವರ ಕಷ್ಟಕ್ಕೆ ದಕ್ಕುತ್ತಿಲ್ಲ ಮತ್ತು ಉತ್ತರದ ರಾಜ್ಯಗಳಿಗೆ ಬಳಕೆಯಾಗುತ್ತಿದೆ. ಇಂಥ ಅನ್ಯಾಯವನ್ನು ತಡೆದುಕೊಳ್ಳಬಾರದು' ಎಂದು ಹೇಳಿದ್ದರು. `ಕನ್ನಡಿಗರಿಗೆ ನ್ಯಾಯ ಹಾಗೂ ಸಮರ್ಪಕವಾಗಿ ನಡೆಸಿಕೊಳ್ಳಬೇಕೆಂದು ಬೇಡಿಕೆ ಇಡುವಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ' ಎಂದು ಎಕ್ಸ್ ನಲ್ಲಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದರು.

ತೆರಿಗೆಯಲ್ಲಿ ಪಾಲು ಹಾಗೂ ಅನುದಾನ ಹಂಚಿಯೆಯಲ್ಲಿನ ತಾರತಮ್ಯವನ್ನು ಪ್ರತಿಭಟಿಸಿ, ದಿಲ್ಲಿಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಸಂಸದರು ಫೆಬ್ರವರಿ 7 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಮುನ್ನಾದಿನ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ನಡೆದಿರುವ #southtaxmovement ಆಂದೋಲನವನ್ನು ಬೆಂಬಲಿಸಿರುವ ಅವರು, `ಕನ್ನಡಿಗರ ತೆರಿಗೆ ಹಣ ಕನ್ನಡಿಗರ ಕಷ್ಟಕ್ಕೆ ಬಳಕೆ ಆಗಬೇಕು' ಎಂದು ಬೆಂಬಲಿಸಿದ್ದಾರೆ.

`ಉತ್ತರದ ರಾಜ್ಯಗಳು ನಮಗೆ ಮಾದರಿಯಲ್ಲ. ಇದೊಂದು ತಪ್ಪು ಕಲ್ಪನೆ. ಕಠಿಣ ಶ್ರಮದಿಂದ ದೇಶ ನಿರ್ಮಾಣಕ್ಕೆ ನೆರವಾಗುತ್ತಿರುವ ಕರ್ನಾಟಕ ಎಲ್ಲರಿಗೂ ಮಾದರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ' ಎಂದಿರುವ ಅವರು ನ್ಯಾಯಕ್ಕಾಗಿ ಧ್ವನಿ ಎತ್ತಿರುವ ಜನರಿಗೆ ಧನ್ಯವಾದ ಹೇಳಿದ್ದಾರೆ.

Read More
Next Story