ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ, ಬಡವರಿಗೆ ಬಿ-ಖಾತಾ ಭಾಗ್ಯ: ಸಚಿವ ಬೈರತಿ ಸುರೇಶ್
x

ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ, ಬಡವರಿಗೆ 'ಬಿ-ಖಾತಾ' ಭಾಗ್ಯ: ಸಚಿವ ಬೈರತಿ ಸುರೇಶ್

ಬಿಜೆಪಿ ಅಧಿಕಾರದಲ್ಲಿದ್ದಾಗ ಆರು-ಏಳು ವರ್ಷ‌ ಚುನಾವಣೆ ನಡೆಸದೇ ಕಾಲಹರಣ ಮಾಡಿತು. ಅಂದು ಸ್ಥಳೀಯ ಸಂಸ್ಥೆಗಳಿಗೆ ಅಥವಾ ಚುನಾವಣೆ ನಡೆಸುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ಧ್ವನಿ ಎತ್ತಲಿಲ್ಲ.


Click the Play button to hear this message in audio format

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸ್ವಾರಸ್ಯಕರ ಹಾಗೂ ಗಂಭೀರ ಚರ್ಚೆ ನಡೆಯಿತು.ಪ್ರತಿಪಕ್ಷ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರ ಚುನಾವಣೆ ನಡೆಸಲು ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಆಕ್ಷೇಪಿಸಿದಾಗ , ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ತಿರುಗೇಟು ನೀಡಿದರು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಸರ್ಕಾರದ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ಬಿಜೆಪಿ ಅಧಿಕಾರದಲ್ಲಿದ್ದಾಗ ಸುಮಾರು ಆರು-ಏಳು ವರ್ಷಗಳ ಕಾಲ ಚುನಾವಣೆ ನಡೆಸದೇ ಕಾಲಹರಣ ಮಾಡಿತು. ಅಂದು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಹಸ್ತಾಂತರಿಸುವ ಬಗ್ಗೆ ಅಥವಾ ಚುನಾವಣೆ ನಡೆಸುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ಧ್ವನಿ ಎತ್ತಲಿಲ್ಲ. ಅಂದು ಚುನಾವಣೆ ನಡೆಸುವ ಧೈರ್ಯ ತೋರದವರು ಇಂದು ನಮಗೆ ಪಾಠ ಹೇಳಿಕೊಡಲು ಬರುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ವರ್ಷಗಳು ಪೂರ್ಣಗೊಂಡಿಲ್ಲ. ಆದರೂ ಪ್ರಜಾಪ್ರಭುತ್ವದ ತಳಹದಿಯಂತಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಿಗೆ ಹಾಗೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ನಾವು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿ ಶೀಘ್ರವೇ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಬಡ ಮತ್ತು ಮಧ್ಯಮ ವರ್ಗಕ್ಕೆ 'ಬಿ-ಖಾತಾ' ಸಂಜೀವಿನಿ

ಇದೇ ವೇಳೆ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಪ್ರದೇಶಗಳಲ್ಲಿನ ಆಸ್ತಿ ಮಾಲೀಕರಿಗೆ, ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ 'ಬಿ-ಖಾತಾ' ವಿತರಣೆಯ ಮಹತ್ವವನ್ನು ವಿವರಿಸಿದರು. ನಗರ ಪ್ರದೇಶಗಳು ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳಲ್ಲಿ ಅಥವಾ ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಲಕ್ಷಾಂತರ ಜನರು ಆಸ್ತಿ ದಾಖಲೆಗಳಿಲ್ಲದೆ ಪರದಾಡುತ್ತಿದ್ದರು. ಅಂತಹ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಮ್ಮ ಆಸ್ತಿಯ ಮೇಲೆ ಅಧಿಕೃತ ಹಕ್ಕು ಮತ್ತು ಪ್ರಮಾಣೀಕೃತ ದಾಖಲೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಬಿ-ಖಾತಾ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಬಿ-ಖಾತಾ ವಿತರಣೆಯಿಂದ ಆಗುವ ದ್ವಿಮುಖ ಲಾಭಗಳ ಬಗ್ಗೆ ವಿವರಿಸಿದ ಸಚಿವ ಸುರೇಶ್, ಇದುವರೆಗೂ ಸಾವಿರಾರು ಕಟ್ಟಡಗಳು ಮತ್ತು ಆಸ್ತಿಗಳು ಇದ್ದರೂ, ಅವುಗಳಿಗೆ ಸರಿಯಾದ ದಾಖಲೆ ಇಲ್ಲದ ಕಾರಣ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ತೆರಿಗೆ ಬರುತ್ತಿರಲಿಲ್ಲ. ಈಗ ಬಿ-ಖಾತಾ ನೀಡುವುದರಿಂದ ಅಂತಹ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಇದರಿಂದ ಸ್ಥಳೀಯ ಸಂಸ್ಥೆಗಳ ಆದಾಯವೂ ಹೆಚ್ಚಲಿದೆ. ಮತ್ತೊಂದೆಡೆ, ನಾಗರಿಕರಿಗೆ ತಮ್ಮ ಆಸ್ತಿಗೊಂದು ಶಾಶ್ವತ ಹಾಗೂ ಕಾನೂನುಬದ್ಧ ದಾಖಲೆ ದೊರೆತಂತಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಮಂಗಳೂರು 'ಟಾಪ್ 5' ಪಟ್ಟಿಗೆ ಸೇರಲು ಸಂಕಲ್ಪ

ರಾಷ್ಟ್ರೀಯ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಡೆಯುವ ಸ್ವಚ್ಛ ನಗರಗಳ ಸಮೀಕ್ಷೆಯಲ್ಲಿ ಕರಾವಳಿ ನಗರಿ ಮಂಗಳೂರನ್ನು ದೇಶದ 'ಟಾಪ್ 5' ನಗರಗಳ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಪಣ ತೊಟ್ಟಿದ್ದು, ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಪ್ರಮುಖ ನಗರಗಳ ಸ್ವಚ್ಛತಾ ಸಾಧನೆಯನ್ನು ವಿವರಿಸಿದರು. ಕಳೆದ ಬಾರಿಯ ಸಮೀಕ್ಷೆಯಲ್ಲಿ ಮೈಸೂರು ಮತ್ತು ದಾವಣಗೆರೆ ನಗರಗಳು ಟಾಪ್ 5ರಲ್ಲಿ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಇದೇ ವೇಳೆ ಮಂಗಳೂರು ಕೂಡ ಟಾಪ್ 25ರಲ್ಲಿ ಸ್ಥಾನ ಪಡೆದಿರುವುದು ಸಂತಸದ ವಿಷಯ. ಆದರೆ, ಮುಂದಿನ ದಿನಗಳಲ್ಲಿ ಮಂಗಳೂರನ್ನು ಅಗ್ರ 5 ನಗರಗಳ ಸಾಲಿಗೆ ತರಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 310 ರಿಂದ 330 ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ಪೈಕಿ ಶೇ. 70ರಷ್ಟು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದೆ. ಉಳಿದ ತ್ಯಾಜ್ಯದ ಸಮರ್ಪಕ ವಿಲೇವಾರಿಗೂ ಒತ್ತು ನೀಡಲಾಗಿದೆ. ನಗರದಲ್ಲಿ ಕಸ ವಿಂಗಡಣೆಯನ್ನು ವ್ಯವಸ್ಥಿತಗೊಳಿಸಲು, ಪ್ರತಿ ಶುಕ್ರವಾರ ಕೇವಲ ಒಣ ಕಸವನ್ನು ಮಾತ್ರ ಸಂಗ್ರಹಿಸುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇದಲ್ಲದೆ, ಹೆಚ್ಚು ತ್ಯಾಜ್ಯ ಉತ್ಪಾದಿಸುವ ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳು ತಮ್ಮ ತ್ಯಾಜ್ಯವನ್ನು ತಾವೇ ಸ್ಥಳೀಯವಾಗಿ ಸಂಸ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕಸವನ್ನು ಸಮರ್ಪಕವಾಗಿ ವಿಂಗಡಣೆ ಮಾಡದವರು ಮತ್ತು ನಿಯಮದಂತೆ ತ್ಯಾಜ್ಯ ಸಂಸ್ಕರಣೆ ಮಾಡದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲೇ ಇಲ್ಲೂ ಸಹ ದಂಡ ವಿಧಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಈ ಕಾರ್ಯಕ್ಕೆ ಅಡ್ಡಿಪಡಿಸಿದರೆ ಅಥವಾ ನಿಯಮ ಮೀರಿದರೆ ಪೊಲೀಸರ ನೆರವು ಪಡೆಯಲೂ ಸೂಚಿಸಲಾಗಿದೆ ಎಂದು ಎಚ್ಚರಿಸಿದರು.

ಸೌರಚಾಲಿತ ಕಣ್ಗಾವಲು

ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ನಗರದ ಪ್ರಮುಖ ಕಡೆಗಳಲ್ಲಿ 60ಕ್ಕೂ ಹೆಚ್ಚು ಸೌರಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಸ ಎಸೆಯುವವರ ಮೇಲೆ ನಿಗಾ ಇಡಲಾಗುತ್ತಿದೆ. ಈ ಎಲ್ಲಾ ಸಮಗ್ರ ಕ್ರಮಗಳ ಮೂಲಕ ಮಂಗಳೂರನ್ನು ದೇಶದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದು ವಿವರಿಸಿದರು.

Read More
Next Story