
ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ
ಡಿಸಿಎಂ ಡಿಕೆಶಿ ಆರ್‌ಎಸ್‌ಎಸ್ ಪ್ರಾರ್ಥನೆಗೆ ಕಾಂಗ್ರೆಸ್‌ನಲ್ಲಿ ಭಿನ್ನ ಸ್ವರ: ಸಚಿವರು, ಮಾಜಿ ಸಚಿವರಿಂದ ತೀವ್ರ ಅಸಮಾಧಾನ
ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದೇ ಎಂದ ಪ್ರಶ್ನಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾರ್ಥನಾ ಗೀತೆಯನ್ನು ಹೇಳಿದ್ದು, ಇದೀಗ ಸ್ವಪಕ್ಷ ಕಾಂಗ್ರೆಸ್‌ನಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರೆ, ಮಾಜಿ ಸಚಿವ ಕೆ.ಎನ್. ರಾಜಣ್ಣ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, "ಡಿ.ಕೆ. ಶಿವಕುಮಾರ್ ಅವರಿಗೆ ಸಂಸ್ಕೃತ ಚೆನ್ನಾಗಿ ಬರುತ್ತದೆ, ಹಾಗಾಗಿ ಸಂದರ್ಭಕ್ಕೆ ತಕ್ಕಂತೆ ಹಾಡಿದ್ದಾರೆ ಅಷ್ಟೇ. ಅದರಿಂದ ಮುಖ್ಯಮಂತ್ರಿ ಸ್ಥಾನ ಸಿಗುವುದಾದರೆ ನಾನೂ ಹೇಳುತ್ತೇನೆ," ಎಂದು ವ್ಯಂಗ್ಯವಾಡಿದರು. ಇದು ಡಿಸಿಎಂ ನಡೆಗೆ ಅವರ ಅಸಮ್ಮತಿಯಾಗಿದೆ.
"ಆರ್‌ಎಸ್‌ಎಸ್ ವಿಷಕಾರಿ ಸಂಘಟನೆ" ಪ್ರಿಯಾಂಕ್ ಖರ್ಗೆ
ಸಂಘ ಪರಿವಾರದ ಕಟು ಟೀಕಾಕಾರರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ, "ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ, ಪ್ರತಿಯೊಬ್ಬ ಪ್ರಜೆಯೂ ಆರ್‌ಎಸ್‌ಎಸ್‌ಗೆ ಸೋಕಿದ ಗಾಳಿಯೂ ತಾಗಬಾರದು ಎಂದು ಪ್ರತಿಜ್ಞೆ ಮಾಡಬೇಕು. ಜನಾಂಗೀಯ ದ್ವೇಷ ಮತ್ತು ಮನುವಾದವನ್ನು ನರನಾಡಿಗಳಲ್ಲಿ ತುಂಬಿಕೊಂಡಿರುವ ಆರ್‌ಎಸ್‌ಎಸ್ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಯಾವಾಗಲೂ ಶತ್ರುವಾಗಿಯೇ ನೋಡುತ್ತದೆ," ಎಂದು 'ಎಕ್ಸ್' ತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ವಿರೋಧವನ್ನು ಸ್ಪಷ್ಟಪಡಿಸಿದ್ದಾರೆ.
"ಅವರು ಏನು ಬೇಕಾದರೂ ಮಾಡಬಹುದು" - ಕೆ.ಎನ್. ರಾಜಣ್ಣ
ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಅವರು ಆರ್‌ಎಸ್‌ಎಸ್ ಗೀತೆ ಹಾಡಬಹುದು, ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾಡುವಂತಿಲ್ಲ," ಎಂದು ಕಿಡಿಕಾರಿದರು.
"ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗಂಗಾ ಸ್ನಾನದಿಂದ ಬಡತನ ನಿವಾರಣೆಯಾಗುವುದಿಲ್ಲ ಎಂದಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷರಾದ ಇವರು ಹೋಗಿ ಪುಣ್ಯಸ್ನಾನ ಮಾಡಿದರು. ರಾಹುಲ್ ಗಾಂಧಿ ಅವರು ಅಂಬಾನಿ ಮಗನ ಮದುವೆ ಆಮಂತ್ರಣ ತಿರಸ್ಕರಿಸಿದರೆ, ಇವರು ಕುಟುಂಬ ಸಮೇತ ಹೋಗಿಬರುತ್ತಾರೆ. ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ಉತ್ತರ ನೀಡಲಾಗುವುದು," ಎಂದು ರಾಜಣ್ಣ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.