ಮಳೆ ರೌದ್ರಾವತಾರ | ಗುಡ್ಡ ಕುಸಿತ, ಪ್ರವಾಹ, ರಸ್ತೆ, ರೈಲು ಸಂಚಾರ ವ್ಯತ್ಯಯ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇರಳದ ವಯನಾಡು ಗಡಿಯಂಚಿನ ಮಡಿಕೇರಿ ಮತ್ತು ಸಕಲೇಶಪುರ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡಕುಸಿತದಿಂದಾಗಿ ಚಾರ್ಮಾಡಿ ಮತ್ತು ಶಿರಾಡಿ ಘಾಟಿಯಲ್ಲಿ ರಸ್ತೆ ಮತ್ತು ರೈಲು ಮಾರ್ಗ ಸಂಚಾರ ವ್ಯತ್ಯಯ ಉಂಟಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇರಳದ ವಯನಾಡು ಗಡಿಯಂಚಿನ ಮಡಿಕೇರಿ ಮತ್ತು ಸಕಲೇಶಪುರ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡಕುಸಿತದಿಂದಾಗಿ ಚಾರ್ಮಾಡಿ ಮತ್ತು ಶಿರಾಡಿ ಘಾಟಿಯಲ್ಲಿ ರಸ್ತೆ ಮತ್ತು ರೈಲು ಮಾರ್ಗ ಸಂಚಾರ ವ್ಯತ್ಯಯ ಉಂಟಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟ್ರದ ಜಲಾಶಯಗಳಿಂದ ಹರಿದುಬರುತ್ತಿರುವ ನೀರಿನಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ಗ್ರಾಮಗಳು ಮುಳುಗಡೆ ಆಗಿವೆ. ಬೆಳಗಾವಿ ಜಿಲ್ಲೆಯ ಗಡಿ ಪ್ರದೇಶ ನಿಪ್ಪಾಣಿಯಲ್ಲಿ ಹಲವು ಹಳ್ಳಿಗಳು ಜಲಾವೃತವಾಗಿವೆ.
ಚಾರ್ಮಾಡಿ ಘಾಟಿ ಬಂದ್
ಚಾರ್ಮಾಡಿ, ಸಕಲೇಶಪುರ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಾಸನ ಜಿಲ್ಲೆಯಲ್ಲಿ ಸೋಮವಾರದಿಂದಲೇ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಜಿಲ್ಲೆಯ ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತ ಸಂಭವಿಸಿದ್ದು, ರಸ್ತೆ 200 ಮೀಟರ್ಗೂ ಹೆಚ್ಚು ದೂರ ಕೊಚ್ಚಿ ಹೋಗಿದೆ. ಪ್ರಮುಖ ಸಂಪರ್ಕ ರಸ್ತೆಯೇ ಕೊಚ್ಚಿ ಹೋಗಿರುವುದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿತ್ತು.
ಚಾರ್ಮಾಡಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮಣ್ಣು, ಮರ ಬಿದ್ದಿದೆ. ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕೊಟ್ಟಿಗೆಹಾರ, ಬೆಳ್ತಂಗಡಿ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಚಾರ್ಮಾಡಿ ಘಾಟಿಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ.
ಸಕಲೇಶಪುರ ತಾಲ್ಲೂಕಿನ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿ ಅವಾಂತರ ಸೃಷ್ಟಿಯಾಗಿದೆ. ದಾರಿಗಳೇ ಜಲಾವೃತವಾಗಿ ಜನರ ಆತಂಕ ಹೆಚ್ಚಾಗಿದೆ. ಜನರ ಪರದಾಟದ ನಡುವೆಯೂ ಜಿಲ್ಲಾಡಳಿತ ರಜೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ. ಭಾರಿ ಮಳೆಯ ನಡುವೆ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಗಿದೆ.
ಭಾರೀ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮುಳುಗಡೆ ಹಿನ್ನೆಲೆ ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಹದಿನೈದು ದಿನ ರೈಲು ಬಂದ್
ಹಾಸನ ಜಿಲ್ಲೆ ಸಕಲೇಶಪುರದ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ನಿನ್ನೆಯೂ ಮುಂದುವರಿಯಿತು. ಬಾರಿ ಮಳೆಯ ನಡುವೆಯೂ 400ಕ್ಕೂ ಹೆಚ್ಚು ಕಾರ್ಮಿಕರಿಂದ ಕಾರ್ಯಾಚರಣೆ ನಡೆಯುತ್ತಿದ್ದು, 15 ದಿನಗಳ ಕಾಲ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗ ಬಂದ್ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಸೋಮವಾರಪೇಟೆ ತಾಲೂಕಿನ ಹಟ್ಟಿಹಾಡಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗುಡ್ಡ ಕುಸಿಯುತ್ತಿದೆ. ಗುಡ್ಡ ಕುಸಿತ ಹಿನ್ನೆಲೆ ಮನೆ ತೊರೆಯಲು ನಿವಾಸಿಗಳಿಗೆ ಮಾದಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸೇತುವೆ ಮುಳುಗಡೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಬಾಳೆಹೊನ್ನೂರು-ಕಳಸ ಸಂಪರ್ಕಿಸುವ ಮಹಲ್ಗೋಡು ಸೇತುವೆ ಮುಳುಗಿದೆ. ಮಾಗುಂಡಿಯಿಂದ ಹುಯಿಗೆರೆ, ಬಿಕ್ಕರಣೆ, ಮಣಬೂರು, ಸಾರಗೋಡು, ಕರಗಣೆ ಸಂಪರ್ಕ ಬಂದ್ ಆಗಿದೆ. ಅಡಿಕೆ ತೋಟಗಳು ಸಂಪೂರ್ಣ ಜಲಾವೃತವಾಗಿದ್ದು, ಭಾರೀ ಮಳೆಯಿಂದಾಗಿ ಭದ್ರಾ ನದಿ ಪಾತ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ.
ಶೃಂಗೇರಿಯಲ್ಲಿ ತಾತ್ಕಾಲಿಕವಾಗಿ ನಿಷೇಧ
ಮಳೆಯಿಂದಾಗಿ ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿಯ ಅಬ್ಬರ ಹೆಚ್ಚಾಗಿದೆ. ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದೆ. ಅಂಗಡಿ, ಮಳಿಗಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಗೊಂಡಿದೆ. ಶೃಂಗೇರಿ ಪಟ್ಟಣದಲ್ಲಿ ಮತ್ತೆ ತುಂಗಾ ಪ್ರವಾಹಕ್ಕೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಸುಮಾರು 20ಕ್ಕೂ ಹೆಚ್ಚು ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ಮುಂದಿನ ಐದು ದಿನ ಮಳೆ
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರಾವಳಿಯ ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಹಿನ್ನಲೆಯಲ್ಲಿ ಮಂಗಳವಾರ(ಜು.೩೦) ಆರೆಂಜ್ ಅಲರ್ಟ್ ನೀಡಲಾಗಿದೆ. ನಂತರದ ಎರಡು ದಿನ (ಆಗಸ್ಟ್ 2ರವರೆಗೆ) ಭಾರಿ ಮಳೆ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ನಂತರ ಆಗಸ್ಟ್ 4ರವರೆಗೆ ಸಾಧಾರಣದಿಂದ ಭಾರೀ ಮಳೆ ಬರಲಿದೆ.
ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಹಗುರದಿಂದ ಮಳೆಯಾಗಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಯಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.