ಮಾದಕ ದ್ರವ್ಯ ಮಾರಾಟ | ಮೂವರು ವಿದೇಶಿಯರು ಸೇರಿ ಎಂಟು ಮಂದಿ ಬಂಧನ
ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಜನ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಸುಮಾರು 2.74 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಹಲವು ಕಡೆ ಸಿಸಿಬಿ ಪೊಲೀಸರು ಮಾದಕ ವಸ್ತುಗಳ ಮಾರಾಟದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು, ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಸುಮಾರು 2.74 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಮೂವರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಸುಮಾರು 50 ಲಕ್ಷ ಬೆಲೆಬಾಳುವ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕಿಸಲ್, ಕೋಕೇನ್, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ವಿದೇಶಿ ಪ್ರಜೆಗಳು ಬಿಜಿನೆಸ್ ಹಾಗೂ ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ವಾಸವಾಗಿರುವ ಅವರ ದೇಶದ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಇವರ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಹಾಗೂ ವಿದೇಶಿ ಕಾಯ್ದೆ ರೀತ್ಯ ಪ್ರಕರಣ ದಾಖಲಾಗಿದೆ. ಈ ಮೂವರು ವಿದೇಶಿ ಪ್ರಜೆಗಳ ಪೈಕಿ ಓರ್ವನ ವಿರುದ್ಧ ಸೈಬರ್ ವಂಚನೆ ಹಾಗೂ ಐಟಿ ಪ್ರಕರಣಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 28 ಪ್ರಕರಣಗಳು ದಾಖಲಾಗಿವೆ.
ವಿವಿ.ಪುರಂ ಪೊಲೀಸ್ ಠಾಣೆಯ ಪ್ರಕರಣ
ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಬಿಐ ಪೊಲೀಸರು ಸ್ಥಳೀಯ ಓರ್ವ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಆತನಿಂದ 10 ಲಕ್ಷ ಮೌಲ್ಯದ 5 ಕೆಜಿ ಗಾಂಜಾ. 7 ಎಲ್.ಎಸ್ಡಿ ಸಿಪ್ಪೆಗಳು, 25 ಗ್ರಾಂ ಚರಸ್, 1 ಮೊಬೈಲ್ ಫೋನ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದು ಆರೋಪಿಯು ವಿದೇಶದಲ್ಲಿರುವ ತನ್ನ ಸ್ನೇಹಿತನಿಂದ ಮತ್ತು ಸ್ಥಳೀಯ ಡ್ರಗ್ ಪೆಡ್ಲರ್‌ಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ ಪರಿಚಯದ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕಾಟನ್‌ಪೇಟೆ ಪೊಲೀಸ್ ಠಾಣೆಯ ಪಕರಣ
ಸ್ಥಳೀಯ ಮಾಹಿತಿ ಆಧಾರದ ಮೇಲೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಬಿಐ ಪೊಲೀಸರು ದಾಳಿ ನಡೆಸಿದ್ದು, ಸ್ಥಳೀಯ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು, ಸ್ನೇಹಿತರ ಸಹಾಯದಿಂದ ಮಾದಕ ವಸ್ತುಗಳನ್ನು ಖರೀದಿಸಿ, ಐಟಿ/ಬಿಟಿ ಉದ್ಯೋಗಿಗಳಿಗೆ, ಸ್ಥಳೀಯ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನಿಂದ 14 ಲಕ್ಷ ಮೌಲ್ಯದ 7 ಕೆಜಿ ಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಸ್ಥಳೀಯ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು. ಆತನು ಖಾಸಗಿ ಉದ್ಯೋಗಿಯಾಗಿದ್ದು, ಪರಿಚಯಸ್ಥ ಸ್ನೇಹಿತರಿಂದ ಮಾದಕ ವಸ್ತುಗಳನ್ನು ಖರೀದಿಸಿ, ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಈತನನ್ನು ವಶಕ್ಕೆ ಪಡೆದುಕೊಂಡಿರುವ ಸಿಬಿಐ ಪೊಲೀಸರು ರೂ 2 ಕೋಟಿ ಮೌಲ್ಯದ 2 ಕೆಜಿ ತೂಕದ ಹ್ಯಾಶಿಸ್ ಆಯಿಲ್, 716 ಗ್ರಾಂ ತೂಕದ ಚರಸ್, ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.