ಸಿಸಿಬಿಯಿಂದ ಡ್ರಗ್ಸ್ ಬೇಟೆ: 7 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ
x

ಸಿಸಿಬಿಯಿಂದ ಡ್ರಗ್ಸ್ ಬೇಟೆ: 7 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ

ಸಿಸಿಬಿ ಪೊಲೀಸರು ಐದು ಪ್ರತ್ಯೇಕ ಪ್ರಕರಣಗಳಲ್ಲಿ 19 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 14 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ.


Click the Play button to hear this message in audio format

ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಿಸಿಬಿಯ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು, ಐದು ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 19 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 14 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಒಟ್ಟು 7.7 ಕೋಟಿ ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟಲ್ ಮತ್ತು ಹೈಡ್ರೋ-ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಗಳಲ್ಲಿ 2.804 ಕೆ.ಜಿ. ಎಂ.ಡಿ.ಎಂ.ಎ ಕ್ರಿಸ್ಟಲ್, 2.100 ಕೆ.ಜಿ. ಹೈಡ್ರೋ-ಗಾಂಜಾ, ಒಂದು ಮೋಟಾರ್ ಸೈಕಲ್ ಹಾಗೂ ಏಳು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಸುದ್ದಗುಂಟೆಪಾಳ್ಯದಲ್ಲಿ ನೈಜೀರಿಯಾ ಮಹಿಳೆ ಬಂಧನ:

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 1.52 ಕೋಟಿ ರೂ. ಮೌಲ್ಯದ 760 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, ಒಂದು ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹದೇವಪುರದಲ್ಲಿ ಐವರ ಸೆರೆ:

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಐವರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 60 ಲಕ್ಷ ರೂ. ಮೌಲ್ಯದ 600 ಗ್ರಾಂ ಹೈಡ್ರೋ ಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಬಿ. ನಾರಾಯಣಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವರ್ತೂರಿನಲ್ಲಿ ಕೀನ್ಯಾ ಮಹಿಳೆ ವಶಕ್ಕೆ:

ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಮಹಿಳೆಯೊಬ್ಬಳು ಡ್ರಗ್ಸ್ ಮಾರಾಟದಲ್ಲಿ ತೊಡಗಿರುವ ಬಗ್ಗೆ ಬಂದ ಮಾಹಿತಿಯನ್ನು ಆಧರಿಸಿ, ಕೀನ್ಯಾ ಮೂಲದ ಮಹಿಳಾ ಪೆಡ್ಲರ್‌ನನ್ನು ಬಂಧಿಸಲಾಗಿದೆ. ಆರೋಪಿ 4.08 ಕೋಟಿ ರೂ. ಮೌಲ್ಯದ 2.044 ಕೆ.ಜಿ. ಎಂ.ಡಿ.ಎಂ.ಎ ಕ್ರಿಸ್ಟಲ್, ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ತೂಕದ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಕಳೆದ ವರ್ಷ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದು, ಕಾಮನಹಳ್ಳಿಯಲ್ಲಿ ಹೇರ್ ಡ್ರೆಸರ್ ಆಗಿ ಕೆಲಸ ಮಾಡುತ್ತಿದ್ದಳು. ತಲೆಮರೆಸಿಕೊಂಡಿರುವ ನೈಜೀರಿಯಾ ಮತ್ತು ಟಾಂಜೇನಿಯಾದ ಇಬ್ಬರು ಆರೋಪಿಗಳಿಂದ ಡ್ರಗ್ಸ್ ಖರೀದಿಸಿ, ಪರಿಚಿತ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ಸ್ ಪತ್ತೆ:

ಕೆ.ಜಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಶಂಕಾಸ್ಪದ ಪಾರ್ಸೆಲ್‌ಗಳ ಬಗ್ಗೆ ಮಾಹಿತಿ ಪಡೆದ ಪೊಲೀಸ್‌ ಅಧಿಕಾರಿಗಳು, 1.5 ಕೋಟಿ ರೂ. ಮೌಲ್ಯದ 1.5 ಕೆ.ಜಿ. ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಥೈಲ್ಯಾಂಡ್ ಮತ್ತು ಫ್ರಾನ್ಸ್‌ನಿಂದ ಬಿಸ್ಕೆಟ್ ಮತ್ತು ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಕಳುಹಿಸಿದ್ದರು. ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಕ್ರಮ ವಾಸಿ 11 ವಿದೇಶಿಗರ ಬಂಧನ:

ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ ಹಾಗೂ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ 11 ವಿದೇಶಿ ಪ್ರಜೆಗಳನ್ನು ಬಂಧಿಸಿ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಗಿದೆ. ಆದೇಶದ ಮೇರೆಗೆ ಅವರನ್ನು ವಿದೇಶಿಗರ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಗಡಿಪಾರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಮನೆ ಮಾಲೀಕರಿಗೂ ಎಚ್ಚರಿಕೆ:

ವಿದೇಶಿ ಪ್ರಜೆಗಳಿಗೆ ಅಕ್ರಮವಾಗಿ ಮನೆ ಬಾಡಿಗೆಗೆ ನೀಡಿದ ಆರೋಪದ ಮೇಲೆ ಮನೆ ಮಾಲೀಕರಾದ ಶಿವರಾಮ ಕೃಷ್ಣ ಮತ್ತು ಸಂಗಪ್ಪ ಪಾಟೀಲ ಎಂಬುವವರ ವಿರುದ್ಧ ವಿದೇಶಿ ನಾಗರಿಕರ ಕಾಯ್ದೆ 1946 ಮತ್ತು ಭಾರತೀಯ ನ್ಯಾಯ ಸಂಹಿತೆ 2023ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವಾಗ ಮಾಲೀಕರು ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಇದೇ ವೇಳೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಆರ್‌ಎಂಸಿ ಯಾರ್ಡ್‌ ಮತ್ತು ಜಾಲಹಳ್ಳಿ ಪೊಲೀಸರಿಂದಲೂ ಕಾರ್ಯಾಚರಣೆ:

ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರ್.ಎಂ.ಸಿ. ಯಾರ್ಡ್ ಮತ್ತು ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಗಳಲ್ಲಿ ಒಟ್ಟು 10 ಲಕ್ಷ ರೂ. ಮೌಲ್ಯದ ಎಂ.ಡಿ.ಎಂ.ಎ. ಕ್ರಿಸ್ಟಲ್ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳೇ ಟಾರ್ಗೆಟ್

ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯ ಸರಹದ್ದಿನ ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿರುವ ಇ.ಎಸ್.ಐ. ಆಸ್ಪತ್ರೆ ಬಳಿ ವ್ಯಕ್ತಿಯೊಬ್ಬ ಎಂ.ಡಿ.ಎಂ.ಎ. ಕ್ರಿಸ್ಟಲ್ ಹಾಗೂ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ಆರೋಪಿಯು ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಹೆಚ್ಚಿನ ಲಾಭಕ್ಕಾಗಿ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ₹9.45 ಲಕ್ಷ ಮೌಲ್ಯದ 47 ಗ್ರಾಂ ಎಂ.ಡಿ.ಎಂ.ಎ. ಕ್ರಿಸ್ಟಲ್, 54 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ರೋ ಮೈದಾನದ ಬಳಿ ಗಾಂಜಾ ಮಾರಾಟ

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ರೋ ಆಟದ ಮೈದಾನದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತನು 3-4 ದಿನಗಳ ಹಿಂದೆ ಮೈಸೂರಿನಿಂದ ಗಾಂಜಾ ಖರೀದಿಸಿ ತಂದು, ಬೆಂಗಳೂರಿನಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗಿ ತಿಳಿಸಿದ್ದಾನೆ. ಆರೋಪಿಯಿಂದ 55 ಸಾವಿರ ರೂ. ಮೌಲ್ಯದ 515 ಗ್ರಾಂ ಗಾಂಜಾ ಹಾಗೂ 300 ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Read More
Next Story