ಬರ ಪರಿಹಾರ ಗಜಗರ್ಭ | ನವಮಾಸ ಕಳೆದರೂ ಅನ್ನದಾತರ ಕೈಸೇರದ ಕಾಸು!
x

ಬರ ಪರಿಹಾರ ಗಜಗರ್ಭ | ನವಮಾಸ ಕಳೆದರೂ ಅನ್ನದಾತರ ಕೈಸೇರದ ಕಾಸು!

ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದ್ದು ಕಳೆದ ವರ್ಷದ ಸೆಪ್ಟೆಂಬರಿನಲ್ಲಿ. ಅಂದರೆ, ಬರ ಘೋಷಣೆಯಾಗಿ ಬರೋಬ್ಬರಿ ಒಂಭತ್ತು ತಿಂಗಳು ತುಂಬಿದೆ. ನವಮಾಸ ತುಂಬಿದರೂ ರಾಜ್ಯ ಸರ್ಕಾರದ ಬರ ಪರಿಹಾರ ಎಂಬ ಗಜಗರ್ಭಕ್ಕೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ!


ಕಳೆದ ಮುಂಗಾರು ಹಂಗಾಮಿನ ಭೀಕರ ಬರದ ಸಂಕಷ್ಟದಿಂದ ರಾಜ್ಯದ ರೈತರು ಇನ್ನೂ ಹೊರಬಂದಿಲ್ಲ. ಈ ನಡುವೆ ಮಲೆನಾಡು ಭಾಗದಲ್ಲಿ ಕಳೆದ ಒಂದು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ಮಡಿಕೇರಿ, ಮಂಗಳೂರು, ಉಡುಪಿ ಸೇರಿದಂತೆ ಭಾರೀ ಮಳೆಯಾಗಬೇಕಿದ್ದ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ.

ಹಾಗಾಗಿ ಈ ಭಾಗದ ರೈತರು ಮತ್ತೊಂದು ಬರದ ಆತಂಕದಲ್ಲಿದ್ದಾರೆ. ಈ ನಡುವೆ ಕಳೆದ ವರ್ಷದ ಬರ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ರಾಜ್ಯ ಕಂದಾಯ ಇಲಾಖೆ ನೂರೆಂಟು ತಕರಾರುಗಳನ್ನು ಎತ್ತಿ ಅನ್ನದಾತರನ್ನು ಸತಾಯಿಸುತ್ತಿದ್ದು, ಇಲಾಖೆಯ ಅಧಿಕಾರಿಗಳ ಕಣ್ಣಾಮುಚ್ಚಾಲೆಯಿಂದಾಗಿ, ಪರಿಹಾರ ಎಂಬುದು ರೈತರ ಪಾಲಿಗೆ ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎಂಬಂತಾಗಿದೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಶತಮಾನದಲ್ಲೇ ಕಂಡರಿಯದ ಪ್ರಮಾಣದ ಭೀಕರ ಬರಕ್ಕೆ ರಾಜ್ಯದ ಮಲೆನಾಡು ಮತ್ತು ಮಧ್ಯ ಕರ್ನಾಟಕ ಸಾಕ್ಷಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮೂರ್ನಾಲ್ಕು ಸುತ್ತು ಬರ ಸಮೀಕ್ಷೆ ನಡೆಸಿದ್ದ ರಾಜ್ಯ ಮತ್ತುಬ ಕೇಂದ್ರ ತಂಡಗಳು ಅಂತಿಮವಾಗಿ ಪರಿಹಾರ ನೀಡುವುದಾಗಿ ಘೋಷಿಸಿತ್ತು. ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ ಬರೋಬ್ಬರಿ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಮಲೆನಾಡಿನ ನಡುಮನೆ ಶಿವಮೊಗ್ಗದಂತಹ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದರೆ ಮಲೆನಾಡು ಭಾಗದಲ್ಲಿ ಬರದ ತೀವ್ರತೆ ಎಷ್ಟಿತ್ತು ಎಂಬುದನ್ನು ಊಹಿಸಬಹುದು.

ನವಮಾಸ ತುಂಬಿದರೂ ಗಜಗರ್ಭಕ್ಕೆ ಸಿಕ್ಕಿಲ್ಲ ಮುಕ್ತಿ!

ಆದರೆ, ಬರಪೀಡಿತ ಪ್ರದೇಶ ಘೋಷಣೆಗೆ ತೋರಿದ ಆಸಕ್ತಿಯನ್ನು ರಾಜ್ಯ ಸರ್ಕಾರ, ಪರಿಹಾರವನ್ನು ವ್ಯವಸ್ಥಿತವಾಗಿ ತಲುಪಿಸುವ ಬಗ್ಗೆ ತೋರುತ್ತಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದ್ದು ಕಳೆದ ವರ್ಷದ ಸೆಪ್ಟೆಂಬರಿನಲ್ಲಿ. ಅಂದರೆ, ಬರ ಘೋಷಣೆಯಾಗಿ ಬರೋಬ್ಬರಿ ಒಂಭತ್ತು ತಿಂಗಳು ತುಂಬಿದೆ. ನವಮಾಸ ತುಂಬಿದರೂ ರಾಜ್ಯ ಸರ್ಕಾರದ ಬರ ಪರಿಹಾರ ಎಂಬ ಗಜಗರ್ಭಕ್ಕೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.

ಏಕೆಂದರೆ, ಈವರೆಗೆ ರಾಜ್ಯ ಸರ್ಕಾರ ಪರಿಹಾರ ವಿತರಿಸಿರುವುದು ಬರ ಪೀಡಿತ ರೈತರ ಪೈಕಿ ಕೇವಲ ಶೇ.70 ರಷ್ಟು ಮಂದಿಗೆ ಮಾತ್ರ. ಉಳಿದ ಶೇ.30 ರಷ್ಟು ರೈತರು ಈಗಲೂ ಪರಿಹಾರ ಹಣಕ್ಕಾಗಿ ಚಾಕತಪಕ್ಷಿಯಂತೆ ಕಾಯುತ್ತಲೇ ಇದ್ದಾರೆ. ಮುಂಗಾರು ಬೆಳೆ ನಾಶವಾಗಿ, ಹಿಂಗಾರು ಬೆಳೆ ಹಾಕಲೂ ಸರ್ಕಾರದ ಪರಿಹಾರ ಹಣ ಕೈಸೇರದೆ ಕಂಗಾಲಾಗಿದ್ದ ರೈತರು ಇದೀಗ ಬಹುತೇಕ ಮತ್ತೊಂದು ಮುಂಗಾರು ಬಿತ್ತನೆ ಮಾಡಿ ಮುಗಿಸುವ ಹಂತದಲ್ಲಿದ್ದಾರೆ. ಮಲೆನಾಡು ಭಾಗದಲ್ಲಿ ಮೆಕ್ಕೆಜೋಳ, ರಾಗಿ ಮತ್ತಿತರ ಬೆಳೆಗಳ ಬಿತ್ತನೆಯಷ್ಟೇ ಅಲ್ಲದೆ, ನಾಟಿಗೆ ಸಸಿಮಡಿ ತಯಾರಿ ಕೂಡ ಮುಗಿದಿದೆ. ಆರಿದ್ರಾ ಮಳೆಯೊಂದಿಗೆ ಮುಂಗಾರಿನ ಅರ್ಧ ಮಳೆಗಳೂ ಕಳೆದುಹೋಗಿವೆ.

ಇಷ್ಟಾದರೂ ನೂರಕ್ಕೆ 25-30ಮಂದಿ ರೈತರಿಗೆ ಇನ್ನೂ ಬರ ಪರಿಹಾರದ ಕಾಸು ಕೈಸೇರಿಲ್ಲ.

ಮೂರು ತಿಂಗಳಿಗೊಂದು ಆದೇಶ!

ಕೇಂದ್ರ ಸರ್ಕಾರದೊಂದಿಗೆ ನ್ಯಾಯಾಲಯದ ಒಳಹೊರಗೆ ದೊಡ್ಡ ಸಮರವನ್ನೇ ನಡೆಸಿ ಬರೋಬ್ಬರಿ 3454 ಕೋಟಿ ಪರಿಹಾರ ಪಡೆದುಕೊಂಡ ರಾಜ್ಯ ಸರ್ಕಾರ, ಆ ಹಣ ಕೈಸೇರಿ ಎರಡು ತಿಂಗಳು ಕಳೆದರೂ ಕೆಲವೇ ಮಂದಿ ರೈತರ ಖಾತೆಗಳಿಗೆ ಜಮಾ ಮಾಡಿದೆ.

ಆ ಮೊತ್ತದಲ್ಲೂ ಈ ಹಿಂದೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಲಾಗಿದ್ದ ತಲಾ 2000 ರೂಗಳನ್ನು ಕಡಿತ ಮಾಡಿ ಉಳಿದ ಮೊತ್ತವನ್ನು ಮಾತ್ರ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಅಂದರೆ, 3454 ಕೋಟಿಯಲ್ಲಿ ರಾಜ್ಯ ಸರ್ಕಾರ ಈ ಮೊದಲು ನೀಡಿದ್ದ 105 ಕೋಟಿ ರೂಗಳನ್ನು ಕಡಿತ ಮಾಡಿ ಉಳಿದ ಹಣವನ್ನು ರೈತರಿಗೆ ವಿತರಿಸಲಾಗಿದೆ. ಆದರೆ, ಆ ಮೊತ್ತ ಕೂಡ ಎಲ್ಲಾ ರೈತರಿಗೂ ತಲುಪಿಲ್ಲ!

ಹೀಗೆ ʼಕೈʼ ಸರ್ಕಾರಕ್ಕೆ ಕೇಂದ್ರದಿಂದ ಬಂದ ತುತ್ತು ರಾಜ್ಯದ ಅನ್ನದಾತರ ಬಾಯಿಗೆ ಬರದೇ ಇರಲು ಕಾರಣ; ಕಂದಾಯ ಇಲಾಖೆಯ ಅಧಿಕಾರಶಾಹಿಯ ಅಂದಾ ದರ್ಬಾರ್ ಎಂಬುದು ರೈತ ಮುಖಂಡರ ಆರೋಪ. ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಇಲಾಖೆ ಒಂದು ವ್ಯವಸ್ಥಿತ ಯೋಜನೆಯನ್ನೇ ಹೊಂದಿಲ್ಲ. ಕಳೆದ ಒಂಭತ್ತು ತಿಂಗಳಲ್ಲಿ ಈ ಕುರಿತಂತೆ ಮೂರಕ್ಕೂ ಹೆಚ್ಚು ಸೂಚನೆಗಳನ್ನು ಇಲಾಖೆಯ ಉನ್ನತಾಧಿಕಾರಿಗಳು ಹೊರಡಿಸಿದ್ದಾರೆ. ಮೂರು ತಿಂಗಳಿಗೊಂದು ಹೊಸ ಆದೇಶ, ಹೊಸ ಸುತ್ತೋಲೆಯ ಮೂಲಕ ರೈತರನ್ನು ಇಲಾಖೆಯ ಕಚೇರಿಗಳ ಕಂಬ ಸುತ್ತಿಸಲಾಗುತ್ತಿದೆ.

ಫ್ರೂಟ್ಸ್ ಐಡಿಯಾದರೂ ಸಿಕ್ಕದ ಪರಿಹಾರ ಫಲ!

ಮೊದಲು ರೈತರಿಂದ ಆಧಾರ್, ಪಹಣಿ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಒಳಗೊಂಡ ಅರ್ಜಿ ಸ್ವೀಕರಿಸಲು ಸೂಚಿಸಲಾಗಿತ್ತು. ಇಲಾಖೆಯ ತಳಮಟ್ಟದ ಅಧಿಕಾರಿಗಳು ಆ ಕೆಲಸವನ್ನು ಮಾಡಿಮುಗಿಸಿದರು. ಅದಾದ ಬಳಿಕ ಕಳೆದ ಜನವರಿಯಲ್ಲಿ ಮೊದಲ ಹಂತದ ಪರಿಹಾರ ಬಿಡುಗಡೆ ವೇಳೆಗೆ ಫ್ರೂಟ್ಸ್ ಐಡಿ(ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಎ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೇಷನ್ ಸಿಸ್ಟಮ್) ಮಾಡಿಸಿಕೊಂಡರೆ ಮಾತ್ರ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂಬ ಕ್ಯಾತೆ ತೆಗೆಯಲಾಯಿತು. ಈ ಫ್ರೂಟ್ಸ್ ಸಾಫ್ಟವೇರ್ ಮಾಹಿತಿ ತುಂಬುವುದು ಮತ್ತು ನೋಂದಣಿ ಮಾಡಿಸುವುದು ಐಟಿ ಪ್ರೊಫೆಷನಲ್ ಗಳಿಗೂ ತಲೆನೋವಿನ ಸಂಗತಿ. ಆದಾಗ್ಯೂ ರೈತರು ಸೈಬರ್ ಕೇಂದ್ರಗಳು, ಇಲಾಖೆಯ ಸಿಬ್ಬಂದಿಯ ಕೈಕಾಲು ಕಟ್ಟಿ ಫ್ರೂಟ್ಸ್ ಐಡಿ ಮಾಡಿಕೊಂಡರು. ಫ್ರೂಟ್ಸ್ ಐಡಿಯಾದರೂ ಹಲವು ರೈತರಿಗೆ ಪರಿಹಾರದ ಫಲ ಗಮನಕುಸುಮವಾಗಿಯೇ ಉಳಿಯಿತು.

ಕೇಂದ್ರದ ಹಣ ʼಕೈʼಸೇರುತ್ತಲೇ ಮತ್ತೊಂದು ಕ್ಯಾತೆ

ಈ ನಡುವೆ, ರಾಜ್ಯ ಸರ್ಕಾರ ತಲಾ ಎರಡು ಸಾವಿರದಂತೆ ಎಲ್ಲಾ ರೈತರಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ಪ್ರಚಾರ ಪಡೆಯುತ್ತಲೇ ಇತ್ತು. ಅದಾದ ಬಳಿಕ ಕೇಂದ್ರದ ಪರಿಹಾರ ಬಂದಿತು. ಆಗ ಮತ್ತೊಂದು ಕ್ಯಾತೆ ತೆಗೆಯಾಯಿತು. ರೈತರ ಪಹಣಿಗೆ ಆಧಾರ್ ಜೋಷಣೆಯಾಗಬೇಕು. ಆಧಾರ್ ಮತ್ತು ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ಮೂರೂ ಜೋಡಣೆಯಾದರೆ ಮಾತ್ರ ಪರಿಹಾರ ಹಣ ನೀಡಲಾಗುವುದು. ಇಲ್ಲವಾದರೆ ಇಲ್ಲ ಎಂಬ ಈ ಕ್ಯಾತೆಯಿಂದಾಗಿ ಇದೀಗ ರೈತರು ಮುಂಗಾರು ಹಂಗಾಮಿನ ಕೆಲಸ ಕಾರ್ಯ ಬಿಟ್ಟು ಬ್ಯಾಂಕು, ಸೈಬರ್ ಕೇಂದ್ರ ಮತ್ತು ಇಲಾಖೆಯ ತಳಮಟ್ಟದ ಕಚೇರಿಗಳಿಗೆ ದಿನರಾತ್ರಿ ಅಲೆಯುವಂತಾಗಿದೆ.

ಆದಾಗ್ಯೂ ಕಂದಾಯ ಸಚಿವರೇ ನೀಡಿರುವ ಮಾಹಿತಿಯ ಪ್ರಕಾರ, ಈವರೆಗೆ ರಾಜ್ಯದಲ್ಲಿ ಶೇ.40ರಷ್ಟು ರೈತರ ಪಹಣಿ ಮತ್ತು ಆಧಾರ್ ಸೀಡಿಂಗ್ ಮಾತ್ರ ಆಗಿದೆ. ಇನ್ನುಳಿದ ಶೇ.60ರಷ್ಟು ಪಹಣಿಗಳಿಗೆ ಆಧಾರ್ ಸೀಡಿಂಗ್ ಆಗಿಯೇ ಇಲ್ಲ. ಹಾಗಿದ್ದರೆ, ಸಚಿವರ ಹೇಳಿಕೆಯಂತೆ 40 ಲಕ್ಷ ರೈತರಿಗೆ ಪರಿಹಾರ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ಎಷ್ಟರಮಟ್ಟಿಗೆ ನಿಜ? ಎಂಬ ಪ್ರಶ್ನೆಯೂ ಏಳುತ್ತದೆ.

ನಯಾಪೈಸೆ ಪರಿಹಾರ ನೀಡದ ರಾಜ್ಯ ಸರ್ಕಾರ!

ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಎಚ್ ಆರ್ ಬಸವರಾಜಪ್ಪ, “ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಬದಲು ಮೂರು ತಿಂಗಳಿಗೊಂದು ಹೊಸ ಹೊಸ ಷರತ್ತು ವಿಧಿಸುವ ಮೂಲಕ ರೈತರನ್ನು ಕಚೇರಿಗಳಿಗೆ ಅಲೆಸುತ್ತಿದೆ. ಈವರೆಗೆ ರಾಜ್ಯದಲ್ಲಿ ಕೇವಲ 70 ಪರ್ಸೆಂಟ್ ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅದರಲ್ಲೂ ರಾಜ್ಯ ಸರ್ಕಾರದಿಂದ ನೀಡಿದ್ದ ಎರಡು ಸಾವಿರ ಪರಿಹಾರ ಹಣವನ್ನು ಕಡಿತಮಾಡಿಕೊಂಡು ಉಳಿದ ಮೊತ್ತವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದು ಅನ್ಯಾಯ. ಸರ್ಕಾರದ ಇಂತಹ ಧೋರಣೆ ಸಲ್ಲದು. ಇದು ಈ ಸರ್ಕಾರ ಅನ್ನದಾತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ” ಎಂದು ಕಿಡಿಕಾರಿದರು.

ಅಲ್ಲದೆ, ಈ ಹಿಂದೆ ಕೇಂದ್ರದ ಪರಿಹಾರ ಬರುವ ಮುನ್ನ ನೀಡಿದ್ದ ರಾಜ್ಯದ ಪಾಲಿನ ಎರಡು ಸಾವಿರ ರೂ.ಗಳನ್ನು ಈಗ ಕಡಿತ ಮಾಡಿಕೊಂಡಿರುವುದರಿಂದ, ಈ ಸರ್ಕಾರ ಬರ ಪರಿಹಾರವಾಗಿ ನಯಾ ಪೈಸೆಯನ್ನೂ ರೈತರಿಗೆ ನೀಡಿಲ್ಲ ಎಂದಂತಾಯಿತು. ಒಂದು ಸರ್ಕಾರವಾಗಿ ಭೀಕರ ಬರದ ಸಂದರ್ಭದಲ್ಲಿ ರೈತರಿಗೆ ಯಾವ ರೀತಿಯಲ್ಲೂ ನೆರವು ನೀಡದೇ ಹೋದರೆ, ಅಂತಹ ಸರ್ಕಾರವನ್ನು ರೈತ ದ್ರೋಹಿ ಎಂದು ಕರೆಯದೆ ಇನ್ನೇನು ಹೇಳಲು ಸಾಧ್ಯ ಎಂದೂ ರೈತ ಮುಖಂಡರು ಪ್ರಶ್ನಿಸಿದ್ದಾರೆ.

ಇಲಾಖೆ ನೌಕರರಿಗೂ ತಲೆನೋವು

ಈ ನಡುವೆ ಮೂರು ತಿಂಗಳಿಗೊಂದು ಹೊಸ ಸುತ್ತೋಲೆ ಹೊರಡಿಸಿ ಬರ ಪರಿಹಾರ ಸಕಾಲದಲ್ಲಿ ರೈತರಿಗೆ ತಲುಪದಂತೆ ನೋಡಿಕೊಳ್ಳುತ್ತಿರುವ ಇಲಾಖೆಯ ಹಿರಿಯ ಅಧಿಕಾರಿಗಳ ಧೊರಣೆಯ ವಿರುದ್ಧ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಮತ್ತು ನೌಕರರಲ್ಲೇ ಆಕ್ರೋಶ ಮಡುಗಟ್ಟಿದೆ.

ಹೆಸರು ಹೇಳಲಿಚ್ಛಿಸದ ಮಲೆನಾಡು ಜಿಲ್ಲೆಯ ತಹಶೀಲ್ದಾರರೊಬ್ಬರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, "ಕಳೆದ ಏಳೆಂಟು ತಿಂಗಳುಗಳಿಂದ ನಮ್ಮ ಸಿಬ್ಬಂದಿಗೆ ಈ ಬರ ಪರಿಹಾರ ಎಂಬುದು ದುಃಸ್ವಪ್ನದಂತಾಗಿದೆ. ಬರ ಪರಿಹಾರ ಘೋಷಣೆಯ ಬೆನ್ನಲ್ಲೇ ಸರ್ಕಾರ ಈ ಕುರಿತು ಸ್ಪಷ್ಟ ಷರತ್ತುಗಳನ್ನು ವಿಧಿಸಿ ಅದಕ್ಕೆ ವ್ಯಾಪಕ ಪ್ರಚಾರ ನೀಡಿದ್ದರೆ, ರೈತರಿಗೆ ಈ ಗೊಂದಲಗಳಿರುತ್ತಿರಲಿಲ್ಲ. ಆಗ ಕೇವಲ ಪಹಣಿ, ಆಧಾರ್‌, ಪಾಸ್‌ ಬುಕ್‌ ದಾಖಲೆ ಕೇಳಿ, ಆ ಬಳಿಕ ಫ್ರೂಟ್ಸ್‌ ಐಡಿ, ನಂತರ ಆಧಾರ್-‌ ಪಹಣಿ ಜೋಡಣೆ, ಹೀಗೆ ಒಂದೊಂದೇ ಷರತ್ತು ವಿಧಿಸಿ ಸುತ್ತೋಲೆ ಕಳಿಸಲಾಗುತ್ತಿದೆ. ಈ ಸಾಫ್ಟವೇರ್‌ ಸಮಸ್ಯೆ, ಸರ್ವರ್‌ ತೊಂದರೆಗಳಿಂದಾಗಿ ರೈತರ ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಒಂಬತ್ತು ತಿಂಗಳುಗಳಿಂದ ಬರ ಪರಿಹಾರದಂತಹ ತೀರಾ ಕನಿಷ್ಟ ನೆರವಿನ ವಿಷಯದಲ್ಲಿ ರೈತರಿಗೆ ಇಷ್ಟೆಲ್ಲಾ ಕಿರುಕುಳವಾಗುತ್ತಿದ್ದರೂ ಪ್ರತಿಪಕ್ಷಗಳು ಇದನ್ನು ಆದ್ಯತೆಯ ಸಂಗತಿಯಾಗಿ ಪರಿಗಣಿಸಿಲ್ಲ. ಬದಲಾಗಿ ಪರಿಹಾರ ಬಿಡುಗಡೆಯ ಕ್ರೆಡಿಟ್‌ ಗಾಗಿ ಪಕ್ಷಗಳು ಬೀದಿ ಹೋರಾಟ ನಡೆಸಿದವು! ಇದು ಮತ್ತೊಂದು ವಿಕಟ ವಿಪರ್ಯಾಸ! ಇಂತಹ ಪರಿಸ್ಥಿತಿಯಲ್ಲಿ ಈಗಲೂ ಲಕ್ಷಾಂತರ ರೈತರು, ಸರ್ಕಾರದ ಕ್ಯಾತೆ ಸುತ್ತೋಲೆಗಳ ಕಾರಣದಿಂದಾಗಿ ಬಿಡಿಗಾಸು ಪರಿಹಾರ ಪಡೆಯಲಾಗದೆ ಕಚೇರಿಗಳ ಕಂಬ ಸುತ್ತುತ್ತಿದ್ದಾರೆ.

Read More
Next Story