
ಕೆ. ಎನ್ ರಾಜಣ್ಣ
ಸಂಪುಟದಿಂದ ವಜಾ: ದೆಹಲಿಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿದ್ಧತೆ
ಯಾವುದೇ ವಿವರಣೆ ಕೇಳದೆ ತಮ್ಮನ್ನು ಏಕಾಏಕಿ ಸಂಪುಟದಿಂದ ವಜಾಗೊಳಿಸಿದ ಹೈಕಮಾಂಡ್ ಕ್ರಮದ ವಿರುದ್ಧ ರಾಜಣ್ಣ ಅಸಮಾಧಾನಗೊಂಡಿದ್ದಾರೆ.
ರಾಜ್ಯ ಸಚಿವ ಸಂಪುಟದಿಂದ ತಮ್ಮನ್ನು ಅವಮಾನಕರ ರೀತಿಯಲ್ಲಿ ಕೈಬಿಟ್ಟಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ಮಾಜಿ ಸಚಿವ ಮತ್ತು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಕೆ.ಎನ್. ರಾಜಣ್ಣ, ಇದೀಗ ದೆಹಲಿಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಎಐಸಿಸಿ ವರಿಷ್ಠರ ನಿರ್ಧಾರವನ್ನು ಪ್ರಶ್ನಿಸಿ, ದೆಹಲಿಯ ಜಂತರ್ ಮಂಥರ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲು ಅವರು ಸಿದ್ಧತೆ ನಡೆಸಿದ್ದಾರೆ.
ಯಾವುದೇ ವಿವರಣೆ ಕೇಳದೆ ತಮ್ಮನ್ನು ಏಕಾಏಕಿ ಸಂಪುಟದಿಂದ ವಜಾಗೊಳಿಸಿದ ಹೈಕಮಾಂಡ್ ಕ್ರಮದ ವಿರುದ್ಧ ರಾಜಣ್ಣ ಅಸಮಾಧಾನಗೊಂಡಿದ್ದಾರೆ. "ತಮಗೊಂದು ನೀತಿ, ಬೇರೆಯವರಿಗೊಂದು ನೀತಿಯೇ?" ಎಂದು ಪ್ರಶ್ನಿಸಿರುವ ಅವರು, ಪಕ್ಷದ ವರಿಷ್ಠರ ಗಮನ ಸೆಳೆಯಲು ಈ ಬೃಹತ್ ಪ್ರತಿಭಟನೆಯನ್ನು ಅಸ್ತ್ರವಾಗಿ ಬಳಸಲು ತೀರ್ಮಾನಿಸಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದೊಂದಿಗೆ ಸಂಪರ್ಕದಲ್ಲಿರುವ ನಾಯಕರ ಬಗ್ಗೆ ಮೃದು ಧೋರಣೆ ತಳೆಯುವ ಹೈಕಮಾಂಡ್, ತಮ್ಮ ವಿಷಯದಲ್ಲಿ ಕಠಿಣವಾಗಿ ನಡೆದುಕೊಂಡಿದೆ ಎಂಬುದು ರಾಜಣ್ಣ ಅವರ ಪ್ರಮುಖ ಆರೋಪವಾಗಿದೆ.
10 ಸಾವಿರ ಬೆಂಬಲಿಗರ ಸಭೆ
ದೆಹಲಿಯ ಜಂತರ್ ಮಂಥರ್‌ನಲ್ಲಿ ಸುಮಾರು 10,000 ಬೆಂಬಲಿಗರನ್ನು ಸೇರಿಸುವ ಗುರಿಯನ್ನು ರಾಜಣ್ಣ ಹೊಂದಿದ್ದಾರೆ. ಈಗಾಗಲೇ 7,000ಕ್ಕೂ ಹೆಚ್ಚು ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ದೆಹಲಿಗೆ ಕರೆದೊಯ್ಯಲು ಎರಡು ವಿಶೇಷ ರೈಲುಗಳನ್ನು ಒದಗಿಸುವಂತೆ ಅವರು ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ವಾಮೀಜಿಗಳ ಸಂಪೂರ್ಣ ಬೆಂಬಲ
ರಾಜಣ್ಣ ಅವರ ಈ ಹೋರಾಟಕ್ಕೆ ಸಮುದಾಯದ ಮಠಾಧೀಶರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಮತ್ತು ಮಾದಾರ ಚೆನ್ನಯ್ಯ ಸ್ವಾಮೀಜಿ ಸೇರಿದಂತೆ ಸುಮಾರು 15 ಮಠಾಧೀಶರು ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಮುಂದಿನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ರಾಜಣ್ಣ ಅವರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.
ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲದೆ, ಮಧುಗಿರಿ ಮತ್ತು ಯಮಕನಮರಡಿಯಂತಹ ಸಾಮಾನ್ಯ ಕ್ಷೇತ್ರಗಳಲ್ಲೂ ವಾಲ್ಮೀಕಿ ಸಮುದಾಯದ ಬೆಂಬಲದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೀಗಿದ್ದರೂ, ಬಿ. ನಾಗೇಂದ್ರ ಅವರ ನಂತರ ತಮ್ಮನ್ನೂ ಸಂಪುಟದಿಂದ ಕೈಬಿಡುವ ಮೂಲಕ ಕಾಂಗ್ರೆಸ್ ಪಕ್ಷವು ವಾಲ್ಮೀಕಿ/ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂಬ ಸಂದೇಶವನ್ನು ರವಾನಿಸುವುದು ರಾಜಣ್ಣ ಅವರ ಉದ್ದೇಶವಾಗಿದೆ.