Dasara Add Row | ಪೋಕ್ಸೋದಲ್ಲಿ ಸಿಲುಕಿರುವ ಬಿಎಸ್‌ವೈ ವಿರುದ್ಧ ಮೊದಲು ಕ್ರಮ ಜರುಗಿಸಿ: ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು
x

Dasara Add Row | ಪೋಕ್ಸೋದಲ್ಲಿ ಸಿಲುಕಿರುವ ಬಿಎಸ್‌ವೈ ವಿರುದ್ಧ ಮೊದಲು ಕ್ರಮ ಜರುಗಿಸಿ: ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು

ಪೋಕ್ಸೋ ಕಾಯ್ದೆಯಡಿ ಸಿಕ್ಕಿಬಿದ್ದಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಮೊದಲು ಕೇಂದ್ರೀಯ ಸಂಸದೀಯ ಸಮಿತಿಯಿಂದ ಹೊರಗಿಡಿ. ಆನಂತರ ಇಲ್ಲಿ ಬಂದು ಮಾತನಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದ್ದಾರೆ.


ʼದುಷ್ಟ ಶಕ್ತಿ ವಿರುದ್ಧ ಸತ್ಯದ ಜಯʼ ಎಂಬ ರಾಜ್ಯ ಸರ್ಕಾರದ ಜಾಹೀರಾತು ಇದೀಗ ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ವಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಿ ಆಶೀರ್ವಾದದಿಂದ ಇಷ್ಟು ವರ್ಷ ರಾಜಕೀಯದಲ್ಲಿ ಉಳಿದಿದ್ದೇನೆ. ಸುದೀರ್ಘ ರಾಜಕೀಯದಲ್ಲಿ ನನಗೆ ವೈರಿಗಳಿರುವಂತೆ ಅಭಿಮಾನಿಗಳೂ ಇದ್ದಾರೆ. ನಾನೆಂದಿಗೂ ಹೊಗಳಿಕೆ, ತೆಗಳಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆಗಳು ಆಗಬೇಕು ಎಂದು ಬಯಸುತ್ತೇನೆ. ದುಷ್ಟಶಕ್ತಿಗಳ ಸಂಹಾರ, ಶಿಷ್ಟ ಜನರ ರಕ್ಷಣೆಯೇ ದಸರಾ ಹಬ್ಬದ ಸಂದೇಶ. ಹಾಗಾಗಿ ಟೀಕೆಗಳಿಗೆ ಎದೆಗುಂದುವುದಿಲ್ಲ ಎಂದು ಹೇಳಿದರು.

ಸರ್ಕಾರದ ಜಾಹೀರಾತು ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಟೀಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, "ಪೋಕ್ಸೋ ಕಾಯ್ದೆಯಡಿ ಸಿಕ್ಕಿಬಿದ್ದಿರುವ ಅವರ ಬಿ.ಎಸ್. ಯಡಿಯೂರಪ್ಪ ಅವರನ್ನು ಮೊದಲು ಕೇಂದ್ರೀಯ ಸಂಸದೀಯ ಸಮಿತಿಯಿಂದ ಉಚ್ಛಾಟನೆ ಮಾಡಿ, ನಂತರ ಇಲ್ಲಿ ಬಂದು ಮಾತನಾಡಿ" ವಾಗ್ದಾಳಿ ನಡೆಸಿದರು.

"ಯಡಿಯೂರಪ್ಪ ಅವರು ನ್ಯಾಯಾಲಯದ ಕೃಪಾಕಟಾಕ್ಷದಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಇಲ್ಲದೇ ಹೋಗಿದ್ದರೆ ಅವರು ಜೈಲಿನಲ್ಲಿರಬೇಕಿತ್ತು. ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾಗಿಯಾದ ಯಡಿಯೂರಪ್ಪ ವಿರುದ್ಧ ಮೊದಲು ಕ್ರಮ ಜರುಗಿಸಿ, ಆಮೇಲೆ ಶೋಭಾ ಕರಂದ್ಲಾಜೆ ಮಾತನಾಡಬೇಕು" ಎಂದು ತಿರುಗೇಟು ನೀಡಿದರು.

ಶುಕ್ರವಾರ ಬೆಳಿಗ್ಗೆ ಮೈಸೂರಿನಲ್ಲಿ ಕಾವಾಡಿಗರಿಗೆ ಉಪಾಹಾರ ವಿತರಿಸಿದ ನಂತರ ಮಾತನಾಡಿ, ರಾಜ್ಯ ಸರ್ಕಾರದ ದಸರಾ ಜಾಹೀರಾತಿಗೆ ಪ್ರತಿಕ್ರಿಯಿಸಿದ್ದ ಸಚಿವೆ ಶೋಭಾ ಕರಂದ್ಲಾಜೆ, ದುಷ್ಟ ಶಕ್ತಿಗಳು ಯಾರೆಂಬುದನ್ನು ಸರ್ಕಾರ ತೀರ್ಮಾನ ಮಾಡಲ್ಲ. ಜನ ತೀರ್ಮಾನಿಸುತ್ತಾರೆ. ಸರ್ಕಾರದ ಹಣ, ಸಂಪತ್ತು ಲೂಟಿ ಹಾಗೂ ಭ್ರಷ್ಟಾಚಾರವನ್ನೇ ಉದ್ಯಮ ಮಾಡಿಕೊಂಡಿರುವವರು ದುಷ್ಟರ ಬಗ್ಗೆ ಮಾತನಾಡುತ್ತಾರೆ. ಇಂತಹ ಜಾಹೀರಾತಿಗೆ ಸರ್ಕಾರದ ಹಣ ಬಳಕೆ ಮಾಡಿಕೊಂಡು ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

Read More
Next Story