
ಬಸ್ಸಿನ ಪ್ರಯಾಣಿಕರ ಸೀಟಿನಲ್ಲಿ ನಮಾಜ್ ಮಾಡುತ್ತಿರುವ ಚಾಲಕ(ಎಕ್ಸ್ ಖಾತೆಯಿಂದ)
ಬಸ್ ನಿಲ್ಲಿಸಿ ನಮಾಜ್ ಮಾಡಿದ್ದ ಚಾಲಕ ಸಸ್ಪೆಂಡ್; ಕಾರ್ಮಿಕ ದಿನದಂದೇ ಆಘಾತ
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಯಾಜ್ ಮುಲ್ಲಾ ಪ್ರಯಾಣಿಕರ ಸೀಟಿನಲ್ಲಿ ಕುಳಿತು ನಮಾಜ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಹಾನಗಲ್‌ನಿಂದ ವಿಶಾಲಘಡಕ್ಕೆ ಹೊರಟಿದ್ದ ಬಸ್ ಮಾರ್ಗಮಧ್ಯದಲ್ಲಿಯೇ ನಿಲ್ಲಿಸಿ ಪ್ರಯಾಣಿಕರ ಆಸನದಲ್ಲಿ ಕುಳಿತು ನಮಾಜ್ ಮಾಡಿದ್ದ ಬಸ್ ಚಾಲಕ ನಯಾಜ್ ಮುಲ್ಲಾ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಯಾಜ್ ಮುಲ್ಲಾ ಪ್ರಯಾಣಿಕರ ಸೀಟಿನಲ್ಲಿ ಕುಳಿತು ನಮಾಜ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್‌ಕುಮಾರ್ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಸಾರಿಗೆ ಸಚಿವ ರಾಮಲಿಂಗರೆಡ್ಡಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಮಾರ್ಗ ಮಧ್ಯೆಯೆ ಬಸ್ ನಿಲ್ಲಿಸಿ ನಮಾಜ್ ಮಾಡಿರುವುದು ಅಕ್ಷೇಪಾರ್ಹ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ," ಎಂದರು.
ಚಾಲಕ ಚಿನ್ನದ ಪದಕ ವಿಜೇತ
ಬಸ್ ಚಾಲಕ ನಯಾಜ್ ಮುಲ್ಲಾ ಹಾನಗಲ್ - ವಿಶಾಲಘಡ ಮಾರ್ಗದಲ್ಲಿ ಹಲವಾರು ವರ್ಷಗಳಿಂದ ಚಾಲಕ ಹಾಗೂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನೇಕ ವರ್ಷಗಳಿಂದ ಅಪಘಾತ ರಹಿತ ಚಾಲನೆಗಾಗಿ ಚಿನ್ನದ ಪದಕ ಪಡೆದಿದ್ದರು.
ಸಾರ್ವಜನಿಕರಿಂದ ಆಕ್ರೋಶ
ಪ್ರಯಾಣಿಕರಿಂದ ತುಂಬಿದ್ದ ಬಸ್ ನಿಲ್ಲಿಸಿ ನಮಾಜ್ ಮಾಡಿದ ನಯಾಜ್ ಮುಲ್ಲಾ ವಿರುದ್ಧ ಹಲವಾರು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರಿಗಾಗಿ ಇರುವ ಬಸ್‌ನಲ್ಲಿ ನಮಾಜ್ ಮಾಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಬೇರೊಬ್ಬರು ಹೋಮ, ಹವನಗಳನ್ನು ಮಾಡುತ್ತಾರೆ. ಇಂತಹ ಆಚರಣೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.