
Gold smuggling case| ರನ್ಯಾ ರಾವ್ ಪ್ರಕರಣ: 4 ತಿಂಗಳಲ್ಲಿ 49.6 ಕೆ.ಜಿ ಚಿನ್ನ, 30 ಕೋಟಿ ಹವಾಲ ಹಣ ಸಾಗಣೆ
ದುಬೈನಿಂದ ಬೆಂಗಳೂರಿಗೆ ತಂದಿದ್ದ ಚಿನ್ನವನ್ನು ಸಾಹಿಲ್‌ಗೆ 40.07 ಕೋಟಿ ರೂ ಮಾರಾಟ ಮಾಡಿದ್ದು, ಅದರಲ್ಲಿ 38.35 ಕೋಟಿ ರೂ ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದಾಳೆ.
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ನಡೆಸುತ್ತಿದ್ದು, ಅನೇಕ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಇದೀಗ ರನ್ಯಾ ಕಳ್ಳಸಾಗಣೆ ಮಾಡಿದ್ದ 49.6 ಕೆ.ಜಿ.ಯಷ್ಟು ಚಿನ್ನವನ್ನು ಈ ಪ್ರಕರಣದಲ್ಲಿ ಬಂಧಿತನಾಗಿರುವ ಮೂರನೇ ಆರೋಪಿ ಸಾಹಿಲ್ ಜೈನ್‌ಗೆ ಮಾರಾಟ ಮಾಡಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ ಚಿನ್ನ ತರಲು 30 ಕೋಟಿ ರೂಪಾಯಿ ಹಣವನ್ನು ಹವಾಲ ಮೂಲಕ ದುಬೈಗೆ ಸಾಗಾಟ ಮಾಡುತ್ತಿದ್ದಳು ಎನ್ನುವು ತನಿಖೆಯಲ್ಲಿ ಬಯಲಾಗಿದೆ.
ಈ ಬಗ್ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್‌ಐ ರಿಮ್ಯಾಂಡ್ ಅರ್ಜಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಚಿನ್ನಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ಚಿನ್ನದ ಮಾರಾಟವನ್ನು ಹೇಗೆ ಮಾಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿದೆ.
3 ತಿಂಗಳಲ್ಲಿ 49.6 ಕೆಜಿ ಚಿನ್ನ ಸಾಗಾಟ
2024ರ ನವೆಂಬರ್ ಮತ್ತು 2025ರ ಫೆಬ್ರವರಿ ನಡುವೆ ರನ್ಯಾ ನಾಲ್ಕು ಬಾರಿ ಕಳ್ಳಸಾಗಣೆ ನಡೆಸಿ ಒಟ್ಟು 49.6 ಕೆ.ಜಿ. ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತಂದಿದ್ದಾಳೆ. ಈ ಚಿನ್ನವನ್ನು ಸಾಹಿಲ್‌ಗೆ 40.07 ಕೋಟಿ ರೂ ಮಾರಾಟ ಮಾಡಿದ್ದು, ಅದರಲ್ಲಿ 38.35 ಕೋಟಿ ರೂ ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದಾಳೆ. ಉಳಿದ 1.72 ಕೋಟಿ ರೂ ರನ್ಯಾಗೆ ಪಾವತಿಸಲಾಗಿದೆ ಎಂಬುದಾಗಿ ತನಿಖೆಯಲ್ಲಿ ಬಯಲಾಗಿದೆ.
ನವೆಂಬರ್ 2024: ರನ್ಯಾ 8.9 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಿ, ಸಾಹಿಲ್ ಅದನ್ನು 6.82 ಕೋಟಿಗೆ ರೂಗೆ ಮಾರಾಟ ಮಾಡಿದ್ದಾನೆ. ಇದರಲ್ಲಿ6.50 ಕೋಟಿ ರೂ ಹವಾಲಾ ಮೂಲಕ ದುಬೈಗೆ ಕಳುಹಿಸಲಾಗಿದ್ದು, 32 ಲಕ್ಷ ರನ್ಯಾಗೆ ಪಾವತಿಸಲಾಗಿದೆ. ಡಿಸೆಂಬರ್ 2024: 12.6 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಲಾಗಿದ್ದು, ಅದನ್ನು 9.90 ಕೋಟಿ ರೂಗೆ ಮಾರಾಟ ಮಾಡಲಾಗಿದೆ. ಈ ಮೊತ್ತದಲ್ಲಿ 9.60 ಕೋಟಿ ರೂ ದುಬೈಗೆ ವರ್ಗಾಯಿಸಲಾಗಿದ್ದು, 30 ಲಕ್ಷ ರೂ ರನ್ಯಾಗೆ ನೀಡಲಾಗಿದೆ.
ಜನವರಿ 2025: ರನ್ಯಾ 14.5 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಿದ್ದು, ಅದನ್ನು 11.55 ಕೋಟಿ ರೂಗೆ ಮಾರಾಟ ಮಾಡಲಾಗಿದೆ. ಈ ಮೊತ್ತದಿಂದ 11 ಕೋಟಿ ರೂ ದುಬೈಗೆ ಕಳುಹಿಸಿ, 55 ಲಕ್ಷ ರೂ ರನ್ಯಾಗೆ ಪಾವತಿಸಲಾಗಿದೆ.
ಫೆಬ್ರವರಿ 2025: 13.4 ಕೆ.ಜಿ. ಚಿನ್ನವನ್ನು 11.80 ಕೋಟಿ ರೂಗೆ ಮಾರಾಟಮಾಡಲಾಗಿದ್ದು,11.25 ಕೋಟಿ ರೂ ದುಬೈಗೆ ಕಳುಹಿಸಿ, 55 ಲಕ್ಷರೂ ರನ್ಯಾಗೆ ನೀಡಲಾಗಿದೆ ಎಂದು ಡಿಆರ್‌ಐ ವರದಿ ಮಾಡಿದೆ.
ಪ್ರತಿ ಬಾರಿಯ ಹವಾಲಾ ವಹಿವಾಟಿಗೆ ಸಾಹಿಲ್ ಜೈನ್ ಐವತ್ತೈದು ಸಾವಿರ ಕಮಿಷನ್ ಪಡೆಯುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ರನ್ಯಾ ರಾವ್ ಕೇಸ್ ನಲ್ಲಿ ಇದುವರೆಗೆ 49.6 ಕೆ ಜಿ ಚಿನ್ನದ ಸಾಗಾಟ ಮಾಡಿದ್ದು, ದುಬೈಗೆ ಹವಾಲ ಮೂಲಕ 38,39,97,000 ರೂ. ಹಣ ಕಳಿಸಿರುವ ವಿಚಾರ ಬಯಲಾಗಿದೆ. ಆದರೆ ಡಿಆರ್ ಗೆ ಇದುವರೆಗೆ ಸಿಕ್ಕಿರುವುದು 14.206 ಕೆಜಿ ಚಿನ್ನ, 2,67,00,000 ರೂ. ನಗದು ಮತ್ತು ಎರಡು ಕೆಜಿ ಚಿನ್ನದ ಆಭರಣ ಮಾತ್ರ ವಶಕ್ಕೆ ಪಡೆದಿದ್ದಾರೆ.