
ಗೃಹ ಸಚಿವ ಡಾ. ಜಿ.ಪರಮೇಶ್ವರ್
ದ್ವೇಷ ಭಾಷಣ ತಡೆಗೆ ಹೊಸ ಮಸೂದೆ? ; ಪಿಎಸ್ಐ ನೇಮಕಾತಿ ಆದೇಶಕ್ಕೆ ಶೀಘ್ರ ಕ್ರಮ: ಗೃಹ ಸಚಿವರ ಸಭೆ
ಇದೇ ವೇಳೆ, 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಆದೇಶ ವಿಳಂಬದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.
ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶುಕ್ರವಾರ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ, ಹೊಸ ಮಸೂದೆಯ ರಚನೆ ಕುರಿತು ಚರ್ಚಿಸಿದರು. ಇದೇ ವೇಳೆ, 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಆದೇಶ ವಿಳಂಬದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.
"ಕರ್ನಾಟಕ ಮಿಸ್‌ಇನ್‌ಫರ್ಮೇಶನ್ ಮತ್ತು ಫೇಕ್ ನ್ಯೂಸ್ (ನಿಷೇಧ) ಬಿಲ್, 2025" ಹೆಸರಿನ ಈ ಉದ್ದೇಶಿತ ಮಸೂದೆಯನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಹರಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ನಿಯಮಗಳನ್ನು ಈ ಮಸೂದೆ ಒಳಗೊಂಡಿದೆ. ಈ ಹಿಂದೆ ಮಸೂದೆಯ ಕರಡಿನಲ್ಲಿ 'ಫೇಕ್ ನ್ಯೂಸ್ ರೆಗ್ಯುಲೇಟರಿ ಅಥಾರಿಟಿ' ಸ್ಥಾಪಿಸುವ ಪ್ರಸ್ತಾವನೆ ಇತ್ತಾದರೂ, ಸಾರ್ವಜನಿಕ ವಲಯದಿಂದ ವ್ಯಕ್ತವಾದ ಟೀಕೆಗಳ ಹಿನ್ನೆಲೆಯಲ್ಲಿ ಅದನ್ನು ಪರಿಷ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ಪಿಎಸ್ಐ ಅಭ್ಯರ್ಥಿಗಳ ಆತಂಕ
2024ರಲ್ಲಿ ನಡೆದ 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ಪತ್ರಗಳನ್ನು ನೀಡಿಲ್ಲ. ದೈಹಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ತಿಂಗಳುಗಳೇ ಕಳೆದರೂ ಆದೇಶ ಪತ್ರ ಸಿಗದ ಕಾರಣ ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಹಲವು ಅಭ್ಯರ್ಥಿಗಳು, "15 ದಿನಗಳಲ್ಲಿ ಆದೇಶ ನೀಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿ" ಮತ್ತು "ಕೇವಲ ಸಭೆಗಳನ್ನು ನಡೆಸಿದರೆ ಸಾಲದು, ತಕ್ಷಣ ಆದೇಶ ಪ್ರತಿಗಳನ್ನು ನೀಡಿ" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.