Mysore MUDA Scam | ಮುಡಾಗೆ ಸಿಎಂ ಪತ್ನಿ ಬರೆದ ಪತ್ರ ತಲುಪಿಸಿದ ಡಾ.ಯತೀಂದ್ರ
ಪಾರ್ವತಿ ಅವರ ಪರವಾಗಿ ಡಾ.ಯತೀಂದ್ರ ಅವರು ಪತ್ರ ನೀಡಿದ್ದಾರೆ. ನಿವೇಶನ ವಾಪಸಾತಿ ಪತ್ರಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಸಲಹೆ ಪಡೆದು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ
ಮುಡಾದಿಂದ ಪಡೆದಿದ್ದ14 ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಬರೆದಿದ್ದ ಪತ್ರವನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಡಾ ಆಯುಕ್ತ ರಘುನಂದನ್ ಅವರು, ಪಾರ್ವತಿ ಅವರ ಪರವಾಗಿ ಡಾ.ಯತೀಂದ್ರ ಅವರು ಪತ್ರ ನೀಡಿದ್ದಾರೆ. ನಿವೇಶನ ವಾಪಸಾತಿ ಪತ್ರಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಸಲಹೆ ಪಡೆದು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಇನ್ನು ಲೋಕಾಯುಕ್ತ ಪೊಲೀಸರು ಕೆಸರೆ ಗ್ರಾಮದ ಸರ್ವೇ ನಂ.464ಕ್ಕೆ ಸಂಬಂಧಿಸಿ ಕೆಲ ದಾಖಲೆಗಳನ್ನು ಕೇಳಿದ್ದಾರೆ. ಅವರ ತನಿಖೆಗೆ ಸಹಕಾರ ನೀಡಲಾಗುವುದು. ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೂ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಾವು ಪಡೆದಿದ್ದ ನಿವೇಶನಗಳನ್ನು ವಾಪಸ್ ನೀಡುವುದಾಗಿ ಹೇಳಿದ್ದರು.