ಹಿಮೋಫಿಲಿಯಾ ಪೀಡಿತರ ಆರೈಕೆಗೆ ಬದುಕು ಮುಡುಪಿಟ್ಟ ಹನಗವಾಡಿ ಸುರೇಶ್‌ಗೆ ಪದ್ಮಶ್ರೀ ಗೌರವ
x

ಡಾ.ಸುರೇಶ್‌ ಹನಗವಾಡಿ

ಹಿಮೋಫಿಲಿಯಾ ಪೀಡಿತರ ಆರೈಕೆಗೆ ಬದುಕು ಮುಡುಪಿಟ್ಟ ಹನಗವಾಡಿ ಸುರೇಶ್‌ಗೆ ಪದ್ಮಶ್ರೀ ಗೌರವ

1989 ರಲ್ಲಿ ಹಿಮೋಫಿಲಿಯಾ ಪೀಡಿತರಿಗೆ ಆತ್ಮಸ್ಥೈರ್ಯ ತುಂಬಿ, ಶಿಕ್ಷಣ ಮತ್ತು ಚಿಕಿತೆ ಒದಗಿಸಲು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ (ಕೆಎಚ್ಎಸ್) ಸ್ಥಾಪಿಸಿದರು. ದುಬಾರಿ ಚಿಕಿತ್ಸೆಗಳಿಗೆ ಸರ್ಕಾರದ ನೆರವು ಪಡೆಯುವಲ್ಲಿ ಸಫಲರಾದರು.


ಹಿಮೋಫಿಲಿಯಾ ಕಾಯಿಲೆಗೆ ತುತ್ತಾದವರಿಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವ ಸ್ವತಃ ಹಿಮೋಫಿಲಿಯಾಗೆ ಒಳಗಾಗಿರುವ ಡಾ. ಸುರೇಶ್ ಹನಗವಾಡಿ ಅವರಿಗೆ 2026 ನೇ ಸಾಲಿನ ಪದ್ಮಶ್ರೀ ಗೌರವ ಸಂದಿದೆ.

ದಾವಣಗೆರೆಯ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನಲ್ಲಿ ಹಿಮೋಫಿಲಿಯಾ ವಿಭಾಗದ ಪ್ರಾಧ್ಯಾಪಕರಾಗಿರುವ ಸುರೇಶ್‌ ಅವರು ಶೇ 70ರಷ್ಟು ಹಿಮೋಫಿಲಿಯಾಗೆ ತುತ್ತಾದರೂ ಕಾಯಿಲೆ ಪೀಡಿತರ ಆರೈಕೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ.

ಹಿಮೋಫಿಲಿಯಾ ಸವಾಲಿನ ನಡುವೆಯೂ ಕರ್ನಾಟಕದಲ್ಲಿ ಮೊದಲ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ಆರಂಭಿಸಿ, ಕಾಯಿಲೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಂಗವಿಕಲರ ಸಬಲೀಕರಣ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸಾಧನೆ ಗುರುತಿಸಿ ಕೇಂದ್ರ ಸರ್ಕಾರವು ಡಾ. ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ಹಿಂದೆ ಶ್ರೇಷ್ಠ ದಿವ್ಯಾಂಗಜನ್-2024 ವಿಭಾಗದಲ್ಲಿ ರಾಷ್ಟ್ರೀಯ ವೈಯಕ್ತಿಕ ಶ್ರೇಷ್ಠತೆ ಪ್ರಶಸ್ತಿ ಸಂದಿತ್ತು.

ಆರೋಗ್ಯ ಸಮಸ್ಯೆಗಳನ್ನೇ ಹೊದ್ದು ಮಲಗಿದ್ದ ಕುಟುಂಬದಲ್ಲಿ ಜನಿಸಿದ ಡಾ. ಸುರೇಶ್ ಹನಗವಾಡಿ ಅವರು ಆರಂಭದಲ್ಲಿಯೇ ಹಿಮೋಫಿಲಿಯಾದಿಂದ ಬಳಲುತ್ತಿದ್ದರು. ಅವರ ಸಂಬಂಧಿಗೆ ಸಕಾಲಿಕ ವೈದ್ಯಕೀಯ ನೆರವು ಸಿಗದೇ ರಕ್ತಸ್ರಾವದಿಂದ ನಿಧನರಾದಾಗ ಹಿಮೋಫಿಲಿಯಾದ ವಿರುದ್ಧ ನಿರ್ಣಾಯಕ ಸಮರಕ್ಕೆ ಮುಂದಾದರು. ಈ ಆಘಾತಕಾರಿ ಅನುಭವವು ಡಾ. ಸುರೇಶ್ ಅವರನ್ನು ವೈದ್ಯಕೀಯ ವೃತ್ತಿಗೆ ತಂದು ಬಿಟ್ಟಿತು. ತಮ್ಮ ಕುಟುಂಬಕ್ಕೆ ಎದುರಾದ ದುರಂತವು ಬೇರೆ ಯಾರಿಗೂ ಎದುರಾಗಬಾರದು ಎಂಬ ಉದ್ದೇಶದಿಂದ ಹಿಮೋಫಿಲಿಯಾ ಆರೈಕೆಗೆ ತಮ್ಮ ಬದುಕು ಮುಡುಪಿಟ್ಟರು.

1989 ರಲ್ಲಿ ಹಿಮೋಫಿಲಿಯಾ ಪೀಡಿತರಿಗೆ ಆತ್ಮಸ್ಥೈರ್ಯ ತುಂಬಿ, ಶಿಕ್ಷಣ ಮತ್ತು ಚಿಕಿತೆ ಒದಗಿಸಲು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ (ಕೆಎಚ್ಎಸ್) ಸ್ಥಾಪಿಸಿದರು. ದುಬಾರಿ ಚಿಕಿತ್ಸೆಗಳಿಗೆ ಸರ್ಕಾರದ ನೆರವು ಪಡೆಯುವಲ್ಲಿ ಸಫಲರಾದರು. ಇವರ ಈ ಕಾರ್ಯದಿಂದ ಕರ್ನಾಟಕವು ಭಾರತದಾದ್ಯಂತ ಹಿಮೋಫಿಲಿಯಾ ಆರೈಕೆಗೆ ಮಾದರಿಯಾಗಿದೆ.

ಡಾ. ಸುರೇಶ್ ಅವರು ತಮ್ಮ ಬಳಿ ಬರುವ ಕಾಯಿಲೆ ಪೀಡಿತರಿಗೆ ಸಹಾನುಭೂತಿಯಿಂದಲೇ ಉಚಿತ ಸಮಾಲೋಚನೆ ಮತ್ತು ಸೇವೆ ಒದಗಿಸುತ್ತಿದ್ದಾರೆ. ವ್ಯಾಪಕ ಸಂಶೋಧನೆ ಮತ್ತು ಜಾಗೃತಿ ಅಭಿಯಾನದಲ್ಲೂ ತೊಡಗಿಸಿಕೊಂಡಿದ್ದಾರೆ.

Read More
Next Story