ಕೊರಗರ ಚಿಗುರಿದ ಕನಸು:  ಡಾ. ಸ್ನೇಹಾ  ಮೊದಲ ವೈದ್ಯೆ, ಆದರೂ ತಪ್ಪಿಲ್ಲ ಅಸ್ಪೃಶ್ಯತೆಯ ವ್ಯಾಧಿ
x

ಕೊರಗರ ಚಿಗುರಿದ ಕನಸು: ಡಾ. ಸ್ನೇಹಾ ಮೊದಲ ವೈದ್ಯೆ, ಆದರೂ ತಪ್ಪಿಲ್ಲ ಅಸ್ಪೃಶ್ಯತೆಯ ವ್ಯಾಧಿ

ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದಿಂದ ಮೊದಲ ವೈದ್ಯೆಯಾಗಿರುವ ಡಾ. ಸ್ನೇಹ ಅವರು ದೆಹಲಿಯಲ್ಲಿ ಎಂ.ಡಿ. ಪದವಿ ಮುಗಿಸುತ್ತಿದ್ದು ಶಿಕ್ಷಣದ ಮೂಲಕ ಸಾಧನೆ ಸಾಧ್ಯವೆಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದಾರೆ.


ಕರಾವಳಿಯ ನಿಶ್ಯಬ್ದ ಕಾಡುಗಳು ಮತ್ತು ಹಸಿರ ಮಡಿಲಲ್ಲಿ ಮೌನವಾಗಿ ಬದುಕುತ್ತಿರುವ ಕೊರಗ ಸಮುದಾಯವು ರಾಜ್ಯದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ ಒಂದು. ಇತಿಹಾಸದಲ್ಲಿ ಗೌರವಯುತ ಸ್ಥಾನ ಹೊಂದಿದ್ದ ಈ ಸಮುದಾಯ, ಇಂದು ಕಾಲಚಕ್ರದ ಸುಳಿಯಲ್ಲಿ ಸಿಲುಕಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದು 'ಅಳಿವಿನಂಚಿನಲ್ಲಿರುವ ಗುಂಪು'ಗಳ ಪಟ್ಟಿಗೆ ಸೇರಿರುವುದು ನಾಗರಿಕ ಸಮಾಜಕ್ಕೆ ಒಂದು ಕಳವಳಕಾರಿ ಸಂಗತಿ. ಇಂತಹ ಸವಾಲುಗಳ ನಡುವೆಯೇ ಉಡುಪಿ ಜಿಲ್ಲೆಯ ಕುಂದಾಪುರದ ಯುವತಿಯೊಬ್ಬರು ಇಡೀ ಸಮುದಾಯವೇ ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕೊರಗ ಸಮುದಾಯದ ಮೊದಲ ವೈದ್ಯೆಯಾದ ಡಾ.ಸ್ನೇಹ

ಕುಂದಾಪುರ ತಾಲೂಕಿನ ಉಳ್ತೂರು ನಿವಾಸಿಗಳಾದ ಗಣೇಶ್ ವಿ. ಮತ್ತು ಜಯಶ್ರೀ ದಂಪತಿಯ ಪುತ್ರಿ ಕೆ. ಸ್ನೇಹಾ, ಕೊರಗ ಸಮುದಾಯದಿಂದ ವೈದ್ಯಕೀಯ ಪದವಿ (ಎಂಬಿಬಿಎಸ್‌) ಮತ್ತು ಅದೇ ಕ್ಷೇತ್ರದಲ್ಲಿ ಸ್ನಾತಕೋತ್ತರ (ಎಂಡಿ) ಮಾಡುತ್ತಿರುವ ಮೊದಲ ಯುವತಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿರುವ ಇವರು, ಪ್ರಸ್ತುತ ದೆಹಲಿಯ ಪ್ರತಿಷ್ಠಿತ 'ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌'ನಲ್ಲಿ ಎಂಡಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಅಸಾಧಾರಣ ಪ್ರತಿಭೆಯಾಗಿದ್ದ ಸ್ನೇಹಾ ಅವರಿಗೆ ಶಿಕ್ಷಕಿಯಾಗಿದ್ದ ತಾಯಿಯೇ ಮೊದಲ ಪ್ರೇರಣೆ.

ನವೋದಯ ಶಾಲೆಯ ಶಿಸ್ತು ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ ಆಳ್ವ ಅವರ ಉಚಿತ ಪ್ರೋತ್ಸಾಹ ಸ್ನೇಹಾ ಅವರ ಕನಸಿಗೆ ರೆಕ್ಕೆಗಳನ್ನು ನೀಡಿತು. ಸಿಇಟಿಯಲ್ಲಿ 2226 ರ್ಯಾಂಕ್ ಗಳಿಸಿ ಮೆಡಿಕಲ್ ಸೀಟು ಗಿಟ್ಟಿಸಿದ ಈಕೆಯ ಸಾಧನೆಗೆ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಕೂಡ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.

ವೈದ್ಯೆಯಾದರೂ ಬೆನ್ನ ಬಿಡದ ಜಾತಿ ತಾರತಮ್ಯದ ಕರಿನೆರಳು

ಸ್ನೇಹಾ ಅವರ ವೈಯಕ್ತಿಕ ಸಾಧನೆ ಎಷ್ಟು ದೊಡ್ಡದೋ, ಅವರು ಎದುರಿಸುತ್ತಿರುವ ಸಾಮಾಜಿಕ ಸವಾಲು ಅಷ್ಟೇ ಕಹಿ ವಾಸ್ತವದಿಂದ ಕೂಡಿದೆ. ಜಿಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತರಬೇತಿನಿರತ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ಮಂದಿ ತಮ್ಮ ಕಾಯಿಲೆಗಳನ್ನೂ ಬದಿಗಿಟ್ಟು, ಅವರ ಜಾತಿ-ಬಣ್ಣ ಗಮನಿಸಿ ಔಷಧಿ ತೆಗೆದುಕೊಳ್ಳುವ ಬಗ್ಗೆ ನಿರ್ಧಾರಕ್ಕೆ ಬರುತ್ತಿದ್ದರು. ಆ ಮೂಲಕ ಕೆಲ ರೋಗಿಗಳು ದೈಹಿಕ ರೋಗಕ್ಕಿಂತ ʼಅಸ್ಪೃಶ್ಯತೆಯ ರೋಗʼದಿಂದ ಬಳಲುತ್ತಿದ್ದರು!

ಎಂಬಿಬಿಎಸ್ ಮುಗಿಸಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಚಿಕಿತ್ಸೆಗೆ ಬರುವ ರೋಗಿಗಳು ಆಕೆಯ ಜಾತಿಯನ್ನು ವಿಚಾರಿಸುತ್ತಿದ್ದ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಸುಶಿಕ್ಷಿತ ಸಮಾಜದ ನಡುವೆಯೂ ಜಾತಿ ಎಂಬ ಪಿಡುಗು ವೈದ್ಯಕೀಯ ವೃತ್ತಿಯನ್ನೂ ಬಿಡದೆ ಕಾಡುತ್ತಿದೆ ಎಂದು ʻದ ಫೆಡರಲ್‌ ಕರ್ನಾಟಕʼಕ್ಕೆ ಆಕೆಯ ತಂದೆ ಗಣೇಶ್ ಅವರು ಬೇಸರ ವ್ಯಕ್ತಪಡಿಸಿದರು. ಮುಂದೆ ಆಕೆ ತಮ್ಮ ಊರಿನಲ್ಲಿ ವೈದ್ಯೆ ಸಲ್ಲಿಸುವುದು ಕಷ್ಟಸಾಧ್ಯ ಎಂದು ಅವರು ನೋವಿನಿಂದ ನುಡಿದರು.

ಅಸ್ಪೃಶ್ಯತೆಯ ಕಪಿಮುಷ್ಟಿ

ಕಡಿಮೆ ಜನಸಂಖ್ಯೆ ಹೊಂದಿರುವ ಕೊರಗ ಸಮುದಾಯ ಇಂದಿಗೂ 'ಅಸ್ಪೃಶ್ಯತೆ' ಎಂಬ ಕಡುಕಷ್ಟದಿಂದ ಮುಕ್ತವಾಗಿಲ್ಲ. ಇವರನ್ನು ನಡೆಸಿಕೊಳ್ಳುವ ರೀತಿ ಮಾತ್ರ ಅಮಾನವೀಯವಾಗಿದೆ. ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ಕಾಯ್ದೆ ಜಾರಿಗೆ ಬಂದಿದ್ದರೂ, ಕಂಬಳದಂತಹ ಕ್ರೀಡೆಗಳ ಹೆಸರಿನಲ್ಲಿ ಇಂದಿಗೂ ಇವರನ್ನು ಶೋಷಿಸಲಾಗುತ್ತಿದೆ.

'ಪನಿ ಕುಲ್ಲುನು' ಅಂತಹ ಸಂಪ್ರದಾಯಗಳ ಹೆಸರಿನಲ್ಲಿ ಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಗದ್ದೆ ಕಾಯುವುದು ಅಥವಾ ಕೋಣಗಳ ಓಟಕ್ಕೆ ಮುನ್ನ ಗದ್ದೆಯಲ್ಲಿ ಗಾಜಿನ ಚೂರುಗಳಿವೆಯೇ ಎಂದು ಪರೀಕ್ಷಿಸಲು ಇವರನ್ನು ಬರಿಗಾಲಿನಲ್ಲಿ ಓಡಿಸುವ ಪದ್ಧತಿಗಳು ಇಂದಿಗೂ ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಗಣೇಶ್ ಅವರು ಬೇಸರ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಸಮುದಾಯದಲ್ಲಿ ಆಶಾದಾಯಕ ಬೆಳವಣಿಗೆಗಳು ಕಂಡುಬರುತ್ತಿವೆ. ಉಡುಪಿಯ ಗುಂಡ್ಮಿಯ ಡಾ. ಸಬಿತಾ ಅವರು ಸಮಾಜಶಾಸ್ತ್ರದಲ್ಲಿ ಪಿಎಚ್.ಡಿ ಪಡೆದ ಸಮುದಾಯದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಜೊತೆಗೆ ಜೀತಾ ಎಂಬ ವಿದ್ಯಾರ್ಥಿನಿ ಕೂಡ ಇದೇ ಹಾದಿಯಲ್ಲಿ ಸಾಗುತ್ತಿರುವುದು ಬದಲಾವಣೆಯ ಮುನ್ಸೂಚನೆಯಾಗಿದೆ.

ಅಳಿವಿನಂಚಿನಲ್ಲಿರುವ ಸಮುದಾಯ

ಅಂಕಿ-ಅಂಶಗಳು ಜನಗಣತಿಯ ವರದಿಗಳು ಕೊರಗ ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿರುವುದನ್ನು ಎತ್ತಿ ತೋರಿಸುತ್ತಿವೆ. 1981ರ ಜನಗಣತಿಯ ಪ್ರಕಾರ ಸುಮಾರು 15,000ಕ್ಕೂ ಅಧಿಕವಿದ್ದ ಇವರ ಸಂಖ್ಯೆ, 2011ರ ವೇಳೆಗೆ 14,794ಕ್ಕೆ ಕುಸಿದಿದೆ. ಪ್ರಸ್ತುತ 2025ರ ಅಂದಾಜಿನ ಪ್ರಕಾರ ಈ ಸಂಖ್ಯೆ 10,000ರಿಂದ 12,000ಕ್ಕೆ ಇಳಿಕೆಯಾಗಿದ್ದು, ತೀವ್ರ ಆತಂಕ ಮೂಡಿಸಿದೆ. ಅಪೌಷ್ಟಿಕತೆ, ರಕ್ತಹೀನತೆ, ಆನುವಂಶಿಕ ಕಾಯಿಲೆಗಳು ಹಾಗೂ ಕ್ಷಯದಂತಹ ರೋಗಗಳು ಈ ಸಮುದಾಯವನ್ನು ಹಣ್ಣು ಮಾಡುತ್ತಿವೆ.

ಕೊರಗರನ್ನು ಕರಾವಳಿಯ ಆದಿಮ ಬುಡಕಟ್ಟು ಜನಾಂಗ ಎಂದು ಕರೆಯಲಾಗಿದ್ದು, ಭಾರತದ ಪ್ರಾಚೀನ ಬುಡಕಟ್ಟು ಸಮುದಾಯಗಳಲ್ಲಿ ಒಬ್ಬರಾಗಿದ್ದಾರೆ. ಈಚೆಗೆ ಮಂಗಳೂರಿನ ಯೆನೆಪೋಯಾ ವಿವಿ ನಡೆಸಿದ ಅನುವಂಶಿಕ ಅಧ್ಯಯನದಿಂದ ಕೊರಗರು ಭಾರತದ ಇತಿಹಾಸದ ಪ್ರಾಚೀನ ಕೊಂಡಿ ಎಂಬುದು ಬೆಳಕಿಗೆ ಬಂದಿದೆ. ಅಂದರೆ ಕೊರಗರು ದ್ರಾವಿಡ ಪೂರ್ವಜರ ಪ್ರತಿನಿಧಿಗಳಾಗಿದ್ದು, ಸಂಸ್ಕೃತಿ ಮತ್ತು ಅಸ್ತಿತ್ವದ ಸಂರಕ್ಷಣೆಗೆ ಹೋರಾಡುತ್ತಿದ್ದಾರೆ.

ಕೊರಗರ ವಂಶವಾಹಿನಿಗಳಲ್ಲಿ ಪ್ರಾಚೀನ ಇರಾನಿನ ಅಂಶಗಳು ಕಂಡುಬಂದಿವೆ. ದ್ರಾವಿಡ ಭಾಷೆ ಮಾತನಾಡುವ ಈ ಪ್ರಾಚೀನ ಬುಡಕಟ್ಟು ಜನಾಂಗವು 4400 ವರ್ಷಗಳಷ್ಟು ಹಳೆಯ ಪೂರ್ವಜರ ಪ್ರತಿನಿಧಿಗಳು ಎಂದು ಸಂಶೋಧನೆಗಳು ಹೇಳಿವೆ.

ಯಾರು ಈ ಕೊರಗರು?

ಕರಾವಳಿಯ ಮೂಲನಿವಾಸಿಗಳಾದ ಕೊರಗ ಸಮುದಾಯ ಇಂದು ಅಸ್ತಿತ್ವದ ಹೋರಾಟದಲ್ಲಿದೆ. ಒಂದು ಕಾಲದಲ್ಲಿ ತುಳುನಾಡನ್ನು ಆಳಿದ ಇತಿಹಾಸವಿರುವ ಈ ಸಮುದಾಯ, ಇಂದು ಭಾರತ ಸರ್ಕಾರದ 'ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು' (Particularly Vulnerable Tribal Group (PVTG) in Southern India.) ಪಟ್ಟಿಗೆ ಸೇರಿದೆ.

ವೀರ ರಾಜ ಹುಬಾಶಿಕ ಮತ್ತು ತುಳುನಾಡಿನ ಆಳ್ವಿಕೆ

ಕೊರಗ ಸಮುದಾಯದ ಇತಿಹಾಸವು ವೀರ ರಾಜ ಹುಬಾಶಿಕನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಜನಪದ ಕಥೆಗಳ ಪ್ರಕಾರ, ಹುಬಾಶಿಕನು ಕದಂಬ ರಾಜ ಮಯೂರವರ್ಮನನ್ನು ಸೋಲಿಸಿ ತುಳುನಾಡಿನಲ್ಲಿ ಕೊರಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದನು.

ಸುಮಾರು 12 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಈತ, ಕದಂಬರ ಆಕ್ರಮಣವನ್ನು ದಿಟ್ಟವಾಗಿ ಎದುರಿಸಿದ್ದನು ಎನ್ನಲಾಗುತ್ತದೆ. ಹಿರಿಯ ಇತಿಹಾಸಕಾರ ಕರ್ನಲ್ ಮಾರ್ಕ್ ವಿಲ್ಕ್ಸ್ ಪ್ರಕಾರ, ಈ ಘಟನೆ ಕ್ರಿ.ಶ. 1450ರ ಸುಮಾರಿಗೆ ನಡೆದಿದೆ. ಹುಬಾಶಿಕನು ಮಂಗಳೂರು ಮತ್ತು ಮಂಜೇಶ್ವರ ಭಾಗಗಳಲ್ಲಿ ತನ್ನ ಸೈನ್ಯದೊಂದಿಗೆ ಅಧಿಪತ್ಯ ಸ್ಥಾಪಿಸಿದ್ದನು ಎಂಬ ಉಲ್ಲೇಖಗಳಿವೆ.

ಸಂಚಿನ ಸಾವು ಮತ್ತು ವನವಾಸದ ಆರಂಭ ಹುಬಾಶಿಕನ ಅಂತ್ಯವು ಅತ್ಯಂತ ದುರಂತಮಯವಾಗಿತ್ತು. ನೇರ ಯುದ್ಧದಲ್ಲಿ ಆತನನ್ನು ಸೋಲಿಸಲಾಗದ ಕದಂಬರು ಸಂಚು ರೂಪಿಸಿದರು. ಮಯೂರವರ್ಮನ ಮಗ ಲೋಕಾದಿತ್ಯನು ಶಾಂತಿ ಮಾತುಕತೆ ಮತ್ತು ವಿವಾಹದ ಪ್ರಸ್ತಾಪವನ್ನಿಟ್ಟು ಹುಬಾಶಿಕನನ್ನು ಆಹ್ವಾನಿಸಿದನು. ಆದರೆ ಮದುವೆಯ ಸಂಭ್ರಮದಲ್ಲಿದ್ದ ಹುಬಾಶಿಕ ಮತ್ತು ಆತನ ಸಂಬಂಧಿಕರನ್ನು ಮೋಸದಿಂದ ಸೆರೆಹಿಡಿದು ಕೊಲ್ಲಲಾಯಿತು. ರಾಜನ ಸಾವಿನ ನಂತರ ದಾರಿಯಿಲ್ಲದ ಕೊರಗರು ಕಾಡಿನ ಹಾದಿ ಹಿಡಿಯಬೇಕಾಯಿತು ಮತ್ತು ಅಂದಿನಿಂದ ಅವರು ಅಸ್ಪೃಶ್ಯತೆಯ ಕಪಿಮುಷ್ಟಿಗೆ ಸಿಲುಕಿ ಕಾಡಿನ ಉತ್ಪನ್ನಗಳನ್ನೇ ನಂಬಿ ಬದುಕುವಂತಾಯಿತು ಎಂಬ ದಂತಕತೆಗಳಿವೆ.

ವಿಭಿನ್ನ ವಾದಗಳು ಮತ್ತು ಐತಿಹಾಸಿಕ ನಂಟು ಈ ಇತಿಹಾಸದ ಬಗ್ಗೆ ಸಂಶೋಧಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ತಮ್ಮ 'ಕೊಟ್ಟ' ಕಾದಂಬರಿಯಲ್ಲಿ ಮಂಜೇಶ್ವರದ ರಾಜ ಅಂಗಾರವರ್ಮನು ಹುಬಾಶಿಕನನ್ನು ಕೊಂದನೆಂದು ಬರೆದಿದ್ದಾರೆ. ಇನ್ನು ಕೆಲವು ತಜ್ಞರು 'ಹುಬಾಶಿಕ' ಎಂಬ ಪದಕ್ಕೆ ಜಪಾನೀಸ್ ಅಥವಾ ಆಫ್ರಿಕನ್ ನಂಟು ಇರಬಹುದು ಎಂದು ಶಂಕಿಸುತ್ತಾರೆ.

ಇಬ್ನ ಬತೂತಾನಂತಹ ಪ್ರವಾಸಿಗರು ಕೂಡ ಭಾರತದ ವಿವಿಧ ಭಾಗಗಳಲ್ಲಿ 'ಹಬಶಿ' ಸೈನಿಕರ ಬಗ್ಗೆ ಉಲ್ಲೇಖಿಸಿದ್ದು, ಕೊರಗರು ಇಥಿಯೋಪಿಯಾ ಅಥವಾ ಆಫ್ರಿಕಾದ ಸಿದ್ದಿ ಸಮುದಾಯದೊಂದಿಗೆ ಸಂಬಂಧ ಹೊಂದಿರಬಹುದು ಎಂಬ ವಾದಗಳೂ ಇವೆ.

ಪ್ರಸ್ತುತ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹರಡಿರುವ ಈ ಸಮುದಾಯವು ತನ್ನ ವೈಭವದ ಇತಿಹಾಸವನ್ನು ಮರೆತು, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಲ್ಲಿ ಬೇಯುತ್ತಿದೆ.

ಪ್ರಕೃತಿಯ ಆರಾಧಕರ ಅಳಿವು-ಉಳಿವಿನ ಹೋರಾಟ

ಬುಟ್ಟಿ ಹೆಣೆಯುವ ಕಸುಬು ಮತ್ತು 'ಕೊರಗ' ಎಂಬ ವಿಶಿಷ್ಟ ದ್ರಾವಿಡ ಭಾಷೆಯನ್ನು ಹೊಂದಿರುವ ಈ ಜನರು ಪ್ರಕೃತಿಯನ್ನೇ ದೈವವೆಂದು ನಂಬಿದವರು. ಆದರೆ ಕಾಡಿನ ಮೇಲಿನ ಹಕ್ಕು ಕಡಿಮೆಯಾದಂತೆ ಮತ್ತು ಆಧುನಿಕತೆಯ ಅಬ್ಬರದಲ್ಲಿ ಬಿದಿರಿನ ಲಭ್ಯತೆ ಕ್ಷೀಣಿಸಿದಂತೆ ಇವರ ಬದುಕು ಬೀದಿಗೆ ಬಂದಿದೆ. ಅಪೌಷ್ಟಿಕತೆ ಮತ್ತು ಆರ್ಥಿಕ ಮುಗ್ಗಟ್ಟಿನಿಂದಾಗಿ ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿದೆ. ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ತಲುಪುವಲ್ಲಿ ಆಗುತ್ತಿರುವ ವಿಳಂಬ ಈ ಸಮುದಾಯದ ಅವನತಿಗೆ ದಾರಿಯಾಗುತ್ತಿದೆ.

ಅಂತಹ ಸಂದರ್ಭದಲ್ಲಿ ಕೊರಗರ ಚಿಗುರಿದ ಕನಸಾಗಿ ಡಾ. ಸ್ನೇಹಾ ಉದಯವಾಗಿದ್ದಾರೆ! ಅವರಿಗೆ ದ ಫೆಡರಲ್‌ ಕರ್ನಾಟಕದ ಶುಭಾಶಯಗಳು

Read More
Next Story