
ಡಾ.ಎಸ್.ಜಿ.ಸುಶೀಲಮ್ಮ
ಸುಮಂಗಲಿ ಸೇವಾಶ್ರಮ ಡಾ.ಎಸ್.ಜಿ.ಸುಶೀಲಮ್ಮಗೆ ಪದ್ಮಶ್ರೀ ಗೌರವ
ಆರು ದಶಕಗಳಿಂದ ಮಹಿಳಾ ಸಬಲೀಕರಣ ಮತ್ತು ಅನಾಥ ಮಕ್ಕಳ ಏಳಿಗೆಗಾಗಿ ಸುಶೀಲಮ್ಮ ಅವರು ಸಲ್ಲಿಸಿದ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಘೋಷಣೆ ಮಾಡಿದೆ.
ಬೆಂಗಳೂರಿನ ಖ್ಯಾತ ಸಮಾಜ ಸೇವಕಿ, ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಡಾ. ಎಸ್.ಜಿ. ಸುಶೀಲಮ್ಮ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಗೌರವ ಸಂದಿದೆ.
ಆರು ದಶಕಗಳಿಂದ ಮಹಿಳಾ ಸಬಲೀಕರಣ ಮತ್ತು ಅನಾಥ ಮಕ್ಕಳ ಏಳಿಗೆಗಾಗಿ ಸುಶೀಲಮ್ಮ ಅವರು ಸಲ್ಲಿಸಿದ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಘೋಷಣೆ ಮಾಡಿದೆ.
ಸೇವೆಯ ಹಾದಿಯಲ್ಲಿ ಸುಶೀಲಮ್ಮ
1939 ರಲ್ಲಿ ಜನಿಸಿದ ಡಾ.ಎಸ್.ಜಿ.ಸುಶೀಲಮ್ಮ ಅವರು 15 ವರ್ಷಗಳ ಕಾಲ ರೆಂಕೋ (REMCO) ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಕಣ್ಣೀರು ಒರೆಸುವ ಹಂಬಲದಿಂದ 1963 ರಲ್ಲಿ ತಮ್ಮ ವೃತ್ತಿಜೀವನಕ್ಕೆ ರಾಜೀನಾಮೆ ನೀಡಿ ಸೇವೆಯ ಹಾದಿ ತುಳಿದರು. ಅಂದಿನಿಂದ ಪ್ರಾರಂಭವಾದ ಅವರ ಸೇವಾ ಕೈಂಕರ್ಯ ಇಂದಿಗೂ ನಿಂತಿಲ್ಲ. ಪ್ರಸ್ತುತ, ‘ಸುಮಂಗಲಿ ಸೇವಾ ಆಶ್ರಮ’ ಎಂಬ ಹೆಮ್ಮರವಾಗಿ ಬೆಳೆದಿದೆ.
ಸುಶೀಲಮ್ಮ ಅವರ ಸಾಧನೆಯ ಮೈಲಿಗಲ್ಲು
1975ರಲ್ಲಿ ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ ನಿರ್ಗತಿಕ ಮಹಿಳೆಯರು ಮತ್ತು ಅನಾಥರಿಗಾಗಿ ಸುಮಂಗಲಿ ಸೇವಾ ಆಶ್ರಮ ಆರಂಭಿಸಿದರು.
1976 ರಲ್ಲಿ ನರ್ಸರಿ ಹಾಗೂ 1985 ರಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಬಸವಾನಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಬಡ ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಿದ್ದಾರೆ.
ಸಾವಿರಾರು ಮಹಿಳೆಯರಿಗೆ ಹೊಲಿಗೆ, ಕುಶಲಕರ್ಮಿ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ.
ಗಾಂಧಿವಾದಿ ಆಗಿರುವ ಡಾ. ಎಸ್.ಜಿ. ಸುಶೀಲಮ್ಮ ಅವರು ಆಶ್ರಮದ ಪ್ರತಿಯೊಂದು ಕಾರ್ಯದಲ್ಲೂ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ.
ಸಾವಿರಾರು ಅನಾಥ ಮಕ್ಕಳಿಗೆ ವಸತಿ, ಶಿಕ್ಷಣ ನೀಡಿ ಅವರ ಬದುಕಿಗೆ ದಾರಿದೀಪವಾಗಿದ್ದಾರೆ. ಆಶ್ರಯ ನೀಡುವುದಷ್ಟೇ ಅಲ್ಲದೆ, ಮಹಿಳಾ ಒಕ್ಕೂಟಗಳನ್ನು ರಚಿಸಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಡಾ. ಸುಶೀಲಮ್ಮ ಅವರಿಗೆ ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ, ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಜಾನಕಿದೇವಿ ಬಜಾಜ್ ಪುರಸ್ಕಾರ ಮತ್ತು ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.

