ವರನಟ ಡಾ. ರಾಜ್‌ ಅಗಲಿಕೆಗೆ 18 ವರ್ಷ | ಅಳಿಯಲಾರದ ʼಆರಾಧ್ಯ ದೈವʼದ ಅಭಿಮಾನ
x

ವರನಟ ಡಾ. ರಾಜ್‌ ಅಗಲಿಕೆಗೆ 18 ವರ್ಷ | ಅಳಿಯಲಾರದ ʼಆರಾಧ್ಯ ದೈವʼದ ಅಭಿಮಾನ

ಕನ್ನಡ ಚಿತ್ರರಂಗದಲ್ಲಿ 200 ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಮೊದಲ ಕಲಾವಿದ ಮೇರುನಟ ಡಾ. ರಾಜ್‌ಕುಮಾರ್‌ ಅವರು ನಿಧನರಾಗಿ ಇಂದಿಗೆ 18 ವರ್ಷಗಳಾಗಿವೆ.


ಕನ್ನಡ ಸಾಂಸ್ಕೃತಿಕ, ಕಲಾ ಲೋಕದ ಐಕಾನ್‌ ಅನ್ನುವಷ್ಟರ ಮಟ್ಟಿಗೆ ಕನ್ನಡದ ಜನರಲ್ಲಿ ಬೆರೆತು ಹೋಗಿರುವ ರಾಜ ಕುಮಾರ್‌ ಅವರು ಮೃತಪಟ್ಟು ಇಂದಿಗೆ (ಎಪ್ರಿಲ್12) 18 ವರ್ಷ ಸಂದಿವೆ. ಸಾಮಾನ್ಯ ಕುಟುಂಬದಿಂದ ಬಂದು ರಂಗಭೂಮಿಯಲ್ಲಿ ಸಾಧನೆ ಮಾಡಿ, ಅಲ್ಲಿಂದ ಸಿನೆಮಾ ರಂಗಕ್ಕೆ ಕಾಲಿಟ್ಟವರು ರಾಜ್‌ ಕುಮಾರ್. ನಂತರ ಬರೋಬ್ಬರಿ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದ ಅವರನ್ನು ಲೆಕ್ಕವಿಲ್ಲದಷ್ಟು ಪುರಸ್ಕಾರಗಳು, ರಾಷ್ಟ್ರೀಯ, ಅಂತರಾಷ್ಟ್ರೀಯ ಮನ್ನಣೆಗಳು ಅರಸಿ ಬಂದಿವೆ.

ಆರಂಭಿಕ ಜೀವನ

ಅಭಿಮಾನಿಗಳ ಪಾಲಿನ ʼಅಪ್ಪಾಜಿ, ರಾಜಣ್ಣಾ ಅಥವಾ ಅಣ್ಣಾವ್ರʼ ಮೂಲ ಹೆಸರು ಮುತ್ತಣ್ಣ (ಮುತ್ತುರಾಜು). ಹುಟ್ಟಿದ್ದು, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ. ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, 1929 ರ ಎಪ್ರಿಲ್‌ 24 ರಂದು ಹುಟ್ಟಿದ ರಾಜ್‌ ಕುಮಾರ್‌ ಅವರು ತಮ್ಮ ತಂದೆಯ ಪ್ರಭಾವದಿಂದ ಬಾಲ್ಯದಲ್ಲೇ ನಟನೆಯೆಡೆಗೆ ಆಕರ್ಷಿತರಾಗಿದ್ದರು.

ಗುಬ್ಬಿ ನಾಟಕ ಕಂಪೆನಿಯಲ್ಲಿ ಕಲಾವಿದರಾಗಿದ್ದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರು ರೌದ್ರ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರನ್ನೇ ಹಿಂಬಾಲಿಸಿದ ಮುತ್ತಣ್ಣ, ಕಿರಿಯ ವಯಸ್ಸಿನಲ್ಲೇ ಹಲವಾರು ನಾಟಕಗಳಲ್ಲಿ ಬಣ್ಣ ಹಚ್ಚಿದರು. ನಂತರ ರಂಗಭೂಮಿಯಲ್ಲೇ ಸಕ್ರಿಯರಾಗಿದ್ದ ರಾಜ್‌ ಕುಮಾರ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟದ್ದು ಕೂಡಾ ಆಕಸ್ಮಿಕವೇ.

ಚಿತ್ರರಂಗದೆಡೆಗೆ

ʼಬೇಡರ ಕಣ್ಣಪ್ಪʼ ಚಿತ್ರದಲ್ಲಿ ಕಣ್ಣಪ್ಪ ಪಾತ್ರ ನಿರ್ವಹಿಸಲು ಸೂಕ್ತ ಹೊಸ ನಟನನ್ನು ಹುಡುಕುತ್ತಿದ್ದ ನಿರ್ದೇಶಕ ಹೆಚ್.ಎಲ್.ಎನ್.ಸಿಂಹ ಅವರು, ಬೇಡರ ಕಣ್ಣಪ್ಪ ನಾಟಕದಲ್ಲಿ ಆಗಿನ ಮುತ್ತುರಾಜ್‌ ರ ಅಭಿನಯ ನೋಡಿ ಸಂತೃಪ್ತರಾಗಿ ಅವರನ್ನೇ ಕಣ್ಣಪ್ಪನ ಪಾತ್ರದಲ್ಲಿ ಸಿನೆಮಾದಲ್ಲಿ ನಟಿಸಲು ಕರೆ ನೀಡುತ್ತಾರೆ ನಂತರ, ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣ ಅವರನ್ನೂ ಒಪ್ಪಿಸುತ್ತಾರೆ. ನಂತರ, ಮುತ್ತುರಾಜು ಹೆಸರನ್ನು ರಾಜ್‌ ಕುಮಾರ್‌ ಎಂದು ಬದಲಾಯಿಸಿ, ಸಿನೆಮಾದಲ್ಲಿ ನಟಿಸುತ್ತಾರೆ. ಚಿತ್ರವು 1954 ರಲ್ಲಿ ಬಿಡುಗಡೆಗೊಂಡು ನಿರೀಕ್ಷೆಗೂ ಮೀರಿ ಯಶಸ್ಸು ಪಡೆಯುತ್ತದೆ. ಅಲ್ಲದೆ, ಈ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು.

ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ನಂತರ ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ (ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳು, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ಸೇರಿದಂತೆ 200 ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಜ್‌ ಕುಮಾರ್‌ ಸಿನೆಮಾಗಳ ಪ್ರಭಾವ ಯಾವ ಮಟ್ಟಿಗಿತ್ತೆಂದರೆ, ರಾಜ್‌ ಕುಮಾರ್‌ ಅವರ ʼಮಂತ್ರಾಲಯ ಮಹಾತ್ಮೆʼ ಚಿತ್ರ ಬಿಡುಗಡೆಯಾದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿದೆ ಎಂಬ ಮಾತುಗಳೂ ಇವೆ. ಅಲ್ಲದೆ, ಈ ಚಿತ್ರದ ಅಭಿನಯವು ತಮ್ಮ ಚಿತ್ರ ಬದುಕಿನ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸ್ವತಃ ರಾಜ್‌ ಕುಮಾರ್‌ ಅವರೇ ಹೇಳಿದ್ದರು.

1968 ರಲ್ಲಿ ʼಜೇಡರ ಬಲೆʼ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರದಲ್ಲಿ ಕಾಣಿಸಿಕೊಂಡ ರಾಜ್‌, ಇದೇ ಸರಣಿಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ 999) ಅಭಿನಯಿಸಿದರು. ಆಪರೇಷನ್ ಜಾಕ್‌ಪಾಟ್‌, ಸಿ.ಐ.ಡಿ. 999, ಗೋವಾದಲ್ಲಿ ಸಿ.ಐ.ಡಿ. 999 ಹಾಗೂ ಆಪರೇಷನ್ ಡೈಮಂಡ್ ರಾಕೆಟ್ ಮೊದಲಾದ ಚಿತ್ರಗಳು ಇದೇ ಸರಣಿಯಲ್ಲಿ ತೆರೆ ಕಂಡಿತ್ತು.

ಗಾಯಕರಾಗಿಯೂ ಛಾಪು ಮೂಡಿಸಿದ ರಾಜಣ್ಣ

ಕೇವಲ ನಟನೆಯಲ್ಲದೆ, ತಮ್ಮ ವಿಶಿಷ್ಟ ಕಂಠದ ಗಾಯನದ ಮೂಲಕವೂ ರಾಜ್‌ ಕುಮಾರ್‌ ಹೆಸರುವಾಸಿ. ರಾಜ್‌ ಧ್ವನಿಯ ಭಕ್ತಿಗೀತೆಗಳಿಗೆ ಈಗಲೂ ಅಪಾರ ಸಂಖ್ಯೆಯಲ್ಲಿ ಕೇಳುಗರಿದ್ದಾರೆ.

1974ರಲ್ಲಿ ಬಿಡುಗಡೆಯಾದ ʼಸಂಪತ್ತಿಗೆ ಸವಾಲ್ʼ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಎಂಬ ಹಾಡಿನಿಂದ ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದ ಅವರು, ಸಂಗೀತ ನಿರ್ದೇಶಕರಾದ ಜಿ.ಕೆ.ವೆಂಕಟೇಶ್ ಹಾಗೂ ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ʼಜೀವನ ಚೈತ್ರʼ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಕೂಡಾ ಅವರನ್ನು ಅರಸಿ ಬಂದಿದೆ.

ಸಾಮಾಜಿಕ ಚಳವಳಿಗಳಲ್ಲಿ ಡಾ. ರಾಜ್‌

1981 ರಲ್ಲಿ ಗೋಕಾಕ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಸಂಘಸಂಸ್ಥೆಗಳು ಆರಂಭಿಸಿದ ಚಳುವಳಿಗೆ ಡಾ. ರಾಜ್‌ ನೇತೃತ್ವದಲ್ಲಿ ಕನ್ನಡ ಚಿತ್ರರಂಗವೂ ಸಾಥ ನೀಡಿದಾಗ, ಇಡೀ ಕರ್ನಾಟಕವೇ ಚಳುವಳಿಯ ಬೆನ್ನಿಗೆ ನಿಂತಿತು. ರಾಜ್‌ ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಕರ್ನಾಟಕದ ಜನತೆ ಈ ಚಳವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿತ್ತು. ಚಳವಳಿಯ ತೀವ್ರತೆಗೆ ಸ್ಪಂದಿಸಿದ ಸರ್ಕಾರವು, ಕಡೆಗೆ ಗೋಕಾಕ್ ವರದಿಯನ್ನು ಜಾರಿಗೊಳಿಸಿತ್ತು‌.

ವೀರಪ್ಪನ್‌ ನಿಂದ ಅಪಹರಣ

2000 ಜುಲೈ ನಲ್ಲಿ ದಂತಚೋರ ವೀರಪ್ಪನ್‌ ತಂಡವು ಡಾ. ರಾಜ್ ಅವರನ್ನು ಅವರ ಗಾಜನೂರಿನಲ್ಲಿರುವ ತೋಟದ ಮನೆಯಿಂದ ಅಪಹರಿಸಿತ್ತು. ಡಾ. ರಾಜ್‌ ಅವರನ್ನು ಅಪಹರಿಸಿದ್ದ ವೀರಪ್ಪನ್‌ ಗ್ಯಾಂಗ್‌, ಅವರನ್ನು ಒತ್ತೆಯಾಳಾಗಿಟ್ಟುಕೊಂಡು ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟಿತ್ತು. ರಾಜ್‌ ಅಪಹರಣ ಪ್ರಕರಣವು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ನೂರೆಂಟು ದಿನಗಳ ಕಾಲ ಅಪಹೃತರಾಗಿದ್ದ ರಾಜ್‌ ಅವರು 2000 ನವೆಂಬರ್‌ 15 ರಂದು ಬಿಡುಗಡೆಗೊಂಡಿದ್ದರು.

ಕರ್ನಾಟಕದಲ್ಲಿ ಅಪಾರ ಸಂಖ್ಯೆಯ, ತೀವ್ರ ಅಭಿಮಾನಿಗಳನ್ನು ಹೊಂದಿದ್ದ ರಾಜ್‌ ಕುಮಾರ್‌ ಅವರು ತಮ್ಮ ಅಭಿನಯ, ಗಾಯನ, ಸಾಮಾಜಿಕ ಕಳಕಳಿಯಲ್ಲದೆ, ಸ್ವಭಾವದ ಮೂಲಕವೂ ಸಾವಿರಾರು ಜನರ ಮೇಲೆ ಪ್ರಭಾವ ಬೀರಿದವರು. ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದ ರಾಜ್‌ ಕುಮಾರ್‌ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದರೂ, ಸಾರ್ವಜನಿಕ ಬದುಕಿನಲ್ಲಿ ಘನತೆ ಪಾಲಿಸಿ ಒಂದು ಮಾದರಿಯನ್ನು ಸೃಷ್ಟಿಸಿ ಹೋಗಿದ್ದಾರೆ.

ತಮ್ಮ ಅಭಿನಯವಷ್ಟೇ ಅಲ್ಲದೆ, ತಮ್ಮ ವ್ಯಕ್ತಿತ್ವ ಮತ್ತು ನಡೆನುಡಿಗಳ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಐಕಾನ್‌ ಆಗಿ, ಕನ್ನಡ ಮತ್ತು ಕನ್ನಡಿಗರ ಮೇರು ಪ್ರತಿಮೆಯಾಗಿ ಬೆಳೆದ ಡಾ ರಾಜ್‌ ಕುಮಾರ್‌ ಅವರು 2006 ರ ಎಪ್ರಿಲ್‌ 12 ರಂದು ಎದೆನೋವಿನಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಕನ್ನಡಿಗರ ಆರಾಧ್ಯ ದೈವ ಎಂದೇ ಹೆಸರಾಗಿರುವ ಡಾ ರಾಜ್‌ ಅವರ ಯುಗಾಂತ್ಯವಾಯಿತು. ಆದರೂ ರಾಜಣ್ಣ ಅವರ ಕುರಿತ ಅಭಿಮಾನ ದಶಕಗಳ ಬಳಿಕವೂ ಹಬ್ಬುತ್ತಲೇ ಇದೆ. ಅದು ವರನಟ ಡಾ ರಾಜ್‌ ಅವರ ದೊಡ್ಡತನ!

Read More
Next Story