The Federal Special Series -2 |ರಾಜ್ ಅಪಹರಣದ 25ನೇ ವರ್ಷ:  ಪಾರ್ವತಮ್ಮ ಸೋದರ ಚಿನ್ನೇಗೌಡ ಬಿಚ್ಚಿಟ್ಟ ಸತ್ಯವೇನು?
x

The Federal Special Series -2 |ರಾಜ್ ಅಪಹರಣದ 25ನೇ ವರ್ಷ: ಪಾರ್ವತಮ್ಮ ಸೋದರ ಚಿನ್ನೇಗೌಡ ಬಿಚ್ಚಿಟ್ಟ ಸತ್ಯವೇನು?

ಬೋರ್​ವೆಲ್​ನಲ್ಲಿ ನೀರು ಬಂದ ಸಂಭ್ರಮವನ್ನು ಕಣ್ತುಂಬಿಕೊಳ್ಳಲೇಬೇಕು ಎಂದು ಹಠ ಮಾಡಿ ಅಣ್ಣಾವ್ರು ಗಾಜನೂರಿಗೆ ಪ್ರಯಾಣ ಬೆಳೆಸಿದ್ದರು," ಎಂದು ಚಿನ್ನೇಗೌಡ ಸ್ಮರಿಸಿಕೊಂಡಿದ್ದಾರೆ.


ವರನಟ ಡಾ. ರಾಜ್ಕುಮಾರ್ ಅವರ ಅಪಹರಣ ಘಟನೆಗೆ 25 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ, ಆ ಕರಾಳ ದಿನದಂದು ನಡೆದ ಅನೇಕ ಸಂಗತಿಗಳನ್ನು ಮತ್ತೆ ಸ್ಮರಿಸಲಾಗುತ್ತಿದೆ. . 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಡಾ. ರಾಜ್​ಕುಮಾರ್​ ಅವರ ಸಂಬಂಧಿ ಚಿನ್ನೇಗೌಡ ಅವರು, ಅಂದು ಅಣ್ಣಾವ್ರು ಗಾಜನೂರಿಗೆ ಹೋಗಲು ಕಾರಣವಾದ ಸನ್ನಿವೇಶ ಮತ್ತು ಅಪಹರಣದ ಸಂದರ್ಭದಲ್ಲಿ ನಡೆದಿದ್ದ ನಾಟಕೀಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

ಅಪಹರಣಕ್ಕೂ ಮುನ್ನ 'ಭಕ್ತ ಅಂಬರೀಶ' ಸಿನಿಮಾದ ಕೆಲಸಗಳು ನಡೆಯುತ್ತಿದ್ದವು ಎಂದು ನೆನಪಿಸಿಕೊಂಡ ಚಿನ್ನೇಗೌಡ, "ಗಾಜನೂರಿನ ತೋಟದ ಮನೆಯಲ್ಲಿ ಹೊಸದಾಗಿ ಕೊರೆಸಿದ್ದ ಬೋರ್​ವೆಲ್​ನಲ್ಲಿ ನೀರು ಬಂದಿತ್ತು. ಈ ಖುಷಿಯ ವಿಚಾರ ತಿಳಿದ ತಕ್ಷಣ ಡಾ. ರಾಜ್​ಕುಮಾರ್​ ಅವರಿಗೆ ಅಲ್ಲಿಗೆ ಹೋಗುವ ಬಯಕೆಯಾಯಿತು. ಪಾರ್ವತಮ್ಮನವರು 'ಈಗ ಬೇಡ, ಇನ್ನೊಂದು ದಿನ ಹೋಗೋಣ' ಎಂದು ಹೇಳಿದರೂ, ನೀರು ಬಂದ ಸಂಭ್ರಮವನ್ನು ಕಣ್ತುಂಬಿಕೊಳ್ಳಲೇಬೇಕು ಎಂದು ಹಠ ಮಾಡಿ ಅಣ್ಣಾವ್ರು ಗಾಜನೂರಿಗೆ ಪ್ರಯಾಣ ಬೆಳೆಸಿದ್ದರು," ಎಂದು ವಿವರಿಸಿದರು. ಬಹುಶಃ ಆ ಹಠವೇ ಆ ದುರಂತಕ್ಕೆ ಕಾರಣವಾಯಿತು ಎಂದು ಅವರು ನೋವಿನಿಂದ ಸ್ಮರಿಸಿಕೊಂಡರು.

ಪಿಸ್ತೂಲು ತೆಗೆದಿದ್ದ ಪಾರ್ವತಮ್ಮ, ತಡೆದಿದ್ದ ಅಣ್ಣಾವ್ರು

ವೀರಪ್ಪನ್ ಮತ್ತು ಅವನ ಸಹಚರರು ಮನೆಗೆ ನುಗ್ಗಿದಾಗ ನಡೆದ ಆಘಾತಕಾರಿ ಕ್ಷಣವನ್ನು ಚಿನ್ನೇಗೌಡರು ಬಿಚ್ಚಿಟ್ಟರು. "ಆ ಸಂದರ್ಭದಲ್ಲಿ ಪಾರ್ವತಮ್ಮನವರು ಧೈರ್ಯಗೆಡದೆ, ಬ್ಯಾಗ್​​ನಲ್ಲಿದ್ದ ಪಿಸ್ತೂಲನ್ನು ತೆಗೆಯಲು ಮುಂದಾಗಿದ್ದರು. ಆದರೆ, ಡಾ. ರಾಜ್​ಕುಮಾರ್​ ಅವರೇ ಅವರನ್ನು ತಡೆದು, ಯಾವುದೇ ಅನಾಹುತವಾಗಬಾರದು ಎಂಬ ಉದ್ದೇಶದಿಂದ ಸುಮ್ಮನಿರುವಂತೆ ಸೂಚಿಸಿದ್ದರು," ಎಂದು ಅವರು ಹೇಳಿದರು.

108 ದಿನಗಳ ವನವಾಸದ ನಂತರ ಬಿಡುಗಡೆಯಾಗಿ ಮನೆಗೆ ಬಂದಾಗ, ಆ ಕರಾಳ ದಿನಗಳ ಬಗ್ಗೆ ಯಾರೂ ಹೆಚ್ಚು ಮಾತನಾಡಬಾರದು ಎಂದು ಅಣ್ಣಾವ್ರು ಎಲ್ಲರಿಗೂ ಹೇಳಿದ್ದರು. "ಕಾಡಿನಲ್ಲಿದ್ದಾಗ ನಡೆದ ಘಟನೆಗಳ ಬಗ್ಗೆ ಚರ್ಚೆ ಬೇಡ, ಎಲ್ಲವೂ ದೈವದ ಇಚ್ಛೆ ಎಂದು ಭಾವಿಸೋಣ," ಎನ್ನುವ ಮೂಲಕ ತಮ್ಮ ದೊಡ್ಡ ಗುಣವನ್ನು ಮೆರೆದಿದ್ದರು ಎಂದು ಚಿನ್ನೇಗೌಡರು ಭಾವುಕರಾಗಿ ನುಡಿದರು.


ಡಾ. ರಾಜ್‌ ಅಪಹರಣ ಹೇಗಾಯಿತು? ಸರ್ಕಾರ ಯಾವ ಪ್ರಯತ್ನ ನಡೆಸಿತು? ವೀರಪ್ಪನ್‌ನಿಂದ ರಾಜ್‌ಕುಮಾರ್‌ ಬಿಡುಗಡೆಗೆ ಯಾವೆಲ್ಲಾ ಪ್ರಯತ್ನಗಳು ನಡೆಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ದ ಫೆಡರಲ್‌ ಕರ್ನಾಟಕ ಪ್ರಯತ್ನಿಸಿದೆ.

ಡಾ. ರಾಜ್‌ ಅಪಹರಣ 25 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಒಟ್ಟು ಪ್ರಕರಣದ ಆಳ-ಅಗಲದ ಬಗ್ಗೆ ಸರಣಿ ವಿಡಿಯೋಗಳನ್ನು ಸಾದರ ಪಡಿಸುತ್ತಿದೆ. ಎರಡನೇ ಭಾಗ ಇಲ್ಲಿದೆ. ಪಾರ್ವತಮ್ಮ ರಾಜ್‌ಕುಮಾರ್‌ ಸೋದರ ಚಿನ್ನೇಗೌಡರು ಏನಂತಾರೆ? ಇಲ್ಲಿ ಕ್ಲಿಕ್‌ ಮಾಡಿ..


Read More
Next Story