Naxals Surrender | ನಕ್ಸಲರ ಶರಣಾಗತಿಯಲ್ಲೂ ಪ್ರಚಾರಪ್ರಿಯತೆ: ಡಾ. ಬಂಜಗೆರೆ ಜಯಪ್ರಕಾಶ್‌ ಮೌನ ಪ್ರತಿಭಟನೆ
x
ನಕ್ಸಲರು ಶರಣಾಗುವ ಮುನ್ನ ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರಿಗೆ (ಡಾ. ಬಂಜಗೆರೆ ಜಯಪ್ರಕಾಶ್‌ ಸೇರಿದಂತೆ) ಹೊಸ ವರ್ಷದ ಶುಭಾಶಯ ಕೋರಿದ ಚಿತ್ರ 

Naxals Surrender | ನಕ್ಸಲರ ಶರಣಾಗತಿಯಲ್ಲೂ ಪ್ರಚಾರಪ್ರಿಯತೆ: ಡಾ. ಬಂಜಗೆರೆ ಜಯಪ್ರಕಾಶ್‌ ಮೌನ ಪ್ರತಿಭಟನೆ

ಸೋತು ಬರುತ್ತಿರುವ, ತಪ್ಪುಹಾದಿಯಲ್ಲಿ ನಡೆದು ದಣಿದ ಹೋರಾಟಗಾರರ ನಿಸ್ಸಹಾಯಕತೆಯ ಈ ಸನ್ನಿವೇಶ ನಮ್ಮ ಭಾಷಣಕೋರತನಕ್ಕೆ, ಪ್ರಚಾರಪ್ರಿಯ ಫೋಸುಗಳ ಸ್ಪರ್ಧೆಗೆ ಸಾಕ್ಷಿಯಾಗದಿರಲಿ. ನಾನಂತೂ ಮೌನವಾಗಿ ದೂರದಲ್ಲಿ ನಿಂತುಕೊಳ್ಳುವವನು. - ಬಂಜಗೆರೆ ಜಯಪ್ರಕಾಶ್


ನಕ್ಸಲರ ಶರಣಾಗತಿ ನೀತಿಯ ಅನುಸಾರ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿ ನಕ್ಸಲರು ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಶರಣಾದ ಆರು ನಕ್ಸಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಪ್ರದರ್ಶಿಸುವ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಮನಸ್ಥಿತಿ ಬಗ್ಗೆ ಪ್ರಗತಿಪರರಿಂದಲೇ ವಿರೋಧ ವ್ಯಕ್ತವಾಗಿದೆ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಕರೆತಂದು ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದ ಆವರಣದೊಳಗೆ ಬಂದ ಬಳಿಕ ಮತ್ತೆ ಚಿಕ್ಕಮಗಳೂರಿಗೆ ಕರೆದೊಯ್ಯುವ ಕಾರ್ಯ ನಡೆದಿದೆ. ಮೊದಲು ಚಿಕ್ಕಮಗಳೂರಿನಲ್ಲೇ ʼಶರಣಾಗತಿʼ ಎಂದು ಹೇಳಿದ್ದ ಸಮಿತಿ, ಕೊನೆಗಳಿಗೆಯಲ್ಲಿ ಬೆಂಗಳೂರಿಗೆ ನಕ್ಸಲರನ್ನು ʼರವಾನಿಸಿʼ ಮುಖ್ಯಮಂತ್ರಿ ಕಚೇರಿಯಲ್ಲಿ ಹಾಜರುಪಡಿಸುವ ಪ್ರಹಸನ ನಡೆಸಿದೆಯೇ? ಎಂಬ ಅನುಮಾನವನ್ನು ಹಲವರು ವ್ಯಕ್ಪಪಡಿಸಿದ್ದಾರೆ.

ಪ್ರಜಾಪ್ರಭುತ್ವವನ್ನು ಒಪ್ಪದೆ ಹಿಂಸೆಯಿಂದ ಸಮಾಜವನ್ನು ತಿದ್ದಬಹುದೆಂಬ ಸಿದ್ಧಾಂತವನ್ನು ನಂಬಿದ ನಕ್ಸಲ್‌ ಚಳವಳಿಗೆ ನುಗ್ಗಿದ್ದ ಕೆಳಸ್ತರದ ಯುವಕ, ಯುವತಿಯರು ಈಗ ಮತ್ತೆ ಪ್ರಜಾಪ್ರಭುತ್ವವನ್ನೇ ನೆಚ್ಚಿಕೊಂಡು ಕಾನೂನು ವ್ಯವಸ್ಥೆಗೆ ಶರಣಾದರೂ, ಅವರನ್ನು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆದೊಯ್ಯುತ್ತಿರುವ ನಿಲುವು ಕೇವಲ ಪ್ರದರ್ಶನಕ್ಕಾಗಿಯೇ ಎಂಬ ಪ್ರಶ್ನೆ ಕೇಳಿಬಂದಿದೆ.

ಈ ನಡುವೆ ನಕ್ಸಲ್ ಶರಣಾಗತಿಯ ವಿಷಯದಲ್ಲಿ ಕೆಲವು ವ್ಯಕ್ತಿಗಳು ಮತ್ತು ಗುಂಪುಗಳು ಸರ್ಕಾರ ನೇಮಿಸಿರುವ ಅಧಿಕೃತ ಸಮಿತಿಯನ್ನು ಬದಿಗೊತ್ತಿ ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ನಕ್ಸಲರ ಶರಣಾಗತಿ ನಡೆಯುವ ಮುನ್ನವೇ ಈ ಸನ್ನಿವೇಶವನ್ನು ಬಳಸಿಕೊಂಡು ಪ್ರಚಾರಪ್ರಿಯರಾಗುತ್ತಿರುವ ಬಗ್ಗೆ ಖ್ಯಾತ ಸಾಂಸ್ಕೃತಿಕ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌ ಅವರೇ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅವರದೇ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅದರ ಭಾವನೆಗೂ, ಶರಣಾಗತ ನಕ್ಸಲರನ್ನು ನಡೆಸಿಕೊಳ್ಳುತ್ತಿರುವ ರೀತಿಗೂ ಹೋಲಿಕೆಯಾಗುತ್ತಿದೆ. ವಿಶೇಷ ಎಂದರೆ, ಬಂಜಗೆರೆ ಜಯಪ್ರಕಾಶ್‌ ಅವರೂ ಸಮಿತಿಯಲ್ಲಿದ್ದರು. "ಶರಣಾಗತಿಯ ಈ ಸನ್ನಿವೇಶದಲ್ಲಿ ನಾವು ನಮ್ಮ ಖ್ಯಾತಿ ಹಾಗೂ ಸಾಮಾಜಿಕ ಮಾನ್ಯತೆಗಳ ನವೀಕರಣಕ್ಕೆ ಪ್ರಯತ್ನಿಸುವುದು ಕನಿಕರ ಹುಟ್ಟಿಸುತ್ತದೆ. ಟ್ರೋಫಿ ಗೆದ್ದ ಪಂದ್ಯದಂತೆ ಯಾವ ವ್ಯಕ್ತಿ, ಗುಂಪು ಪ್ರಯತ್ನಿಸುವುದು ನಿರ್ಲಜ್ಜೆಯ ಪ್ರದರ್ಶನ," ಎಂದು ಆ ಪತ್ರದಲ್ಲಿ ಬರೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಪತ್ರದಲ್ಲಿರುವ ಅಂಶಗಳು ಹೀಗಿವೆ;

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಬಂಜಗೆರೆ ಜಯಪ್ರಕಾಶ್‌ ಅವರದು ಎನ್ನಲಾದ ಪತ್ರ

ಸ್ನೇಹಿತರೆಲ್ಲರ ಗಮನಕ್ಕೆ.

ಪ್ರಿಯರೇ

ನಕ್ಸಲರು ಶರಣಾಗತಿ ಆಗುತ್ತಿರುವ ಈ ಸಂದರ್ಭದಲ್ಲಿ ನಾವು ನಿಮಿತ್ತ ಮಾತ್ರ ಎಂಬುದನ್ನು ನೆನಪಿಟ್ಟುಕೊಳ್ಳೋಣ.

ನಮ್ಮಲ್ಲಿ ಯಾರೂ ಪ್ರವಾದಿಗಳಿಲ್ಲ. ಅಥವಾ ಜಯಪ್ರಕಾಶ ನಾರಾಯಣರೂ ಇಲ್ಲ. ನಮ್ಮ ಬೋಧನೆಯಿಂದ ತಾತ್ವಿಕವಾಗಿ ಬದಲಾಗಿ, ಸೈದ್ಧಾಂತಿಕ ತಪ್ಪು ತಿಳಿದುಕೊಂಡು ನಕ್ಸಲರು ಮುಖ್ಯವಾಹಿನಿಗೆ ಬರಲು ನಾವು ಯಾರೂ ಕಾರಣರಾಗಿಲ್ಲ. ಸನ್ನಿವೇಶ ನಿರ್ಮಿಸಿದ ಹಿನ್ನಡೆ ಹಾಗೂ ಪೊಲೀಸ್‌ ಕಾರ್ಯಾಚರಣೆಯ ಒತ್ತಡ ಇವುಗಳಿಂದ ಅವರು ಅನಿವಾರ್ಯವಾಗಿ ಹೊರಬರುತ್ತಿದ್ದಾರೆ.

ಅವರನ್ನು ಈಗ ಬರಬೇಡಿ ಎಂದರೂ ಅವರು ಹಿಂದೆ ಹೋಗುವವರಲ್ಲ. ಕೆಲ ತಿಂಗಳ ಹಿಂದೆ ಬನ್ನಿ ಎಂದರೂ ಬರುತ್ತಿದ್ದವರಲ್ಲ.

ಇರಲಿ, ಈಗ ನಮ್ಮ ಚಾಣಾಕ್ಷತನ, ಜಾಣತನ, ಚಾಲಾಕಿತನಗಳ ಪ್ರದರ್ಶನಕ್ಕೆ ಯಾರೂ ಪ್ರಯತ್ನಿಸುವುದು ಸರಿಯಲ್ಲ. ಅವರ ಶರಣಾಗತಿಯ ಈ ಸನ್ನಿವೇಶದಲ್ಲಿ ನಾವು ನಮ್ಮ ಖ್ಯಾತಿ ಹಾಗೂ ಸಾಮಾಜಿಕ ಮಾನ್ಯತೆಗಳ ನವೀಕರಣಕ್ಕೆ ಪ್ರಯತ್ನಿಸುವುದು ಕನಿಕರ ಹುಟ್ಟಿಸುತ್ತದೆ. ಟ್ರೋಫಿ ಗೆದ್ದ ಪಂದ್ಯದಂತೆ ಯಾವ ವ್ಯಕ್ತಿ ಗುಂಪು ಪ್ರಯತ್ನಿಸುವುದು ನಿರ್ಲಜ್ಜೆಯ ಪ್ರದರ್ಶನ. ನಮ್ಮ ಮನಃಸಾಕ್ಷಿಗಳನ್ನು ಜಾಗೃತವಾಗಿರಿಸಿಕೊಳ್ಳೋಣ. ರಸ್ತೆ ಅಪಘಾತದಲ್ಲಿ ಸತ್ತ ಕೋತಿ ಶವ ಇಟ್ಟುಕೊಂಡು ತಟ್ಟೆ ಕಾಸು ಆಯುವವರಂತೆ ನಾವು ಸ್ಪರ್ಧೆಗಿಳಿದರೆ ಇವತ್ತಲ್ಲ ನಾಳೆ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆ ನಮ್ಮನ್ನು ಛೀಕರಿಸುತ್ತದೆ.

ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ನಾವಿರಬೇಕೇ ಹೊರತು ಪೊಲೀಸ್‌ ನಿರ್ದೇಶನಕ್ಕೆ ಕುಣಿಯುವ ಸೂತ್ರದ ಬೊಂಬೆಗಳಂತಲ್ಲ. ನಮ್ಮ ಅವಕಾಶವಾದಿತನ ಕಂಡು ಪೊಲೀಸ್‌ ಅಧಿಕಾರಿಗಳು ನಗಬಾರದು, ನಾಳೆ. ಜಾಗ್ರತೆಯಿಂದ ನಡೆದುಕೊಳ್ಳೋಣ.

ಸೋತು ಬರುತ್ತಿರುವ ತಪ್ಪುಹಾದಿಯಲ್ಲಿ ನಡೆದು ದಣಿದ ಹೋರಾಟಗಾರರ ನಿಸ್ಸಹಾಯಕತೆಯ ಈ ಸನ್ನಿವೇಶ ನಮ್ಮ ಭಾಷಣಕೋರತನಕ್ಕೆ, ಪ್ರಚಾರಪ್ರಿಯ ಪೋಸುಗಳ ಸ್ಪರ್ಧೆಗೆ ಸಾಕ್ಷಿಯಾಗದಿರಲಿ. ನಾನಂತೂ ಮೌನವಾಗಿ ದೂರದಲ್ಲಿ ನಿಂತುಕೊಳ್ಳುವವನು.

- ಬಂಜಗೆರೆ ಜಯಪ್ರಕಾಶ್

Read More
Next Story