![Namma Metro Fare Hike | ದರ ದುಪ್ಪಟ್ಟು; ದುಡ್ಡಿದ್ರೆ ಮಾತ್ರ ʼಮೆಟ್ರೋ ಮುಟ್ರೋʼ ಎನ್ನುತ್ತಿರುವ ಜನ! Namma Metro Fare Hike | ದರ ದುಪ್ಪಟ್ಟು; ದುಡ್ಡಿದ್ರೆ ಮಾತ್ರ ʼಮೆಟ್ರೋ ಮುಟ್ರೋʼ ಎನ್ನುತ್ತಿರುವ ಜನ!](https://karnataka.thefederal.com/h-upload/2025/02/13/512481-metrotrai-1.webp)
Namma Metro Fare Hike | ದರ ದುಪ್ಪಟ್ಟು; ದುಡ್ಡಿದ್ರೆ ಮಾತ್ರ ʼಮೆಟ್ರೋ ಮುಟ್ರೋʼ ಎನ್ನುತ್ತಿರುವ ಜನ!
ಮೆಟ್ರೋದಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ ಸರಾಸರಿ 8-9 ಲಕ್ಷ ಇರುತ್ತಿತ್ತು. ಫೆ.9 ರಂದು ಮೆಟ್ರೋ ಪ್ರಯಾಣ ದರವನ್ನು ಶೇ 50 ರಿಂದ 100 ರವರೆಗೆ ಏರಿಕೆ ಮಾಡಿದ ಬೆನ್ನೆಲ್ಲೆ ಮೆಟ್ರೋದಿಂದ ಸಾರ್ವಜನಿಕರು ದೂರ ಸರಿಯುತ್ತಿದ್ದಾರೆ.
ʼನಮ್ಮ ಮೆಟ್ರೋʼ ಪ್ರಯಾಣದರವನ್ನು ಏಕಾಏಕಿ ಶೇ.50-100ರಷ್ಟು ಏರಿಕೆ ಮಾಡಿದ ಬಳಿಕ ದಿನದಿಂದ ದಿನಕ್ಕೆ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ.
ಮೆಟ್ರೋದಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ ಸರಾಸರಿ 8-9 ಲಕ್ಷ ಇರುತ್ತಿತ್ತು. ಫೆ.9 ರಂದು ಮೆಟ್ರೋ ಪ್ರಯಾಣ ದರವನ್ನು ಶೇ 50 ರಿಂದ 100 ರವರೆಗೆ ಏರಿಕೆ ಮಾಡಿದ ಬೆನ್ನೆಲ್ಲೆ ಮೆಟ್ರೋದಿಂದ ಸಾರ್ವಜನಿಕರು ದೂರ ಸರಿಯುತ್ತಿದ್ದಾರೆ.
ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಜನರ ಆದಾಯ ಹಾಗೂ ಖರ್ಚುಗಳ ಸ್ವರೂಪವೇ ಬದಲಾಗಿದೆ. ಹಾಗಾಗಿ ದುಬಾರಿ ಮೆಟ್ರೋದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಪ್ರಯಾಣ ದರ ಏರಿಕೆಗೂ ಮೊದಲು ಫೆ.8 ರಂದು 8.07 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಸಾಂದರ್ಭಿಕ ವಿಶೇಷ ದಿನ ಹೊರತುಪಡಿಸಿ ಸಾಮಾನ್ಯವಾಗಿ ಇದೇ ಸಂಖ್ಯೆಯ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ಭಾನುವಾರ (ಫೆ.9) ರಜಾ ದಿನವಾದ ಕಾರಣ ಪ್ರಯಾಣಿಕರ ಸಂಖ್ಯೆ 6.23 ಲಕ್ಷಕ್ಕೆ ಇಳಿಕೆಯಾಗಿತ್ತು. ಸೋಮವಾರ ಕೆಲಸ ಕಾರ್ಯಗಳಿಗೆ ಹೋಗಲು ಜನರು ಮೆಟ್ರೋ ನಿಲ್ದಾಣಗಳಿಗೆ ಬಂದಾಗ ಪ್ರಯಾಣ ದರ ದುಪ್ಪಟ್ಟಾಗಿರುವುದು ಗಮನಕ್ಕೆ ಬಂದಿತು. ಅಂದು( ಫೆ.10) ಯಥಾಪ್ರಕಾರ ಮೆಟ್ರೋದಲ್ಲಿ ಒಟ್ಟು 8.28 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.
ದರ ಏರಿಕೆಗೆ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾದ ಬಳಿಕ ಫೆ.11 ರಂದು ಪ್ರಯಾಣಿಕರ ಸಂಖ್ಯೆ 7.78 ಲಕ್ಷಕ್ಕೆ ಇಳಿಕೆಯಾಗಿದೆ. ಫೆ.12 ರಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು 7.62 ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ ಮೂರು ದಿನಗಳ ಅಂತರದಲ್ಲಿ ಅಂದಾಜು 50ಸಾವಿರ ಪ್ರಯಾಣಿಕರು ಮೆಟ್ರೋದಿಂದ ದೂರ ಸರಿದಿರುವುದು ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.
ಫೆ.12ರಂದು ಸ್ಮಾರ್ಟ್ ಕಾರ್ಡ್ ಹೊಂದಿರುವ 4,15,686 ಮಂದಿ ಪ್ರಯಾಣಿಸಿದ್ದರೆ, ಒಂದು ದಿನದ ಪಾಸ್ ಪಡೆದವರು 196 ಮಂದಿ, ಮೂರು ದಿನದ ಪಾಸ್ ಪಡೆದವರು 108, ಐದು ದಿನದ ಪಾಸ್ ಪಡೆದ 390 ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ಅದೇ ರೀತಿ ಅದೇ ದಿನ, 1,73,176 ಮಂದಿ ಟೋಕನ್ ಪಡೆದರೆ, ಎನ್.ಸಿ.ಎಂ.ಸಿ. ಕಾರ್ಡ್ ಹೊಂದಿರುವವರು 17,341, ಕ್ಯೂ.ಆರ್. ಟಿಕೆಟ್ ಪಡೆದ 1,55,883 ಮಂದಿ ಪ್ರಯಾಣಿಸಿದ್ದಾರೆ. ಕ್ಯೂ ಆರ್ ನಮ್ಮ ಮೆಟ್ರೋದಲ್ಲಿ 43,062, ಕ್ಯೂ.ಆರ್. ವಾಟ್ಸಾಪ್ ಮೂಲಕ 82,608, ಕ್ಯೂಆರ್ ಪೇಟಿಎಂ ಮೂಲಕ 30213 ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬಿಎಂಟಿಸಿ ಪ್ರಯಾಣಕ್ಕೆ ಆದ್ಯತೆ
ಮೆಟ್ರೋ ಪ್ರಯಾಣದಿಂದ ದೂರ ಉಳಿದ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳತ್ತ ಮುಖ ಮಾಡಿದ್ದಾರೆ. ಮೆಟ್ರೋಗೆ ನೀಡುವ ಹಣದಲ್ಲೇ ಆಟೊದಲ್ಲಿ ಸಂಚರಿಸಬಹುದೆಂದು ಕೆಲವರು ಬುಕಿಂಗ್ ಆಟೊ, ಬೈಕ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಮಧ್ಯಮ ವರ್ಗದ ಜನರು ಮೆಟ್ರೋ ಪ್ರಯಾಣ ಅವಲಂಬಿಸಿದ್ದರು. ಈಗ ಬೆಲೆ ಏರಿಕೆಯಿಂದಾಗಿ ಮತ್ತೆ ಖಾಸಗಿ ವಾಹನಗಳಲ್ಲೇ ಕೆಲಸ ಕಾರ್ಯಗಳಿಗೆ ಹೋಗಲು ಆರಂಭಿಸಿದ್ದಾರೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಬಿಎಂಟಿಸಿಯ ಮುಖ್ಯ ಸಂಚಾರ ನಿಯಂತ್ರಕ (ಕಾರ್ಯಾಚರಣೆ) ವಿಶ್ವನಾಥ್ ಅವರು, "ಮೆಟ್ರೋದಲ್ಲಿ ಕಡಿಮೆಯಾಗಿರುವ ಪ್ರಯಾಣಿಕರು ಬಿಎಂಟಿಸಿ ಅವಲಂಬಿಸಿದ್ದಾರೆ ಎಂಬುದು 10 ದಿನಗಳ ಬಳಿಕ ತಿಳಿಯಲಿದೆ. ಈಗ ಮಾಮೂಲಿಯಂತೆ ಬಿಎಂಟಿಸಿ ಬಸ್‌ಗಳಲ್ಲಿ ಜನ ಪ್ರಯಾಣಿಸುತ್ತಿದ್ದಾರೆ. ಕೆಲವರು ಮೆಟ್ರೋ ಪ್ರಯಾಣ ದುಬಾರಿಯಾದ್ದರಿಂದ ಬಿಎಂಟಿಸಿಯತ್ತ ಒಲವು ತೋರಿಸಿರಬಹುದು. ಆದರೆ, ಮುಂದಿನ ಒಂದು ವಾರದಲ್ಲಿ ಇದರ ಸ್ಪಷ್ಟ ಚಿತ್ರಣ ತಿಳಿಯಲಿದೆ" ಎಂದು ತಿಳಿಸಿದರು.
"ಕೆಲವೆಡೆ ಬಸ್‌ಗಳಲ್ಲಿ ಜನಜಂಗುಳಿ ಇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏರ್ ಶೋ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ಜನ ಬರುತ್ತಿದ್ದಾರೆ. ಏರ್ ಶೋಗಾಗಿಯೇ ಪ್ರತ್ಯೇಕ 500 ಬಸ್‌ಗಳನ್ನು ನೀಡಲಾಗಿದೆ. ಹಾಗಾಗಿ ಕೊಂಚ ದಟ್ಟಣೆ ಇರಬಹುದು" ಎಂದು ತಿಳಿಸಿದರು.
ಇನ್ನು ಪ್ರಯಾಣಿಕರ ಸಂಚಾರದಿಂದ ಮೆಟ್ರೋಗೆ ನಿತ್ಯ ಎರಡರಿಂದ ಎರಡೂವರೆ ಕೋಟಿ ಆದಾಯ ಬರುತ್ತಿತ್ತು. ಈಗ ಪ್ರಯಾಣಿಕರ ಸಂಖ್ಯೆ ಇಳಿಕೆಯಾದ ಕಾರಣ ಆದಾಯ ಒಂದೂವರೆ ಕೋಟಿಗೆ ಇಳಿಕೆಯಾಗಿದೆ ಎನ್ನಲಾಗಿದೆ.