ಎಷ್ಟು ದಿನ ಸಚಿವನಾಗಿ ಇರುತ್ತೇನೋ ಗೊತ್ತಿಲ್ಲ: ಜಮೀರ್‌ ಅಹಮದ್‌
x

ಎಷ್ಟು ದಿನ ಸಚಿವನಾಗಿ ಇರುತ್ತೇನೋ ಗೊತ್ತಿಲ್ಲ: ಜಮೀರ್‌ ಅಹಮದ್‌


"ನಾನು ಎಷ್ಟು ದಿನ ಸಚಿವನಾಗಿ ಇರುತ್ತೇನೋ ಇಲ್ವೋ ಗೊತ್ತಿಲ್ಲ. ಮುಂದೆ ನಾನು ಮಂತ್ರಿ ಆಗಿರುತ್ತೇನೋ, ಇಲ್ವೋ ಗೊತ್ತಿಲ್ಲ" ಎನ್ನುವ ಮೂಲಕ ಸಚಿವ ಜಮೀರ್‌ ಅಹಮದ್‌ ಸಂಪುಟ ಸರ್ಜರಿಯ ಸುಳಿವು ಕೊಟ್ಟಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಅಲ್ಪಸಂಖ್ಯಾತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈಗ ನನ್ನನ್ನ ಅಲ್ಪಸಂಖ್ಯಾತ ಸಚಿವರನ್ನಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪಸಂಖ್ಯಾತ ಮಂತ್ರಿ ಆಗಿ ಇರುತ್ತೇನೆ ಎನ್ನುವ ವಿಶ್ವಾಸ ಇದೆ. ಆದರೂ, ಎಷ್ಟು ದಿನ ಸಚಿವನಾಗಿರುತ್ತೇನೋ ಗೊತ್ತಿಲ್ಲ, ಜೀವಂತವಾಗಿ ಇರುತ್ತೇನೋ ಇಲ್ವೋ ಅದೂ ಗೊತ್ತಿಲ್ಲ. ಯಾಕಂದ್ರೆ ದೇವರು ಎಲ್ಲವನ್ನೂ ಬರೆದಿಟ್ಟಿರ್ತಾನೆ..." ಎಂದು ಹೇಳಿದರು.

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರೊಂದಿಗೆ ದೆಹಲಿಗೆ ಹೋಗಿ ಹೈಕಮಾಂಡ್‌ ಜೊತೆ ಸರ್ಕಾರ ಮತ್ತು ಪಕ್ಷದ ಕುರಿತ ಮಹತ್ವದ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದರು. ಅದರ ಬೆನ್ನಲ್ಲೇ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಹೇಳಿಕೆ ಸಂಪುಟ ಪುನರ್‌ ರಚನೆಯ ಕುರಿತ ಊಹಾಪೋಹಗಳಿಗೆ ಬಲ ನೀಡಿದೆ.

ಈ ನಡುವೆ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ಅವರಿಗೂ ದೆಹಲಿ ಹೈಕಮಾಂಡ್‌ನಿಂದ ಬುಲಾವ್‌ ಬಂದಿದೆ ಎಂಬ ಮಾತುಗಳೂ ಇವೆ. ತನ್ವೀರ್‌ ಸೇಠ್‌ ದೆಹಲಿ ಭೇಟಿ ವಿಷಯದ ಹಿನ್ನೆಲೆಯಲ್ಲೂ ಜಮೀರ್‌ ಅವರ ಹೇಳಿಕೆ ವಿಶೇಷ ಅರ್ಥ ಪಡೆದುಕೊಂಡಿದೆ.

ವಿದ್ಯಾರ್ಥಿಗಳಿಗೆ ಉಚಿತ ಬೈಕ್

ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವೈಯಕ್ತಿಕ ಕರ್ಚಿನಲ್ಲಿ ದ್ವಿಚಕ್ರ ವಾಹನ ಕೊಡಿಸುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಇದೇ ಸಮಾರಂಭದಲ್ಲಿ ಘೋಷಣೆ ಮಾಡಿದ್ದಾರೆ.

ʻʻಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 32 ಜನ ವಿದ್ಯಾರ್ಥಿಗಳಿಗೆ ನನ್ನ ವೈಯಕ್ತಿಕ ಕರ್ಚಿನಲ್ಲಿ ದ್ವಿಚಕ್ರ ವಾಹನ ನೀಡುತ್ತೇನೆ. ಸ್ಥಳೀಯ ಏಜನ್ಸಿಗಳ ಮೂಲಕ ಅರ್ಹ ವಿದ್ಯಾರ್ಥಿಗಳ ಮನೆಗಳಿಗೆ ವಾಹನ ತಲುಪಿಸುತ್ತೇವೆʼʼ ಎಂದು ಭರವಸೆ ನೀಡಿದರು.

ಬಿಜೆಪಿಗೆ ಇಶ್ಯೂ ಇಲ್ಲ, ಹಗರಣ ಆರೋಪ ಮಾಡುತ್ತಾರೆ

ʻʻಯಾವ ಹಗರಣವೂ ಇಲ್ಲ, ಬಿಜೆಪಿ ಅವರಿಗೆ ಇಶ್ಯೂ ಇಲ್ಲ. ಹೀಗಾಗಿ ಹಗರಣದ ಆರೋಪ ಮಾಡಿ ಇಶ್ಯೂ ಮಾಡುವುದಕ್ಕೆ ಹೊರಟ್ಟಿದ್ದಾರೆ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಪಾತ್ರ ಏನಿದೆ? ಯಾವುದೋ ದೇವರಾಜ್ ಕಡೆಯಿಂದ ಬಾಮೈದ ಕೊಂಡುಕೊಂಡಿದ್ದಾರೆ. ಬಾಮೈದ ಅವರ ಅಕ್ಕನಿಗೆ ಗಿಫ್ಟ್ ಮಾಡಿದ್ದಾರೆ. ಅವರದೇ ಸೈಟಿನಲ್ಲಿ ಮುಡಾ ಲೇಔಟ್ ಮಾಡಿದೆ. ಸಿದ್ದರಾಮಯ್ಯನವರು ಸೈಟ್ ಹಂಚಿಕೆ ಮಾಡಿದ್ದಾರಾ? ಮುಖ್ಯಮಂತ್ರಿ ಇರುವಾಗ ಕೊಟ್ಟಿದ್ದಾರಾ? ಬಿಜೆಪಿ ಸರ್ಕಾರ ಇರುವಾಗ ಕೊಟ್ಟಿದ್ದ ಸೈಟ್‌ಗಳು ಅವು, ಬಿಜೆಪಿ ಸರ್ಕಾರದಲ್ಲಿ ಕೊಟ್ಟಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೈಟ್ ಕೊಟ್ಟಿದ್ದಲ್ಲʼʼ ಎಂದು ಜಮೀರ್‌ ಸಿಎಂ ಅವರನ್ನು ಸಮರ್ಥಿಸಿಕೊಂಡರು.

ʻʻಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಯಾವತ್ತೂ ಸಿಎಂ ಆಗುವ ಅವಕಾಶ ಸಿಗಲ್ಲ ಎಂದು ಬಿಜೆಪಿಗೂ, ಕುಮಾರಸ್ವಾಮಿಗೂ ಗೊತ್ತು. ಏನೋ ಅವಕಾಶ ಸಿಕ್ಕಿದೆ, ಕೆಣಕಬೇಕು ಎಂದು ಕೆಣಕುತ್ತಿದ್ದಾರೆ. ʻಕಾಂಗ್ರೆಸ್‌ನವರು ಇದರಲ್ಲಿ ಯಾಕೆ ಕೈ ಜೋಡಿಸುತ್ತಾರೆ? ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ, ಅದೇ ನಡೆಯುವುದು, ನಾವು ಯಾರು ಏನು ಮಾಡಕ್ಕಾಗಲ್ಲʼʼ ಎಂದು ಹೇಳಿದರು.

Read More
Next Story