The Federal Exclusive | ಡಿಕೆಶಿಗೆ ಸಿಎಂ ಹುದ್ದೆ ಸಿಗುವುದು ಹಣೆಯಲ್ಲಿ ಬರೆದಿದೆಯೇ? ; ಸಂಚಲನ ಸೃಷ್ಟಿಸಿದ ವಿಧಾನಸಭೆ ಮುಖ್ಯ ಸಚೇತಕರ ಹೇಳಿಕೆ
x

The Federal Exclusive | ಡಿಕೆಶಿಗೆ ಸಿಎಂ ಹುದ್ದೆ ಸಿಗುವುದು ಹಣೆಯಲ್ಲಿ ಬರೆದಿದೆಯೇ? ; ಸಂಚಲನ ಸೃಷ್ಟಿಸಿದ ವಿಧಾನಸಭೆ ಮುಖ್ಯ ಸಚೇತಕರ ಹೇಳಿಕೆ

ಸಿಎಂ ಕುರ್ಚಿಯ ಬಗ್ಗೆ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಬೆನ್ನಲ್ಲೇ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು ಡಿಕೆಶಿಗೆ ಸಿಎಂ ಆಗುವ ಹಣೆಬರಹದ ಬಗ್ಗೆ ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.


ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತಕ್ಕೆ ದಾರಿ ಮಾಡಿಕೊಟ್ಟಿದ್ದ ʼಮುಖ್ಯಮಂತ್ರಿ ಬದಲಾವಣೆʼ ವಿಚಾರ ಮಹತ್ವದ ತಿರುವು ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲು ಡಿ.ಕೆ. ಸಹೋದರರ ಸಮ್ಮತಿಯೂ ಇದೆ ಎಂಬ ಸಿಎಂ ಆಪ್ತ ಶಾಸಕರೊಬ್ಬರ ಸ್ಫೋಟಕ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ.

ಕಳೆದ ಕೆಲ ದಿನಗಳವರೆಗೂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ʼಮುಖ್ಯಮಂತ್ರಿ ಬದಲಾವಣೆʼಗಾಗಿ ಪಟ್ಟು ಹಿಡಿದು ಹೋರಾಟ ನಡೆಸಿದ್ದರು. ಇದೇ ವಿಚಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಗುಂಪುಗಾರಿಕೆಗೂ ಕಾರಣವಾಗಿತ್ತು. ಹೈಕಮಾಂಡ್ ಅಂಗಳ ತಲುಪಿದ್ದ ʼಮುಖ್ಯಮಂತ್ರಿ ಬದಲಾವಣೆʼ ವಿಚಾರ ಅಂತಿಮವಾಗಿ ವರಿಷ್ಠರ ಮಧ್ಯಪ್ರವೇಶದಿಂದ ತಣ್ಣಗಾಗಿತ್ತು.

ಸಿಎಂ ಬದಲಾವಣೆ ಪ್ರಶ್ನೆಯಿಲ್ಲ?

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಮುಂದುವರೆಯಲು ಡಿ.ಕೆ.ಸಹೋದರರ ಬೆಂಬಲ ಇದೆ ಎಂದು ಹಿರಿಯ ಶಾಸಕ, ಸಿಎಂ ಆಪ್ತರಾಗಿರುವ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೀಡಿರುವ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ್ ಅವರು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಅವರನ್ನು ಎಲ್ಲಾ ಶಾಸಕರು 5 ವರ್ಷದ ಅವಧಿಗಾಗಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕೂಡ ಬೆಂಬಲಿಸಿದ್ದಾರೆ. ಎಲ್ಲ ಶಾಸಕರ ಸಮ್ಮತಿಯಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು 5 ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಡಿಕೆಶಿಗೆ ಸಿಎಂ ಆಗುವ ಹಣೆಬರಹ ಇದೆಯಾ?

ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು ಡಿ.ಕೆ.ಶಿವಕುಮಾರ್ ಮಾತ್ರ. ಅದಕ್ಕೆ ಹಣೆಬರಹದಲ್ಲಿ ಬರೆದಿರಬೇಕು. ಸಿಎಂ ಆಗಲು ಅನುಭವ, ಬುದ್ದಿವಂತಿಕೆ ಇರಬೇಕು. ಅದು ಸಿದ್ದರಾಮಯ್ಯ ಅವರಿಗಿದೆ. ಎಲ್ಲರಿಗೂ ಸಿಎಂ ಆಗುವ ಯೋಗ ಬರುವುದಿಲ್ಲ ಎಂದು ಅಶೋಕ್ ಪಟ್ಟಣ್ ಹೇಳಿದ್ದಾರೆ.

ಸಿಎಂ ಕುರ್ಚಿಯ ಬಗ್ಗೆ ರಾಜಕೀಯ ವಲಯ ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆಯ ಬೆನ್ನಲ್ಲೇ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೀಡಿರುವ ಈ ಹೇಳಿಕೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹಲವು ತಿಂಗಳಿಂದ ಸಿಎಂ ಬದಲಾವಣೆಯ ಹೇಳಿಕೆಗಳು ಕೇಳಿ ಬರುತ್ತಿದ್ದವು. ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ರಚನೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಒಳ ಒಪ್ಪಂದದ ಪ್ರಕಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಚರ್ಚೆ ನಡೆದಿತ್ತು ಎನ್ನಲಾಗಿದೆ.

ಗುಂಪುಗಾರಿಕೆ ಸೃಷ್ಟಿಸಿದ್ದ ಸಿಎಂ ಬದಲಾವಣೆ ವಿಚಾರ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಬದಲಾವಣೆ ದಾಳ ಉರುಳಿಸಿದ ಬಳಿಕ ಗುಂಪುಗಾರಿಕೆ ಆರಂಭವಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.

ಹೈಕಮಾಂಡ್ ಮಟ್ಟದಲ್ಲಿ ಸಿಎಂ ಬದಲಾವಣೆಗೆ ಲಾಬಿ ಆರಂಭಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಆಪ್ತ ಸಚಿವರು ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚೆಕ್‌-ಮೇಟ್‌ ನೀಡಿದ್ದರು. ಸರ್ಕಾರದ ಸಚಿವರ ನಡುವಿನ ಏಟು-ಎದಿರೇಟು ಹೈಕಮಾಂಡ್ ಅಂಗಳ ತಲುಪಿ, ಸಿಎಂ ಬದಲಾವಣೆ ಹಾಗೂ ನಾಯಕತ್ವದ ಬದಲಾವಣೆಗೆ ಚರ್ಚೆಗೆ ಬ್ರೇಕ್ ಹಾಕಿತ್ತು.

ಕಾಂಗ್ರೆಸ್ ನಲ್ಲಿ ʼನವೆಂಬರ್ ಗುಮ್ಮ

2025 ನವೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಲಿದೆ. ಆಗ ಅಧಿಕಾರ ಹಂಚಿಕೆಯ ಒಪ್ಪಂದ ಕುರಿತು ಚರ್ಚೆ ಮತ್ತೆ ಮುನ್ನಲೆಗೆ ಬರಲಿದ್ದು, ಯಾವೆಲ್ಲಾ ಆಯಾಮ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ನವೆಂಬರ್ ತಿಂಗಳಲ್ಲಿ ರಾಜ್ಯ ರಾಜಕಾರಣ ಮಹತ್ವದ ಬೆಳವಣಿಗೆಯಾಗಲಿದೆ ಎಂಬ ಮಾತುಗಳು ಕೌತುಕ ಮೂಡಿಸಿವೆ.

ಸಿಎಂ ಖುರ್ಚಿ ಗಟ್ಟಿ ಮಾಡುವ ತಂತ್ರ

ಮುಖ್ಯಮಂತ್ರಿ ಆಯ್ಕೆ ವೇಳೆ ಹೈಕಮಾಂಡ್ ಮಟ್ಟದಲ್ಲಿ ಯಾವ ಒಪ್ಪಂದವಾಗಿದೆ ಎಂಬ ವಿಚಾರ ಕೆಲವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಆ ವೇಳೆ ಒಪ್ಪಂದ ಆಗಿದೆಯೋ, ಇಲ್ಲವೋ ಅಥವಾ ಏನು ಚರ್ಚೆಯಾಗಿದೆ ಎಂಬುದು ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನಿ ಕಾರ್ಯದರ್ಶಿ ವೇಣುಗೋಪಾಲ್, ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಗೊತ್ತಿದೆ.

ಬಹಿರಂಗವಾಗಿ ಏನೂ ಹೇಳದಿದ್ದರೂ ಆಂತರಿಕವಾಗಿ ಅಲಿಖಿತ ಒಪ್ಪಂದ ಆಗಿದೆಯೋ, ಇಲ್ಲವೊ ಎಂಬುದು ಯಾರಿಗೂ ಖಚಿತವಾಗಿ ಗೊತ್ತಿಲ್ಲ. ಇದರ ಬೆನ್ನಲ್ಲೇ ನವೆಂಬರ್ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಸಿಎಂ ಸ್ಥಾನದ ಬಗ್ಗೆ ಗಟ್ಟಿ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯನ್ನಾಗಿಯೇ ಎಲ್ಲ ಶಾಸಕರು ಆಯ್ಕೆ ಮಾಡಿದ್ದೇವೆ. ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಹೇಳಿಕೆಗಳು ಕೇಳಿ ಬರುತ್ತಿವೆ.

ಸಿಎಂ ಬೆಂಬಲಿಗರ ಹೇಳಿಕೆ ಈಗ ಯಾಕೆ?

ನವೆಂಬರ್ ತಿಂಗಳಲ್ಲಿ ಸಿಎಂ ಸ್ಥಾನ ಬದಲಾವಣೆ ಆಗಲಿದೆ ಎಂಬ ಡಿಕೆಶಿ ಆಪ್ತ ಶಾಸಕರ ಹೇಳಿಕೆಗಳ ಬೆನ್ನಲ್ಲೇ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಲು ಸಿಎಂ ಸಿದ್ದರಾಮಯ್ಯ ಬಣದ ಆಪ್ತರು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಅದರ ಭಾಗವಾಗಿಯೇ ಇಂತಹ ಹೇಳಿಕೆಗಳು ಕೇಳಿ ಬರುತ್ತಿವೆ. ಈಗಿನಿಂದಲೇ ಸಿಎಂ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಯೋಜನೆ ರೂಪಿಸಿದ್ದಾರೆ. ಶಾಸಕರ ಬಲ, ಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ ಎಂಬುದನ್ನು ತೋರಿಸುವ ಸಲುವಾಗಿ ಹೈಕಮಾಂಡ್ ಗೆ ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More
Next Story