ಬೆಂಗಳೂರು ಟ್ರಾಫಿಕ್: ಲಂಡನ್‌-ದೆಹಲಿ ಹೋಲಿಸಿದ ಡಿಸಿಎಂ;  ರಸ್ತೆ ರಿಪೇರಿ ಮಾಡಿ ಸಾಕು ಎಂದ ನಾಗರಿಕರು!
x

ಬೆಂಗಳೂರು ಟ್ರಾಫಿಕ್: ಲಂಡನ್‌-ದೆಹಲಿ ಹೋಲಿಸಿದ ಡಿಸಿಎಂ; ರಸ್ತೆ ರಿಪೇರಿ ಮಾಡಿ ಸಾಕು ಎಂದ ನಾಗರಿಕರು!

ಬೆಂಗಳೂರಿನ ಸಂಚಾರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯು ಇನ್ನಷ್ಟು ಕಷ್ಟ ತಂದಿದೆ. ಶಾಲಾ ಸಮಯದಲ್ಲಿ ಪ್ರಯಾಣ ಅಸಾಧ್ಯ.


"ನಮ್ಮ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಸವಾಲು," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ಇದೀಗ ರಾಜಧಾನಿಯಾದ್ಯಂತ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಲಂಡನ್ ಮತ್ತು ದೆಹಲಿಯಂತಹ ಮಹಾನಗರಗಳ ಉದಾಹರಣೆ ನೀಡಿ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಜಾಗತಿಕ ವಿದ್ಯಮಾನ ಎಂದು ಸಮರ್ಥಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

"ಲಂಡನ್‌ನಲ್ಲಿ ಸಾರ್ವಜನಿಕ ಸಾರಿಗೆ ಬಳಸದಿದ್ದರೆ, ಜನ ಮೂರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಸಿಲುಕುತ್ತಾರೆ. ದೆಹಲಿಯಲ್ಲಿ ವಿಮಾನ ನಿಲ್ದಾಣದಿಂದ ಹೊರಬರಲು ಒಂದೂವರೆ ಗಂಟೆ ಬೇಕು. ಆದರೆ, ಎಲ್ಲರೂ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾತ್ರ ಮಾತನಾಡುತ್ತಾರೆ," ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಹೆಚ್ಚು ಗಮನ ಸೆಳೆಯಲು ಇಲ್ಲಿನ ಮಾಧ್ಯಮ ಸ್ವಾತಂತ್ರ್ಯವೂ ಒಂದು ಕಾರಣ ಎಂದು ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ನಾಗರಿಕರ ಆಕ್ರೋಶ: "ಹೋಲಿಕೆ ಬೇಡ, ಪರಿಹಾರ ಕೊಡಿ"

ಡಿಸಿಎಂ ಅವರ ಹೇಳಿಕೆಗೆ ಬೆಂಗಳೂರಿನ ನಾಗರಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಲಂಡನ್ ಅಥವಾ ದೆಹಲಿಯೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಲ್ಲಿನ ನಗರ ಯೋಜನೆಗೂ, ನಮ್ಮಲ್ಲಿನ ಅವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲು ನಮ್ಮ ರಸ್ತೆಗಳನ್ನು ಸರಿಪಡಿಸಿ, ನಂತರ ಬೇರೆ ನಗರಗಳ ಬಗ್ಗೆ ಮಾತನಾಡಿ," ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

"ದ ಫೆಡರಲ್ ಕರ್ನಾಟಕ" ದೊಂದಿಗೆ ಮಾತನಾಡಿದ ನಿವಾಸಿ ಶೆರೀಫ್, "ಬೆಂಗಳೂರಿನ ಸಂಚಾರ ಪರಿಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಜೆ.ಸಿ. ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ರಸ್ತೆಗುಂಡಿಗಳಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತವೆ. ಮೊದಲು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿ," ಎಂದು ಒತ್ತಾಯಿಸಿದರು.

ಸಮಸ್ಯೆಗೆ ಕಾರಣವೇನು?

ಬೆಂಗಳೂರಿನ ಆಹ್ಲಾದಕರ ವಾತಾವರಣವು ದೇಶದ ನಾನಾ ಭಾಗಗಳಿಂದ ಜನರನ್ನು ಆಕರ್ಷಿಸುತ್ತಿದೆ. ಇದರಿಂದ ಜನಸಂಖ್ಯೆ ಹೆಚ್ಚಾಗಿ, ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡ ಉಂಟಾಗಿದೆ. "ಬೆಂಗಳೂರಿನಲ್ಲಿ ಹವಾಮಾನವೊಂದೇ ಆಕರ್ಷಕ, ಉಳಿದಂತೆ ಎಲ್ಲವೂ ಸಮಸ್ಯೆ," ಎಂದು ಶೆರೀಫ್ ಬೇಸರ ವ್ಯಕ್ತಪಡಿಸಿದರು.

ಪರಿಹಾರದ ದಾರಿಗಳು: ನಾಗರಿಕರ ಸಲಹೆ

ಸಂಚಾರ ದಟ್ಟಣೆಯ ಈ ದಳ್ಳುರಿಯಿಂದ ಪಾರಾಗಲು ನಾಗರಿಕರು ಕೆಲವು ಪರಿಹಾರ ಮಾರ್ಗಗಳನ್ನು ಸೂಚಿಸಿದ್ದಾರೆ: ಮೆಟ್ರೋ ಮತ್ತು ಬಸ್ ಸೇವೆ: "ನಾನು ಹೆಚ್ಚಾಗಿ ಮೆಟ್ರೋ ಬಳಸುತ್ತೇನೆ, ಅದು ಸಮಯ ಉಳಿಸುತ್ತದೆ. ಜಿಗಣಿಯವರೆಗೂ ಮೆಟ್ರೋ ಸಂಪರ್ಕ ಕಲ್ಪಿಸಿರುವುದು ಸಾವಿರಾರು ಜನರಿಗೆ ವರದಾನವಾಗಿದೆ. ಬಸ್ ಸೇವೆಗಳೂ ಉತ್ತಮವಾಗಿವೆ," ಎನ್ನುತ್ತಾರೆ ಅಮನ್ ತಿವಾರಿ.

"ಹಿಂದೆ ಇದ್ದ 'ಬಸ್‌ವೇ' ಯೋಜನೆಯನ್ನು ಪುನಃ ಜಾರಿಗೆ ತರಬೇಕು. ಬಸ್‌ಗಳಿಗೆ ಪ್ರತ್ಯೇಕ ಮಾರ್ಗವಿದ್ದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಗೊಳ್ಳುತ್ತದೆ ಮತ್ತು ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುತ್ತದೆ," ಎಂದು ಖಾಸಗಿ ಉದ್ಯೋಗಿ ಬಾಲಾಜಿ ಅಭಿಪ್ರಾಯಪಟ್ಟರು.

ಒಟ್ಟಿನಲ್ಲಿ, ಲಂಡನ್-ದೆಹಲಿ ಹೋಲಿಕೆಯ ಚರ್ಚೆಗಳಿಗಿಂತ, ಬೆಂಗಳೂರಿನ ವಾಸ್ತವ ಸಮಸ್ಯೆಗಳಾದ ರಸ್ತೆಗುಂಡಿಗಳು, ಅಪೂರ್ಣ ಕಾಮಗಾರಿಗಳು ಮತ್ತು ಸಾರ್ವಜನಿಕ ಸಾರಿಗೆಯ ಕೊರತೆಯ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕು ಎಂಬುದು ಬೆಂಗಳೂರಿಗರ ಒಕ್ಕೊರಲ ಆಗ್ರಹವಾಗಿದೆ. ಉತ್ತಮ ರಸ್ತೆ, ಸುಧಾರಿತ ಬಸ್ ಮಾರ್ಗಗಳು ಮತ್ತು ಪರಿಣಾಮಕಾರಿ ಸಂಚಾರ ನಿಯಂತ್ರಣ ಕ್ರಮಗಳೇ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಬಲ್ಲವು.

Read More
Next Story