
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ (ಎಐ ಆಧಾರಿತ ಚಿತ್ರ)
ಗದ್ದುಗೆ ಗುದ್ದಾಟ|ಸಿಎಂ ಮನವೊಲಿಕೆ: ಡಿಕೆಶಿ 'ಡಬಲ್ ಆಫರ್'? ನಿಷ್ಠೆ ಬದಲಿಸದ ಸಾಹುಕಾರ್!
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದ ದಿನದಿಂದಲೂ ಅಧಿಕಾರದಲ್ಲಿದ್ದಾರೆ. ಕಾಂಗ್ರೆಸ್ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರೇ ನಮ್ಮ ನಾಯಕರು. ಅವರ ಮಾರ್ಗದರ್ಶನದಲ್ಲೇ ಸರ್ಕಾರ ನಡೆಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ಚದುರಂಗ ಆಟ ನಿರ್ಣಾಯಕ ಹಂತ ತಲುಪಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಅವರ ಆಪ್ತವಲಯದ ಪ್ರಭಾವಿ ನಾಯಕ, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ 'ಬಂಪರ್ ಆಫರ್' ನೀಡುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಆದರೆ, ಈ ರಹಸ್ಯ ಸಂಧಾನಕ್ಕೆ ಸತೀಶ್ ಜಾರಕಿಹೊಳಿ ಮಣಿದಿಲ್ಲ ಎಂಬುದು ತಿಳಿದುಬಂದಿದ್ದು, "ಸಿದ್ದರಾಮಯ್ಯ ಅವರನ್ನು ಇಳಿಸಲು ನಾನು ಹೋಗುವುದಿಲ್ಲ," ಎಂದು ಸ್ಪಷ್ಟಪಡಿಸುವ ಮೂಲಕ ಡಿಕೆಶಿ ತಂತ್ರಕ್ಕೆ ತಣ್ಣೀರೆರಚಿದ್ದಾರೆ.
ಡಿಕೆಶಿ ತಂತ್ರ: 'ಒನ್ ಟು ಒನ್' ಡೀಲ್?
ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಡಿಕೆಶಿ ಅವರು ಸತೀಶ್ ಜಾರಕಿಹೊಳಿ ಮುಂದೆ ನೇರ ಪ್ರಸ್ತಾಪವೊಂದನ್ನು ಇಟ್ಟಿದ್ದಾರೆ. "ಸಿದ್ದರಾಮಯ್ಯ ಈಗಾಗಲೇ ಎರಡೂವರೆ ವರ್ಷ ಅಧಿಕಾರ ನಡೆಸಿದ್ದಾರೆ. ಪಕ್ಷ ಅವರಿಗೆ ಎಲ್ಲವನ್ನೂ ನೀಡಿದೆ. ಈಗ ಅವರು ಸ್ವಯಂಪ್ರೇರಿತವಾಗಿ ಕೆಳಗಿಳಿಯುವಂತೆ ನೀವು ಅವರ ಮನವೊಲಿಸಬೇಕು," ಎಂದು ಡಿಕೆಶಿ ಕೋರಿದ್ದಾರೆ ಎನ್ನಲಾಗಿದೆ.
ಈ ಕೆಲಸ ಮಾಡಿಕೊಟ್ಟರೆ, ತಾನು ಸಿಎಂ ಆದ ಬಳಿಕ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಪಟ್ಟದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ನೀಡುವುದಾಗಿ ಡಿಕೆಶಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
"ನನ್ನ ನಂತರ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮದೇ. ಸದ್ಯಕ್ಕೆ ನನ್ನ ಹಾದಿ ಸುಗಮಗೊಳಿಸಿ," ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸತೀಶ್ ಜಾರಕಿಹೊಳಿ 'ನಕಾರ': ಸಿದ್ದರಾಮಯ್ಯ ಪರ ಗಟ್ಟಿ ನಿಲುವು
ಡಿಕೆಶಿಯವರ ಈ ಆಕರ್ಷಕ ಆಫರ್‌ಗಳಿಗೆ ಸತೀಶ್ ಜಾರಕಿಹೊಳಿ ಒಪ್ಪಿಲ್ಲ ಎನ್ನಲಾಗಿದೆ. ಸಿದ್ದರಾಮಯ್ಯ ಪರವಾಗಿಯೇ ದೃಢ ನಿಲುವು ತಳೆದಿರುವುದು ಕುತೂಹಲ ಮೂಡಿಸಿದೆ. "ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಂದು ಹೇಳಲು ನಾನು ಸಿದ್ಧನಿಲ್ಲ. ಅಂತಹ ದೊಡ್ಡ ನಿರ್ಧಾರಕ್ಕೆ ಕೈಹಾಕುವಷ್ಟು ನಾನು ದೊಡ್ಡವನಲ್ಲ. ಅವರೇನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವೆಲ್ಲ ಬದ್ಧ," ಎಂದು ಸತೀಶ್ ಜಾರಕಿಹೊಳಿ ಉತ್ತರ ನೀಡಿದ್ದಾರೆ.
"ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ. ನಾವಾಗಿಯೇ ಯಾರನ್ನೂ ಇಳಿಸುವುದಿಲ್ಲ, ಏರಿಸುವುದಿಲ್ಲ. ದೆಹಲಿಯಲ್ಲಿ ನಡೆದಿದೆ ಎನ್ನಲಾದ ಒಪ್ಪಂದಗಳ ಬಗ್ಗೆ ನಮಗೆ ಮಾಹಿತಿಯಿಲ್ಲ," ಎಂದು ಜಾರಿಕೊಳ್ಳುವ ಮೂಲಕ ಡಿಕೆಶಿ ಪ್ರಸ್ತಾಪವನ್ನು ಸೌಜನ್ಯದಿಂದಲೇ ತಿರಸ್ಕರಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ತಮಗೆ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ಬಂದರೂ, ಸತೀಶ್ ಅವರು ಅದಕ್ಕೆ ನಕ್ಕು ಸುಮ್ಮನಾಗುವ ಮೂಲಕ, ಸದ್ಯಕ್ಕೆ ತಾನು ಸಿದ್ದರಾಮಯ್ಯ ಕ್ಯಾಂಪ್ ಬಿಟ್ಟು ಬರುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ರಾಜಕೀಯ ಲೆಕ್ಕಾಚಾರ ತಲೆಕೆಳಗಾಯ್ತೆ?
ಸತೀಶ್ ಜಾರಕಿಹೊಳಿ ಅವರನ್ನು ಸೆಳೆಯುವ ಮೂಲಕ ಸಿದ್ದರಾಮಯ್ಯ ಅವರ ಆಪ್ತವಲಯವನ್ನು ಒಡೆಯುವ ಡಿಕೆಶಿ ತಂತ್ರ ಸದ್ಯಕ್ಕೆ ಫಲಿಸಿದಂತಿಲ್ಲ. ಸತೀಶ್ ಜಾರಕಿಹೊಳಿ ಅವರ ಈ ನಡೆ, ಅಹಿಂದ ನಾಯಕರ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದಂತಿದೆ. "ನಾವು ಸಿದ್ದರಾಮಯ್ಯ ಪರವಾಗಿಯೇ ಇರುತ್ತೇವೆ," ಎಂದು ಸತೀಶ್ ಬಹಿರಂಗವಾಗಿ ಹೇಳಿರುವುದು, ಡಿಕೆಶಿ ಅವರ ಸಿಎಂ ಕನಸಿಗೆ ಹೊಸ ಅಡಚಣೆಯಾಗಿ ಪರಿಣಮಿಸಿದೆ.

