Isha Foundation | ಜಗ್ಗಿ ವಾಸುದೇವ್‌ ಜೊತೆ ಕೆಪಿಸಿಸಿ ಅಧ್ಯಕ್ಷರು: ಡಿ ಕೆ ಶಿವಕುಮಾರ್‌ ನಡೆಗೆ ಟೀಕೆ ಯಾಕೆ?
x
ಸದ್ಗುರು ಜೊತೆ ಡಿ.ಕೆ.ಶಿವಕುಮಾರ್‌

Isha Foundation | ಜಗ್ಗಿ ವಾಸುದೇವ್‌ ಜೊತೆ ಕೆಪಿಸಿಸಿ ಅಧ್ಯಕ್ಷರು: ಡಿ ಕೆ ಶಿವಕುಮಾರ್‌ ನಡೆಗೆ ಟೀಕೆ ಯಾಕೆ?

ಕರ್ನಾಟಕದಲ್ಲೂ ಸೇರಿದಂತೆ ಕೆಲವು ವಿವಾದಗಳಲ್ಲಿ ಆರೋಪ ಎದುರಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರೊಂದಿಗೆ ಡಿಸಿಎಂ ವೇದಿಕೆ ಹಂಚಿಕೊಂಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.


ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಶಿವರಾತ್ರಿ ಜಾಗರಣೆಯಲ್ಲಿ ಭಾಗಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಗೆ ತೀವ್ರ ಆಕ್ಷೇಪ ಕೇಳಿ ಬಂದಿದೆ.

ವಿವಾದಗಳನ್ನು ಎದುರಿಸುತ್ತಿರುವ ಸದ್ಗುರು ಅವರೊಂದಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್‌ ಅವರು ಭಾಗಿಯಾಗಿರುವುದು ಕೆಟ್ಟ ಸಂದೇಶ ರವಾನಿಸಿದೆ ಎಂದು ರಾಜ್ಯದ ಪ್ರಜ್ಞಾವಂತ ವಲಯ ಆತಂಕ ವ್ಯಕ್ತಪಡಿಸಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶಾ ಫೌಂಡೇಷನ್ ಯೋಗ ಕೇಂದ್ರದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಜಾಗರಣೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಹೈಕಮಾಂಡ್ ಹಾಗೂ ದೇಶದ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದರು. ಶಿವರಾತ್ರಿ ಜಾಗರಣೆಯಲ್ಲಿ ಭಾಗಿಯಾಗಿದ್ದನ್ನು ಡಿ.ಕೆ.ಶಿವಕುಮಾರ್‌ ಅವರು ಸಮರ್ಥಿಸಿಕೊಂಡಿದ್ದರು.

ಆದರೆ, ಒಂದು ಕಡೆ ರಾಜ್ಯದ ಆಡಳಿತ ಪಕ್ಷದ ಅಧ್ಯಕ್ಷರೂ ಮತ್ತು ಉಪ ಮುಖ್ಯಮಂತ್ರಿ ಹಾಗೂ ಮತ್ತೊಂದು ಕಡೆ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತರಿಪಡಿಸುವ ಗುರುತರ ಹೊಣೆಗಾರಿಕೆ ಹೊತ್ತಿರುವ ಕೇಂದ್ರ ಗೃಹ ಸಚಿವರು ವಿವಾದಿತ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ವಿವಾದಗಳಲ್ಲಿ ಈಶಾ ಫೌಂಡೇಷನ್‌

ಸದ್ಗುರು ಜಗ್ಗಿ ವಾಸುದೇವ್ ಹಾಗೂ ಈಶಾ ಫೌಂಡೇಷನ್ ವಿರುದ್ಧ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಪ್ರೊ.ಕಾಮರಾಜ್ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ದೂರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು. ಆಶ್ರಮದಲ್ಲಿ ತಂಗಿರುವವರ ವಿಚಾರಣೆಗಾಗಿ ತಮಿಳುನಾಡಿನ 150 ಪೊಲೀಸರು 2024 ಅ.3 ರಂದು ದಾಳಿ ನಡೆಸಿ ಶೋಧ ನಡೆಸಿದ್ದರು. ಆ ಬಳಿಕ ಹೆಬಿಯಸ್‌ ಕಾರ್ಪಸ್‌ ಅರ್ಜಿ ಸುಪ್ರೀಂಕೋರ್ಟ್‌ಗೆ ವರ್ಗಾವಣೆಯಾಗಿ ವಜಾಗೊಂಡಿತ್ತು. ಇನ್ನು ಯೋಗ ಕೇಂದ್ರದ ವೈದ್ಯನೊಬ್ಬನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ಸಹ ದಾಖಲಾಗಿತ್ತು.

ವೆಳ್ಳಿಯಂಗಿರಿ ಬೆಟ್ಟದ ತಪ್ಪಲಿನಲ್ಲಿರುವ ಈಶಾ ಫೌಂಡೇಷನ್, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಕಟ್ಟಡಗಳನ್ನು ನಿರ್ಮಿಸಿದೆ. ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿ ಉಂಟು ಮಾಡಿದೆ ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಕೇಳಿದೆ.

ತಮಿಳುನಾಡು ಸರ್ಕಾರ 1991ರಲ್ಲಿ ಜಾರಿಗೆ ತಂದಿದ್ದ ಗುಡ್ಡ ಪ್ರದೇಶ ಸಂರಕ್ಷಣಾ ಪ್ರಾಧಿಕಾರದಡಿ ಅಧಿಸೂಚಿಸಲಾಗಿದ್ದ ಗ್ರಾಮದಲ್ಲಿ ಪೂರ್ವಾನುಮತಿ ಇಲ್ಲದೇ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿದ್ದ ಸಂಗತಿ 2012ರಲ್ಲಿ ಕಂಡು ಬಂದಿತ್ತು. ಇದು ಕೂಡ ನ್ಯಾಯಾಲಯದಲ್ಲಿದೆ.

ಚಿಕ್ಕಬಳ್ಳಾಪುರದಲ್ಲಿ ಭೂ ಒತ್ತುವರಿ ಆರೋಪ

ಕೊಯಮತ್ತೂರಿನಲ್ಲಿ ಈಶಾ ಫೌಂಡೇಷನ್ ವಿರುದ್ಧ ಸ್ಥಳೀಯರು ಹಾಗೂ ಸರ್ಕಾರದ ವಿರೋಧ ಹೆಚ್ಚಾಗುತ್ತಿದ್ದಂತೆ ಸದ್ಗುರು ಜಗ್ಗಿ ವಾಸುದೇವ್ ಅವರು ಚಿಕ್ಕಬಳ್ಳಾಪುರದಲ್ಲಿ ನೂರಾರು ಎಕರೆ ಜಾಗ ಪಡೆದು, ಆದಿಯೋಗಿ ಪ್ರತಿಮೆ ನಿರ್ಮಿಸಿದ್ದಾರೆ.

ಸರ್ಕಾರದಿಂದ ಪಡೆದಿರುವ ಜಾಗದ ಜೊತೆಗೆ ಸಾಕಷ್ಟು ಅರಣ್ಯ ಹಾಗೂ ಗೋಮಾಳ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಈಶಾ ಪೌಂಡೇಷನ್ ಮೇಲೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾನೂನು ಉಲ್ಲಂಘಿಸಿ ಈಶಾ ಫೌಂಡೇಷನ್ ನಿರ್ಮಿಸಲಾಗಿದೆ ಎಂದು ಚಿಕ್ಕಬಳಾಪುರದ ಚಂಬಳ್ಳಿಯ ಎಸ್. ಕ್ಯಾತಪ್ಪ ಹಾಗೂ ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ನಂದಿ ಗಿರಿಧಾಮದ ಸೇರಿದಂತೆ ನರಸಿಂಹ ದೇವರ ಬೆಟ್ಟದ ಸಾಲುಗಳು ನೀರಿನ ಮೂಲಗಳಾಗಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಇಂತಹ ಸಾಲು ಬೆಟ್ಟಗಳ ಮಧ್ಯೆ ಈಶಾ ಪ್ರತಿಷ್ಠಾನವು ಆದಿಯೋಗಿ ಪ್ರತಿಮೆಯನ್ನು ನಿರ್ಮಿಸಲು ಅರಣ್ಯ ಸೇರಿದಂತೆ ಇತರೆ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ, ವಿಚಾರಣೆ ವೇಳೆ ಪಿಐಎಲ್‌ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಇಷ್ಟೆಲ್ಲಾ ಗಂಭೀರ ಕ್ರಿಮಿನಲ್ ಪ್ರಕರಣಗಳಿದ್ದರೂ ಸರ್ಕಾರದ ಉಪ ಮುಖ್ಯಮಂತ್ರಿ ಎನಿಸಿಕೊಂಡವರು ವಿವಾದಿತ ಸ್ವಯಂ ಘೋಷಿತ ದೇವಮಾನವನ ಜೊತೆ ವೇದಿಕೆ ಹಂಚಿಕೊಂಡಿರುವುದು ಅಕ್ಷಮ್ಯ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಈಶಾ ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ

ಈಶಾ ಪೌಂಡೇಷನ್ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಈಶಾ ಹೋಮ್ ಸ್ಕೂಲ್‌ನ ಮಾಜಿ ಅಧ್ಯಾಪಕಿ ಮತ್ತವರ ಪತಿ ಹೈದರಾಬಾದ್‌ನಲ್ಲಿ ಆರೋಪಿಸಿದ್ದರು.

ಈಶಾ ಶಾಲೆಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದರು.

ಈಶಾ ಆಶ್ರಮದಿಂದ ಮಹಿಳೆ ನಾಪತ್ತೆ, ಶವವಾಗಿ ಪತ್ತೆ

ಅಲ್ಲದೆ, ಈಶಾ ಆಶ್ರಮಗಳಿಂದ ವ್ಯಕ್ತಿಗಳು ಏಕಾಏಕಿ ಕಣ್ಮರೆಯಾಗುತ್ತಿರುವ ಬಗ್ಗೆ ಕೂಡ ತಮಿಳುನಾಡಿನಲ್ಲಿ ಹಲವು ದೂರುಗಳು ದಾಖಲಾಗಿದ್ದವು.

2022ರ ಡಿಸೆಂಬರಿನಲ್ಲಿ ಶುಭಶ್ರೀ ಎಂಬ ವಿವಾಹಿತ ಮಹಿಳೆ ಆಶ್ರಮದಿಂದ ಕಾಣೆಯಾಗಿದ್ದಾರೆ ಎಂದು ಆಕೆಯ ಪತಿ ಮಣಿಕುಮಾರ್‌ ಕೊಯಮತ್ತೂರು ಪೊಲೀಸರಿಗೆ ದೂರು ನೀಡಿದ್ದರು. ಮೌನ ಯೋಗ ಕೋರ್ಸಿಗಾಗಿ ಒಂದು ವಾರ ಈಶಾ ಆಶ್ರಮದಲ್ಲಿ ತಂಗಿದ್ದ ಆಕೆ ಒಂದು ದಿನ ಏಕಾಏಕಿ ಬೆಳಗಿನ ಜಾವ ಆತಂಕದಲ್ಲಿ ಓಡಿ ಹೊರಬಂದು ಅಂಗಡಿಯೊಬ್ಬನೊಂದಿಗೆ ಮೊಬೈಲ್‌ ಪಡೆದು ತನ್ನ ಪತಿಗೆ ಕರೆ ಮಾಡಿದ್ದರು. ಆದರೆ, ಆ ವೇಳೆ ಪತಿ ಕರೆ ಸ್ವೀಕರಿಸದೇ ಇದ್ದಿದ್ದರಿಂದ ಆಕೆ ಓಡಿ ಅಲ್ಲಿಂದ ಬೇರೊಂದು ಕಡೆಗೆ ಹೋಗಿದ್ದರು ಎಂದು ಅಂಗಡಿಯಾತ ಹೇಳಿದ್ದ.

ಡಿಸೆಂಬರ್‌ 18ರಂದು ಕಾಣೆಯಾಗಿದ್ದ ಶುಭಶ್ರೀ ಮೃತ ದೇಹ, 2023ರ ಜನವರಿ 1ರಂದು ಆಶ್ರಮದಿಂದ ಐದು ಕಿ.ಮೀ ದೂರದ ಹಳ್ಳಿಯೊಂದರ ಬಾವಿಯಲ್ಲಿ ಪತ್ತೆಯಾಗಿತ್ತು.

ಹೀಗೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯೊಬ್ಬರೊಂದಿಗೆ ರಾಜಕೀಯ ನಾಯಕರು ಸಾರ್ವಜನಿಕವಾಗಿ ವೇದಿಕೆ ಹಂಚಿಕೊಳ್ಳುವುದು ನಾಗರಿಕ ಸಮಾಜಕ್ಕೆ ನೀಡುವ ಸಂದೇಶವೇನು? ಎಂಬ ಸಂಗತಿ ಕೊಯಮತ್ತೂರಿನ ಶಿವರಾತ್ರಿ ಜಾಗರಣೆಯಲ್ಲಿ ಅಮಿತ್‌ ಶಾ ಮತ್ತು ಡಿ ಕೆ ಶಿವಕುಮಾರ್‌ ಭಾಗಿಯಾದ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read More
Next Story