
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್
ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ್ದು ಕ್ರಾಂತಿ ಮುನ್ಸೂಚನೆಯೆ: ಆರ್. ಅಶೋಕ್ ಪ್ರಶ್ನೆ
ದೇಶ, ವಿದೇಶಗಳಲ್ಲಿ ನಡೆದ ಕಾಲ್ತುಳಿತದ ಸಿಎಂ ಸಿದ್ದರಾಮಯ್ಯನವರು ಸದನದಲ್ಲಿ ಹೇಳಿದರು. ಆದರೆ ಆರ್‌ಸಿಬಿ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತಕ್ಕೆ ಕಾರಣ ಹೇಳಲಿಲ್ಲ ಎಂದು ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
"ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆಯನ್ನು ಹಾಡಿರುವುದು ಕಾಂಗ್ರೆಸ್ ಪಕ್ಷದೊಳಗಿನ ಕ್ರಾಂತಿಯ ಮುನ್ಸೂಚನೆಯೇ?" ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶುಕ್ರವಾರ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ತಮಗೆ ತಿಳಿದಿಲ್ಲವಾದರೂ, ಡಿ.ಕೆ. ಶಿವಕುಮಾರ್ ಅವರ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
"ನಮಸ್ತೆ ಸದಾ ವತ್ಸಲೇ" ಎಂದ ಡಿಕೆಶಿ
ಗುರುವಾರ (ಆಗಸ್ಟ್ 21) ನಡೆದ ವಿಧಾನಸಭೆ ಅಧಿವೇಶನದ ಘಟನೆಯನ್ನು ಸ್ಮರಿಸಿದ ಆರ್. ಅಶೋಕ್, "ನಾನು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ವಾದ ನಡೆಸುತ್ತಿದ್ದೆವು. ಆ ಸಂದರ್ಭದಲ್ಲಿ ನಾನು 'ನೀನು ಚಡ್ಡಿ ಹಾಕಿದ್ದೆಲ್ಲಪ್ಪ' ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ ಅವರು ಆರ್‌ಎಸ್‌ಎಸ್ 'ನಮಸ್ತೆ ಸದಾ ವತ್ಸಲೇ' ಗೀತೆಯನ್ನೇ ಹಾಡಿದರು. ಇದು ಏನನ್ನು ಸೂಚಿಸುತ್ತದೆ?" ಎಂದು ಪ್ರಶ್ನಿಸಿದರು.
ಆರ್‌ಸಿಬಿ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಕಾಲ್ತುಳಿತ ದುರಂತದ ಬಗ್ಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶ-ವಿದೇಶಗಳಲ್ಲಿ ನಡೆದ ಕಾಲ್ತುಳಿತಗಳ ಬಗ್ಗೆ ಉದಾಹರಣೆ ಕೊಟ್ಟರಷ್ಟೇ ವಿನಃ, ನಮ್ಮಲ್ಲಿ ನಡೆದ ದುರಂತಕ್ಕೆ ಕಾರಣವೇನು ಎಂದು ಹೇಳಲಿಲ್ಲ. ಕಾರ್ಯಕ್ರಮಕ್ಕೆ ಭದ್ರತೆ (ಬಂದೋಬಸ್ತ್) ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಲಿಖಿತವಾಗಿ ಪತ್ರ ನೀಡಿದ್ದರೂ, ಸರ್ಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಈ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದ ವಿರುದ್ಧ ಕಮ್ಯುನಿಸ್ಟರ ಕುತಂತ್ರ
ಧರ್ಮಸ್ಥಳದ ವಿಚಾರವಾಗಿ ಮಾತನಾಡಿದ ಅಶೋಕ್, "ಕಮ್ಯುನಿಸ್ಟ್ಗಳಿಗೆ ಈ ದೇಶದ ಬಗ್ಗೆ ನಿಷ್ಠೆ ಕಡಿಮೆ. ಅವರೆಲ್ಲರೂ ಸೇರಿಕೊಂಡು ಧರ್ಮಸ್ಥಳದ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇವರಿಗೆಲ್ಲ ನಾಯಕ. ಸಿಎಂ ಮನೆಯಲ್ಲಿ ಸಭೆ ನಡೆಸಿ, ಎಸ್ಐಟಿ ತನಿಖೆಗೆ ಸೂಚನೆ ನೀಡಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿಯವರನ್ನು ನೇಮಕ ಮಾಡಿದ್ದೂ ಎಡಪಂಥೀಯರೇ. ರಾಜ್ಯದ ಹಿಂದೂ ದೇವಾಲಯಗಳಿಗೆ ಏನಾದರೂ ತೊಂದರೆಯಾದರೆ ನಾವು ಸುಮ್ಮನಿರುವುದಿಲ್ಲ, ಹೋರಾಟ ಮಾಡುತ್ತೇವೆ," ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಲಿ
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಹಾಗಿದ್ದರೆ, ಚುನಾವಣಾ ಅಕ್ರಮದ ಮೂಲಕವೇ ಗೆದ್ದಿರುವ ಅವರ ಪಕ್ಷದ ಸಂಸದರೆಲ್ಲರೂ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆದರೆ, ಯಾರೊಬ್ಬರೂ ರಾಜೀನಾಮೆ ನೀಡಲು ಸಿದ್ಧರಿಲ್ಲ," ಎಂದು ಟೀಕಿಸಿದರು.