
ಡಿಕೆಶಿಯದ್ದು ʼಉತ್ತರನ ಪೌರುಷ ಒಲೆಯ ಮುಂದೆʼ ಎಂಬಂತೆ; ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು
ʼಉತ್ತರನ ಪೌರುಷ ಒಲೆಯ ಮುಂದೆʼ ಎಂಬಂತೆ ಡಿ.ಕೆ. ಶಿವಕುಮಾರ್ ಅವರ ಪೌರುಷ ಕೇವಲ ಮಾಧ್ಯಮಗಳ ಮುಂದಷ್ಟೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸಭೆ ಮಾಡಲು ಬಿಡುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ʼಉತ್ತರನ ಪೌರುಷ ಒಲೆಯ ಮುಂದೆʼ ಎಂಬಂತೆ ಡಿ.ಕೆ. ಶಿವಕುಮಾರ್ ಅವರ ಪೌರುಷ ಕೇವಲ ಮಾಧ್ಯಮಗಳ ಮುಂದಷ್ಟೇ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಕಪ್ಪುಬಾವುಟ ತೋರಿಸಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಇಲ್ಲವೇ ಪಕ್ಷದಿಂದ ಉಚ್ಚಾಟಿಸಿ ನೋಡೋಣ ಎಂದು ಸವಾಲಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಪ್ಪು ಬಾವುಟ ತೋರಿಸಿದ್ದರು. ಅಂತಹ ವ್ಯಕ್ತಿಯನ್ನು ಪಕ್ಷಕ್ಕೆ ಕರೆತಂದು ಎರಡೆರಡು ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ. ಇಂದಿರಾಗಾಂಧಿ ಅವರ ಋಣದಲ್ಲಿ ಅಧಿಕಾರ ಅನುಭವಿಸುತ್ತಿದ್ದೀರಿ. ಹೀಗಿರುವಾಗ ಬಿಜೆಪಿ ಪ್ರತಿಭಟನೆಗೆ ಧಮ್ಮಿ ಹಾಕುವ ನೈತಿಕತೆ ನಿಮಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧದ ಖಂಡನಾ ಸಮಾವೇಶದ ವೇಳೆ ಸಿಎಂ ಭಾಷಣಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯವರಿಗೆ ಕರ್ನಾಟಕದಲ್ಲಿ ಒಂದೇ ಒಂದು ಸಭೆ ಮಾಡಲು ಬಿಡಲ್ಲ. ಇದು ನಮ್ಮ ಪ್ರತಿಜ್ಞೆ ಎಂದು ಶಪಥ ಮಾಡಿದ್ದರು.
ಬಿಜೆಪಿ ನಾಯಕರು ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿದರೆ ಒಳ್ಳೆಯದು. ಇಂತಹ ಉಪಟಳ ಮುಂದುವರಿಸಿದರೆ ಒಂದೇ ಒಂದು ಸಭೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.