Channapatna By election | ಅಬ್ಬರದ ಪ್ರಚಾರದಲ್ಲಿ ಡಿಕೆಶಿ-ಎಚ್‌ಡಿಕೆ ವಾಕ್ಸಮರ
x

Channapatna By election | ಅಬ್ಬರದ ಪ್ರಚಾರದಲ್ಲಿ ಡಿಕೆಶಿ-ಎಚ್‌ಡಿಕೆ ವಾಕ್ಸಮರ

ಚನ್ನಪಟ್ಟಣದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯುದ್ಧ ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಮೂಲಕ ಅಧರ್ಮಕ್ಕೆ ಹೀನಾಯ ಸೋಲಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ರಂಗೇರಿದೆ. ಆಡಳಿತ ಪಕ್ಷ ಹಾಗೂ ಮೈತ್ರಿ ಪಕ್ಷಗಳ ಘಟಾನುಘಟಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಪರಸ್ಪರ ನಿಂದನೆಗಳಿಗೂ ವೇದಿಕೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಯಾವ ಅಭಿವೃದ್ಧಿ ಕೆಲಸಗಳ ಸಾಕ್ಷಿಗುಡ್ಡೆ ಹಾಕಿದ್ದಾರೆ. ಅವರು ಕ್ಷೇತ್ರ ಬಿಟ್ಟು ಹೋಗುವುದು ಒಳಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನಾನು ಮಾಡಿದ ಕೆಲಸಗಳ ಸಾಕ್ಷಿಗುಡ್ಡೆಗಳು ಕಣ್ಣಿಗೆ ಕಾಣುತ್ತಿವೆ, ನೀವು ಲೂಟಿ ಹೊಡೆದು ಕಳಿಸಿದ ಕಲ್ಲುಬಂಡೆಗಳ ಸಾಕ್ಷಿಗುಡ್ಡೆಗಳು ವಿದೇಶದಲ್ಲಿವೆ ಎಂದು ತಿರುಗೇಟು ನೀಡಿದರು.

ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಬಿಟ್ಟು ಹೋಗುವಂತೆ ಡಿಕೆಶಿ ಹೇಳುವುದಲ್ಲ, ಚನ್ನಪಟ್ಟಣದ ಜನರು ಹೇಳಬೇಕು. ಯಾರು ಹೊರಗೆ ಹೋಗಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದು ಕುಟುಕಿದರು.

ಸಾಕ್ಷಿಗುಡ್ಡೆಗಳ ಕುರಿತ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್‌ ಅವರಿಗೆ ಸಾಕ್ಷಿಗುಡ್ಡೆ ಅರ್ಥ ಗೊತ್ತಿದೆಯಾ? ಕಾನೂನೂಬಾಹಿರವಾಗಿ ಕಲ್ಲುಬಂಡೆಗಳನ್ನು ಲೂಟಿ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ, ಆ ಸಾಕ್ಷಿಗುಡ್ಡೆನಾ? ರಾಜ್ಯದ ಪ್ರಾಕೃತಿಕ ಸಂಪತ್ತು ಲೂಟಿ ಮಾಡಿದ ಸಾಕ್ಷಿಗುಡ್ಡೆನಾ ಎಂದು ವಾಗ್ದಾಳಿ ನಡೆಸಿದರು.

ಅಧರ್ಮಿ ಕಾಂಗ್ರೆಸ್ ಪಕ್ಷ; ಎಚ್ಡಿಕೆ ಕಿಡಿ

ಚನ್ನಪಟ್ಟಣದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯುದ್ಧ ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಮೂಲಕ ಅಧರ್ಮಕ್ಕೆ ಹೀನಾಯ ಸೋಲಾಗಲಿದೆ ಎಂದುಕುಮಾರಸ್ವಾಮಿ ಹೇಳಿದ್ದಾರೆ.

ಗೊಲ್ಲರದೊಡ್ಡಿ ಪ್ರಚಾರಸಭೆಯಲ್ಲಿ ಮಾತನಾಡಿ, ಅಧರ್ಮ ಹಾಗೂ ಧರ್ಮದ ನಡುವಿನ ಚುನಾವಣೆ ಇದಾಗಿದೆ. ಈ ಬಾರಿ ನಿಖಿಲ್ ಅಭಿಮನ್ಯುವಲ್ಲ. ಅರ್ಜುನನಾಗಿ ಯುದ್ಧ ಎದುರಿಸುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕೃಷ್ಣನಂತೆ ಸಾಥ್ ನೀಡಲಿದ್ದಾರೆ. ಅಧರ್ಮವನ್ನು ಹಿಮ್ಮೆಟ್ಟಿಸಲಿದ್ದಾರೆ ಎಂದು ಹೇಳಿದರು.

ಧ್ವಜದ ನೆರಳಲ್ಲಿ ಲೂಟಿ ಮಾಡಬಹುದೇ?

ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಒಂದು ದಿನವೂ ಧ್ವಜ ಹಾರಿಸಲಿಲ್ಲ ಎಂಬ ಹೇಳಿಕೆಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವರು, ಕ್ಷೇತ್ರದಲ್ಲಿ ಸುತ್ತಾಡಿ ನೋಡಿದರೆ ಯಾರು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿದೆ. ಚನ್ನಪಟ್ಟಣ ಮೂಲಸೌಕರ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವ ವಿಧಾನಸಭೆ ಕ್ಷೇತ್ರ. ಇದಕ್ಕೆ ಕಾರಣ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ. ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಿಲ್ಲ. ಬೆಂಗಳೂರಿಗೆ ಹೋಲಿಸಿದರೆ ಚನ್ನಪಟ್ಟಣದ ಹಳ್ಳಿಗಳ ರಸ್ತೆಗಳೇ ಚೆನ್ನಾಗಿವೆ ಎಂದು ಕುಟುಕಿದರು.

ಇಲ್ಲಿ ಬಾವುಟ ಹಾರಿಸುವುದು ಮುಖ್ಯ ಅಲ್ಲ. ಆದರೆ, ನಂಬಿ ಗೆಲ್ಲಿಸಿದ ಜನರ ಋಣ ತೀರಿಸುವುದು ಮುಖ್ಯ. ಇವರು ಬಂದು ಧ್ವಜ ಹಾರಿಸಿ ಭಾಷಣ ಮಾಡಿದರೆ ಜನರ ಹೊಟ್ಟೆ ತುಂಬುವುದಿಲ್ಲ. ಮೇಲ್ನೋಟಕ್ಕೆ ಧ್ವಜಾರೋಹಣ ಮಾಡಿ ಉಳಿದೆಲ್ಲವನ್ನೂ ಲೂಟಿ ಮಾಡಿದರೆ ಹೇಗೆ? ಅಂತಹ ಕೆಲಸವನ್ನು ನಾನು ಮಾಡಿಲ್ಲ. ಹೌದು, ನಾನು ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ಧ್ವಜಕ್ಕೆ ನನ್ನ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.

ವಕ್ಫ್ ವಿವಾದ ಕುರಿತು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ವಿವಾದವನ್ನು ಸರಿ ಮಾಡದಿದ್ದರೆ ರೈತರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಎಷ್ಟು ದಿನ ಜನರಿಗೆ ಹೀಗೆ ಮೋಸ ಮಾಡುತ್ತೀರಾ?, ಒಂದು ಸಮುದಾಯವನ್ನು ಚಿವುಟುತ್ತೀರಾ? ಮತ್ತೊಂದು ಸಮುದಾಯದ ತೊಟ್ಟಿಲು ತೂಗುತ್ತಿರಾ? ಜನರಲ್ಲಿ ಕ್ಷಮೆ ಕೇಳಿ ಸರಿ ಮಾಡಿಕೊಳ್ಳಿ. ಇಲ್ಲವಾದರೆ ಜನರೇ ನಿಮ್ಮ ಮನೆಗಳಿಗೆ ನುಗ್ಗುವ ಕಾಲ ದೂರವಿಲ್ಲ ಸಲಹೆ ನೀಡಿದರು.

ನಾನು ಸಿಎಂ ಆಗಿದ್ದ ಅವಧಿಯಲ್ಲಿ ನನ್ನ ಮುಂದೆ ಯಾವುದೇ ವಕ್ಫ್ ಕಡತ ಬಂದಿರಲಿಲ್ಲ. ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ಕಾಲದಲ್ಲೂ ವಕ್ಫ್ ತೀರ್ಮಾನ ಆಗಿದೆ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಬೇಜಬ್ದಾರಿತನದ್ದು ಎಂದು ಕಿಡಿಕಾರಿದರು.

Read More
Next Story