DKS Apology | If you want a seat in Congress, you should give up patriotism: R. Ashok
x

ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಡಿಕೆಶಿ ಕ್ಷಮೆ| ದೇಶಪ್ರೇಮ ಇಲ್ಲದವರಿಗೆ ಮಾತ್ರ ಕಾಂಗ್ರೆಸ್​​ನಲ್ಲಿ ಕುರ್ಚಿ; ಆರ್‌. ಅಶೋಕ್‌

"ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ ಸಮಾನಳಾದ ತಾಯಿ ಭಾರತಾಂಬೆಗೆ ನನ್ನ ನಮಸ್ಕಾರಗಳು" ಇದು ಆರ್‌ಎಸ್ಎಸ್ ಪ್ರಾರ್ಥನಾ ಗೀತೆಯ ಮೊದಲನೆಯ ಸಾಲಿನ ಸಾರಾಂಶ ಎಂದು ಆರ್‌.ಅಶೋಕ್‌ ತಿಳಿಸಿದ್ದಾರೆ.


ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡುವ ಮೂಲಕ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ನಂತರ ಇಂದು ಕ್ಷಮೆಯಾಚಿಸಿದ್ದರು. ಆದರೆ ಅವರು ಕ್ಷಮೆಯಾಚಿಸಿರುವುದಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಕ್ಷಮೆಯಾಚಿಸಿರುವುದು ಕುರಿತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, "ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ ಎಂದು ಪ್ರಶ್ನಿಸಿದ್ದಾರೆ.

ಮಾತೃಭೂಮಿಗೆ ನಮಸ್ಕಾರ ಮಾಡುವುದು ತಪ್ಪೇ?

"ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ ಸಮಾನಳಾದ ತಾಯಿ ಭಾರತಾಂಬೆಗೆ ನನ್ನ ನಮಸ್ಕಾರಗಳು" ಇದು ಆರ್‌ಎಸ್ಎಸ್ ಪ್ರಾರ್ಥನಾ ಗೀತೆಯ ಮೊದಲನೆಯ ಸಾಲಿನ ಸಾರಾಂಶ. ಜನ್ಮ ಕೊಟ್ಟ ಮಾತೃಭೂಮಿ ಬಗ್ಗೆ ಈ ಭಾವನೆ ಇಟ್ಟುಕೊಳ್ಳುವುದು ತಪ್ಪೇ? ನಮಸ್ಕಾರ ಮಾಡುವುದೇ ತಪ್ಪೇ ?" ಎಂದಿದ್ದಾರೆ.

ಡಿಕೆಶಿಗೆ ಕ್ಷಮೆ ಕೇಳಲು ಆದೇಶ ನೀಡಿದ್ದು ಯಾರು?

ವಿಧಾನಸೌಧದಲ್ಲಿ "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದವರನ್ನ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷ, ತಾಯಿ ಭಾರತಾಂಬೆಗೆ ನಮಸ್ಕರಿಸುವವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದನ್ನು ದೇಶದ್ರೋಹಿ ಮನಸ್ಥಿತಿ ಅನ್ನದೇ ಇನ್ನೇನನ್ನಲು ಸಾಧ್ಯ? ಇಷ್ಟಕ್ಕೂ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು? ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಾ? ಅಥವಾ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಾ? ಕೆ.ಸಿ.ವೇಣುಗೋಪಾಲ್, ಸುರ್ಜೆವಾಲಾ ಅವರಾ? ಅಥವಾ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಅವರು ಹೇಳಿದ್ದಕ್ಕೆ ಕ್ಷಮೆ ಕೇಳಿದ್ದಾರೆಯೇ ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ದೇಶಪ್ರೇಮ ಬಿಟ್ಟರೆ ಮಾತ್ರ ಕುರ್ಚಿ

"ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಭಿಮಾನ, ಧೈರ್ಯ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಕೇಳಲೇಬೇಕು ಎನ್ನುವ ಒತ್ತಡ ಇದ್ದಿದ್ದರೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿತ್ತು. ತನ್ನ ಮಾತೃಭೂಮಿಯನ್ನು ಪ್ರೀತಿಸದವನು ಏನನ್ನೂ ಪ್ರೀತಿಸಲಾರ. ಆದರೆ ಕಾಂಗ್ರೆಸ್‌ನಲ್ಲಿ ಕುರ್ಚಿಯ ಮೇಲೆ ಪ್ರೀತಿ ಇದ್ದರೆ ದೇಶಪ್ರೇಮವನ್ನು ಬಿಡಬೇಕು ಎನ್ನುವ ಪರಿಸ್ಥಿತಿ ಇದೆ. ಅಧಿಕಾರದ ಮೇಲಿನ ವ್ಯಾಮೋಹಕ್ಕೆ, ಜನ್ಮ ಕೊಟ್ಟ ಮಾತೃಭೂಮಿಯನ್ನೇ ಬಿಟ್ಟುಕೊಡುವ ನಾಯಕರು ನಾಡಿನ ಮುಖ್ಯಮಂತ್ರಿಗಳಾಗಲು ಹೊರಟಿರುವುದು ನಮ್ಮ ನಾಡಿನ ದೊಡ್ಡ ದುರಂತ" ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಉಚ್ಛಾಟನೆಗೆ ಹೆದರಿ ಡಿಕೆಶಿ ಕ್ಷಮೆಯಾಚನೆ: ಜೆಡಿಎಸ್‌

ಈ ಕುರಿತು ಜೆಡಿಎಸ್‌ ತನ್ನ ಅಧಿಕೃತ ʼಎಕ್ಸ್‌ʼ ಖಾತೆಯಲ್ಲಿ " ಡಿಸಿಎಂ ಡಿ.ಕೆ. ಶಿವಕುಮಾರ್‌ ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ್ದಾರೆ. ಸದನದಲ್ಲಿ ಹುಲಿಯಾಗಿರುವ ಅವರು, ಹೈಕಮಾಂಡ್‌ ಮುಂದೆ ಇಲಿಯಾಗಿದ್ದಾರೆ. ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿ ಇಟಲಿ ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು, ಉಚ್ಛಾಟನೆಯಿಂದ ಪಾರಾಗಲು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ನಾಯಕ ಸಮುದಾಯದ ಸಚಿವರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರಿಗೆ ಕ್ಷಮೆಕೇಳುವ ಒಂದು ಅವಕಾಶವನ್ನು ಸಹ ಹೈಕಮಾಂಡ್‌ ನೀಡಿರಲಿಲ್ಲ. ಹೈಕಮಾಂಡ್‌ನಲ್ಲಿ ದಲಿತರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯ" ಎಂದು ಪೋಸ್ಟ್‌ ಮಾಡಿದ್ದಾರೆ.

Read More
Next Story