
ರಾಜಕಾರಣದಲ್ಲಿ ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ: ಹೈಕಮಾಂಡ್‌ಗೆ ಡಿಕೆ ಸುರೇಶ್ ಪರೋಕ್ಷ ಎಚ್ಚರಿಕೆ
ಬಮೂಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಹಂಚಿಕೆ, ರಾಹುಲ್ ಗಾಂಧಿ ಭೇಟಿ ಮತ್ತು ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚೆಂಡು ಹೈಕಮಾಂಡ್ ಅಂಗಳದಲ್ಲಿರುವಾಗಲೇ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಹನೆಯ ಕಟ್ಟೆ ಒಡೆದಂತಿದೆ. "ರಾಜಕಾರಣದಲ್ಲಿ ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆ. ಇಲ್ಲಿ ಅಧಿಕಾರವೂ ಶಾಶ್ವತವಲ್ಲ, ನಾವು ತೋರುತ್ತಿರುವ ತಾಳ್ಮೆಯೂ ಶಾಶ್ವತವಲ್ಲ," ಎಂದು ಹೇಳುವ ಮೂಲಕ ಕಾಯುವಿಕೆಗೂ ಒಂದು ಮಿತಿ ಇದೆ ಎಂಬ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದ್ದಾರೆ.
ಬಮೂಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಹಂಚಿಕೆ, ರಾಹುಲ್ ಗಾಂಧಿ ಭೇಟಿ ಮತ್ತು ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅವರ ಮಾತುಗಳಲ್ಲಿ ಪಕ್ಷದ ಶಿಸ್ತಿನ ಪಾಲನೆಯ ಜೊತೆಗೆ, ದೀರ್ಘಕಾಲದ ಕಾಯುವಿಕೆಯ ಬೇಸರವೂ ಎದ್ದು ಕಾಣುತ್ತಿತ್ತು.
ಪಂಚಾಯಿತಿ ಚೇರ್ಮನ್ಗಳೇ ಸೀಟು ಬಿಡಲ್ಲ
ಸಿಎಂ ಸ್ಥಾನ ಬದಲಾವಣೆ ವಿಚಾರದಲ್ಲಿ ವಾಸ್ತವವನ್ನು ತೆರೆದಿಟ್ಟ ಸುರೇಶ್, "ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರುವುದಿಲ್ಲ. ಅದೊಂದು ಸುಲಭವಾಗಿ ಸಿಗುವ ಹುದ್ದೆಯೂ ಅಲ್ಲ. ಹಳ್ಳಿಗಳಲ್ಲಿ ಪಂಚಾಯಿತಿ ಚೇರ್ಮನ್ಗಳೇ ತಮ್ಮ ಸೀಟು ಬಿಟ್ಟುಕೊಡಲು ಒಪ್ಪುವುದಿಲ್ಲ, ಇನ್ನು ಸಿಎಂ ಸ್ಥಾನ ಬಿಡ್ತಾರಾ? ಇದೆಲ್ಲ ಅಷ್ಟು ಸರಳವಲ್ಲ. ನಮ್ಮ ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಅವರು ಸಿಎಂ ಆಗ್ತಾರೆ," ಎಂದು ಮಾರ್ಮಿಕವಾಗಿ ನುಡಿದರು.
ತಾಳ್ಮೆ ಪರೀಕ್ಷಿಸಬೇಡಿ: ಹೈಕಮಾಂಡ್‌ಗೆ ಸಂದೇಶ?
"ಡಿ.ಕೆ. ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಅವರು ವ್ಯಕ್ತಿಗೆ ನಿಷ್ಠರಲ್ಲ, ಪಕ್ಷಕ್ಕೆ ನಿಷ್ಠರು. ಪಕ್ಷದ ಆದೇಶಕ್ಕೋಸ್ಕರ, ಶಾಸಕರ ಮತ್ತು ನೊಂದ ಕಾರ್ಯಕರ್ತರ ಹಿತದೃಷ್ಟಿಯಿಂದ ಡಿಕೆಶಿ ಅವರು ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ಕಾಯುತ್ತಿದ್ದಾರೆ. ಆದರೆ, ರಾಜಕಾರಣದಲ್ಲಿ ನಂಬಿಕೆ ಮುಖ್ಯ ಮತ್ತು ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ," ಎಂದು ಸುರೇಶ್ ಹೇಳಿದರು. ಆ ಮೂಲಕ ಸಿಎಂ ಸ್ಥಾನದ ವಿಚಾರವನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿರುವುದರ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಭರವಸೆ ಏನು?
ಇತ್ತೀಚೆಗೆ ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಪಕ್ಷ ಈಗಾಗಲೇ ಎಲ್ಲವನ್ನೂ ಹೇಳಿದೆ. ರಾಹುಲ್ ಗಾಂಧಿ ಅವರು, 'ತಾಳ್ಮೆಯಿಂದಿರಿ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ನಾವೂ ಪಕ್ಷದ ಆದೇಶಕ್ಕೋಸ್ಕರ ಕಾಯುತ್ತಿದ್ದೇವೆ. ಸದ್ಯಕ್ಕೆ ನಮ್ಮ ಗುರಿ ಇರುವುದು 2028ರ ಚುನಾವಣೆಯ ಮೇಲೆ," ಎಂದರು.
ನರೇಗಾ ಅನ್ಯಾಯವೇ ಈಗಿನ ಆದ್ಯತೆ
ತುರ್ತು ಅಧಿವೇಶನದ ಬಗ್ಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯದ ಕೂಲಿ ಕಾರ್ಮಿಕರ ಹಕ್ಕನ್ನು ಕಸಿದುಕೊಂಡಿದೆ. ಇದು ಬಡವರ ಹೊಟ್ಟೆಪಾಡಿನ ವಿಷಯ. ಹೀಗಾಗಿ ಸದ್ಯಕ್ಕೆ ನಮಗೆ ಇದೇ ಮೊದಲ ಆದ್ಯತೆ. ಈ ಅನ್ಯಾಯದ ವಿರುದ್ಧ ಹೋರಾಡಲು ಸಿಎಲ್ಪಿ ಸಭೆಯಲ್ಲಿ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ," ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ರಾಜ್ಯ ರಾಜಕೀಯ ಪ್ರವೇಶದ ಬಗ್ಗೆಯೂ ಮಾತನಾಡಿದ ಅವರು, "ಚುನಾವಣೆ ಇನ್ನೂ ಬಹಳ ದೂರವಿದೆ. ಅವರು ಬರುವುದರಿಂದ ರಾಜ್ಯ ರಾಜಕೀಯದ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ," ಎಂದು ಅಭಿಪ್ರಾಯಪಟ್ಟರು.

