ಚನ್ನಪಟ್ಟಣ ಉಪ ಚುನಾವಣೆ| ಡಿ.ಕೆ. ಸುರೇಶ್ಗೆ ಪಕ್ಷದ ಕೆಲಸ ಮಾಡುವ ಆಸೆ: ಡಿ.ಕೆ. ಶಿವಕುಮಾರ್
'ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ. ಸುರೇಶ್ ಗೆ ಆಸಕ್ತಿಯಿಲ್ಲ. ಜನರು ಸುರೇಶ್ ಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಅವರಿಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ," ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅಥವಾ ಅವರ ಸೋದರ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೊಕಸಭಾ ಚುನಾವನೆಯಲ್ಲಿ ಸೋತ ಡಿ.ಕೆ. ಸುರೇಶ್ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಆದರೆ ಒಂದೊಂದು ಬಾರಿ ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವ ಡಿ.ಕೆ. ಶಿವಕುಮಾರ್, ತಮ್ಮ ಸೋದರನಿಗೆ ಚುನಾವಣೆ ಎದುರಿಸುವ ಆಸೆಯಿದೆ ಎಂದು ಪರೋಕ್ಷವಾಗಿ ಹೇಳಿದ್ದರು.
ತಾವೇ ಸ್ಪರ್ಧಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದ ಡಿ.ಕೆ.ಶಿ, ಮರುದಿನವೇ ತಾವು ತಮ್ಮ ಕ್ಷೇತ್ರ ಕನಕಪುರದ ಶಾಸಕ ಹಾಗೂ ಅಲ್ಲಿ ಉಪಚುನಾವಣೆ ಇಲ್ಲ ಎಂದು ಹೇಳಿ, ತಾವು ಚನ್ನಪಟ್ಟಣದಿಂದ ಸ್ಪರ್ಧಿಸುವ ವಿಚಾರವಿಲ್ಲ ಎಂಬರ್ಥದ ಹೇಳಿಕೆ ನೀಡಿದ್ದರು. ಸೋಮವಾರ ಅವರ ಸೋದರ ಡಿ.ಕೆ. ಸುರೇಶ್ ಅವರು ತಾವು ರಾಜಕೀಯವಾಗಿ ರೆಸ್ಟ್ ತೆಗೆದುಕೊಳ್ಳುವಂತೆ ಮತದಾರರು ಹೇಳಿದ್ದಾರೆ. ಸೋತು ತಿಂಗಳೂ ಆಗಿಲ್ಲ, ಮತ್ತೆ ಚುನಾವಣೆಗೆ ನಿಂತರೆ ಜನ ನಗುತ್ತಾರೆ ಎಂದು ಹೇಳಿದ್ದರು.
ಆದರೆ, ಮಂಗಳವಾರ, ಮಂಗಳೂರು ಪ್ರವಾಸದ ವೇಳೆ, ಡಿ.ಕೆ. ಶಿವಕುಮಾರ್ ಅವರು, ಚನ್ನಪಟ್ಟಣದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ 85 ಸಾವಿರ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರ ಕೈ ಬಿಡುವುದಕ್ಕೆ ಆಗುವುದಿಲ್ಲ, ಎಂದು ಹೇಳಿದ್ದಾರೆ. ಜತೆಗೆ "ಸುರೇಶ್ಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ," ಎನ್ನುವ ಮೂಲಕ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಚನ್ನಪಟ್ಟಣ ಮೊದಲು ನೋಡಿದ್ದು ನಾನು
“ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ಚನ್ನಪಟ್ಟಣಕ್ಕೆ ನೀವು ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೇನು ಗೊತ್ತು? ನಾನು 1985 ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ ಅವರು 1995 ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡೋಣ. ಹಿಂದೆ ಮಂತ್ರಿಯಾಗಿದ್ದಾಗ ಸೇವೆ ಮಾಡಿದ್ದೇನೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ’ ಎಂದು ಹೇಳಿದರು.