
ಕುಟುಂಬದ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ: ಡಿಕೆಶಿ ಗೊಂದಲದ ಹೇಳಿಕೆ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆಯಲು ಉತ್ಸುಕರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಮ್ಮೆ ತಾವೇ ಸ್ಪರ್ಧಿಸುವುದಾಗಿ, ಇನ್ನೊಮ್ಮೆ ತಮ್ಮ ಮೂಲ ಕನಕಪುರ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿ ಗೊಂದಲ ಮೂಡಿಸುತ್ತಲೇ ಇದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯಾ ಹೆಗ್ಡೆ, ಸೋದರ ಡಿ.ಕೆ. ಸುರೇಶ್ ಅಥವಾ ಸ್ವತಃ ಡಿ.ಕೆ.ಶಿ ಸ್ಪರ್ಧಿಸುತ್ತಾರೆಯೇ? ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ದಿನ ಬಿಟ್ಟು ದಿನ ನೀಡುತ್ತಿರುವ ಹೇಳಿಕೆಗಳು ರಾಜಕೀಯ ಎದುರಾಳಿಗಳಿಗೆ ಗೊಂದಲ ಸೃಷ್ಟಿಸಲು ಎನ್ನುವ ಅಂಶ ಎದ್ದು ಕಾಣುತ್ತಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆಯಲು ಉತ್ಸುಕರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಮ್ಮೆ ತಾವೇ ಸ್ಪರ್ಧಿಸುವುದಾಗಿ, ಇನ್ನೊಮ್ಮೆ ತಮ್ಮ ಮೂಲ ಕನಕಪುರ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿ ಗೊಂದಲ ಮೂಡಿಸುತ್ತಲೇ ಇದ್ದಾರೆ.
ಇನ್ನೊಮ್ಮೆ ಸೋದರ , ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಡಿ.ಕೆ. ಸುರೇಶ್ ನಿಲ್ಲುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಬೆಂಬಲಿಗರು ಹೇಳಿಕೊಂಡರೆ, ಈಗ ಅವರ ಮಗಳು ಐಶ್ವರ್ಯಾ ಹೆಗ್ಡೆ ಸ್ಪರ್ಧಿಸುತ್ತಾರೆ ಎಂಬ ವಿಚಾರವನ್ನೂ ಅವರ ಬೆಂಬಲಿಗರು ತೇಲಿಬಿಟ್ಟಿದ್ದಾರೆ. ಆದರೆ, ಇದು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆ ಆಗಿದ್ದು, ಜನಾಭಿಪ್ರಾಯ ಹೇಗಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಹೆಸರುಗಳನ್ನು ತೇಲಿಬಿಡಲಾಗುತ್ತಿದೆ ಎಂದಿದ್ದಾರೆ.
ಜೆಡಿಎಸ್‌ನಿಂದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಥವಾ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಚುನಾವಣಾ ಕಣಕ್ಕೆ ಧುಮುಕುತ್ತಾರೆ ಎಂಬ ಮಾತಿದೆ. ಹಾಗಾಗಿ ಸೋದರ ಡಿ.ಕೆ. ಸುರೇಶ್ ಅಥವಾ ಮಗಳು ಐಶ್ವರ್ಯಾ ಹೆಗ್ಡೆ ಅವರನ್ನು ಚುನಾವಣಾ ಕಣಕ್ಕಿಳಿಸಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಯೋಚಿಸಿದ್ದಾರೆ ಎನ್ನಲಾಗಿದೆ.
ಆದರೆ, ಡಿ.ಕೆ. ಶಿವಕುಮಾರ್ ಅವರು ತಮ್ಮ X ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿ "ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ," ಎಂದು ಹೇಳಿಕೆ ನೀಡದ್ದಾರೆ.
ʼನಮ್ಮ ಕುಟುಂಬದವರುʼ ಎಂದರೆ ಯಾರು? ಅವರ ಸೋದರ ಡಿ.ಕೆ ಸುರೇಶ್ ಅವರೇ? ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಅಥವಾ ಅವರ ಪುತ್ರಿ ಐಶ್ವರ್ಯಾ ಹೆಗ್ಡೆಯವರೇ ? ಎಂಬ ಬಗ್ಗೆ ಸೂಕ್ತ ವಿವರಣೆ ಆ ಹೇಳಿಕೆಯಲ್ಲಿಲ್ಲ. ಆದರೆ, ಅವರ ಅಪ್ತರ ಪ್ರಕಾರ, ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಅವರ ಮಗಳ ಕುರಿತಾಗಿ. ಅಂದರೆ "ನಮ್ಮ ಕುಟುಂಬದವರು" ಅಂದರೆ ಅವರ ಮಗಳು ಚುನಾವಣೆಗೆ ನಿಲ್ಲುತ್ತಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರು ಹೇಳಿದ್ದಾರೆ.
ಆದರೆ, ಶಿವಕುಮಾರ್ ಅವರು ಈ ರೀತಿಯ ಗೊಂದಲ ಹುಟ್ಟಿಸುವ ಹೇಳಿಕೆ ನೀಡಿ ರಾಜಕೀಯ ಎದುರಾಳಿಗಳನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆಯೂ ಈಗ ಎದ್ದಿದೆ.