ಕೆಂಪೇಗೌಡ ಜಯಂತಿ | ಇನ್ನೂ ಕೆಲ ಒಕ್ಕಲಿಗ ನಾಯಕರನ್ನು ಆಹ್ವಾನಿಸಬೇಕಿತ್ತು, ತಪ್ಪಾಗಿದೆ ಎಂದ ಡಿಕೆ ಶಿವಕುಮಾರ್
x

ಕೆಂಪೇಗೌಡ ಜಯಂತಿ | ಇನ್ನೂ ಕೆಲ ಒಕ್ಕಲಿಗ ನಾಯಕರನ್ನು ಆಹ್ವಾನಿಸಬೇಕಿತ್ತು, ತಪ್ಪಾಗಿದೆ ಎಂದ ಡಿಕೆ ಶಿವಕುಮಾರ್


ಕುಮಾರಸ್ವಾಮಿ ಹಾಗೂ ದೇವೇಗೌಡರನ್ನೂ ಸೇರಿದಂತೆ ಇನ್ನೂ ಕೆಲ ಒಕ್ಕಲಿಗ ನಾಯಕರನ್ನು ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಮುಂದಿನ ವರ್ಷ ಈ ರೀತಿಯ ತಪ್ಪುಗಳು ನಡೆಯದಂತೆ ಸರಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದು (ಗುರುವಾರ) ರಾಜ್ಯ ಸರ್ಕಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದ ವಿಚಾರವಾಗಿ ರಾಜ್ಯ ಒಕ್ಕಲಿಗರ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಆ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌, ʻʻಯಾರನ್ನೂ ಅಗೌರವಿಸುವ ಉದ್ದೇಶ ನಮಗಿಲ್ಲ. ಒಕ್ಕಲಿಗ ಸಮುದಾಯದ ನಾಯಕರಾಗಿ ಎಸ್.ಎಂ ಕೃಷ್ಣ, ಸದಾನಂದ ಗೌಡರು, ದೇವೇಗೌಡರು, ಕುಮಾರಸ್ವಾಮಿ ಅವರು ಇದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ಶಿಷ್ಟಾಚಾರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಮಾತ್ರ ಆಹ್ವಾನ ನೀಡಿದ್ದಾರೆ. ಕುಮಾರಸ್ವಾಮಿ ಮಂಡ್ಯಕ್ಕೆ ಹೋಗಿದ್ದು, ದೇವೇಗೌಡರು ಹಾಸನದ ಪ್ರತಿನಿಧಿಯಾಗಿದ್ದಾರೆ. ಈ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಮುಂದಿನ ವರ್ಷ ಈ ರೀತಿಯ ತಪ್ಪುಗಳು ನಡೆಯದಂತೆ ಸರಿಪಡಿಸಲಾಗುವುದುʼʼ ಎಂದು ತಿಳಿಸಿದ್ದಾರೆ.

ʻʻಒಕ್ಕಲಿಗ ಸಮುದಾಯದವರ ಜತೆಗೆ ಬೇರೆ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳನ್ನೂ ಆಹ್ವಾನಿಸುವಂತೆ ಸೂಚಿಸಲಾಗಿದೆ. ಕೆಂಪೇಗೌಡರು ಎಲ್ಲ ಸಮುದಾಯದವರಿಗೂ ಸೇರಿ ಬೆಂಗಳೂರನ್ನು ಕಟ್ಟಿದ್ದಾರೆ. ಹೀಗಾಗಿ ಎಲ್ಲ ಸಮುದಾಯದವರು ಕೆಂಪೇಗೌಡ ಜಂಯತಿ ಆಚರಣೆಯಲ್ಲಿ ಭಾಗಿಯಾಗಬೇಕು. ಇದರಲ್ಲಿ ರಾಜಕೀಯ ಮಾಡುವವರು ಮಾಡಲಿʼʼ ಎಂದಿದ್ದಾರೆ.

ʻʻಕೆಂಪೇಗೌಡರು ಎಲ್ಲರ ಆಸ್ತಿ, ಒಂದು ಜಾತಿ ಹಾಗೂ ಧರ್ಮಕ್ಕೆ ಸೇರಿದವರಲ್ಲ. ಇವರ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ನಮ್ಮ ಸರ್ಕಾರ ಮುಂದಾಗಿದೆ. ಹಾಗಾಗಿ ರಾಜ್ಯದೆಲ್ಲೆಡೆ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ನೀಡುವ 25 ಸಾವಿರದ ಜತೆಗೆ ಬಿಬಿಎಂಪಿಯಿಂದ 1 ಲಕ್ಷ ಅನುದಾನ ನೀಡಲಾಗುವುದುʼʼ ಎಂದು ಹೇಳಿದ್ದಾರೆ.

Read More
Next Story