
'ಅವರ ಮನೆಯಿಂದಲೇ ಕದ್ದಿದ್ದೇನೆ!': ಕಾರ್ಟಿಯರ್ ವಾಚ್ ವಿವಾದಕ್ಕೆ ಡಿಕೆಶಿ ವ್ಯಂಗ್ಯದ ತಿರುಗೇಟು
ತಮ್ಮ ಬಳಿಯಿರುವ ವಾಚ್‌ಗಳ ಬಗ್ಗೆ ಮಾತನಾಡಿದ ಅವರು, "ನನ್ನ ಬಳಿ ಇರುವ ರೋಲೆಕ್ಸ್ ವಾಚ್ ಬಗ್ಗೆ ಅಫಿಡವಿಟ್‌ನಲ್ಲಿ ಹೇಳಿದ್ದೇನೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 'ಕಾರ್ಟಿಯರ್' ವಾಚ್ ವಿವಾದವು ರಾಜ್ಯ ರಾಜಕೀಯದಲ್ಲಿ ಮಾತಿನ ಸಮರಕ್ಕೆ ಕಾರಣವಾಗಿದೆ. ಚುನಾವಣಾ ಅಫಿಡವಿಟ್‌ನಲ್ಲಿ ವಾಚ್ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಕೆಶಿ, "ನಾನು ಕಲಿಯಬೇಕಾದ್ದು ಅವರಿಂದ ಏನೂ ಇಲ್ಲ," ಎಂದು ತಿರುಗೇಟು ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಛಲವಾದಿ ನಾರಾಯಣಸ್ವಾಮಿ, "ಡಿ.ಕೆ. ಶಿವಕುಮಾರ್ ಅವರು ಧರಿಸಿರುವ ದುಬಾರಿ ಕಾರ್ಟಿಯರ್ ವಾಚ್‌ನ ವಿವರವನ್ನು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ. ಇದು ಸಾರ್ವಜನಿಕರಿಗೆ ನೀಡಿದ ತಪ್ಪು ಮಾಹಿತಿ. ಹಾಗಾದರೆ ಇದು ಕದ್ದ ಮಾಲಾ? ಇದರ ಮೂಲವನ್ನು ಅವರು ಸ್ಪಷ್ಟಪಡಿಸಬೇಕು," ಎಂದು ದಾಖಲೆ ಸಮೇತ ಆರೋಪಿಸಿದ್ದರು.
ನನ್ನ ಅಫಿಡವಿಟ್ ಬಗ್ಗೆ ನನಗೆ ಗೊತ್ತು: ಡಿಕೆಶಿ ಖಡಕ್ ಉತ್ತರ
ಈ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಮೊದಲಿನಿಂದಲೂ ಆಕ್ರಮಣಕಾರಿ ಶೈಲಿಯಲ್ಲೇ ಉತ್ತರ ನೀಡಿದರು. "ಯಾರು ಹೇಳಿದ್ದು? ಅವರಿಗೆ ಏನು ಗೊತ್ತು? ನನ್ನ ಅಫಿಡವಿಟ್ ಬಗ್ಗೆ ನನಗೆ ಗೊತ್ತು," ಎಂದು ನಾರಾಯಣಸ್ವಾಮಿ ಅವರ ಆರೋಪವನ್ನು ತಳ್ಳಿಹಾಕಿದರು.
"ನಾನು ದುಡ್ಡು ಕೊಟ್ಟಿರೋದು ನನಗೆ ಗೊತ್ತು, ನನ್ನ ಕ್ರೆಡಿಟ್ ಕಾರ್ಡ್ ಬಳಸಿರೋದು ನನಗೆ ಗೊತ್ತು. ಎಲ್ಲವೂ ನನಗೆ ಗೊತ್ತು, ಅರ್ಥ ಆಯ್ತಾ? ನಾನು ಅಷ್ಟು ಪಾರದರ್ಶಕವಾಗಿ ಎಲ್ಲವನ್ನೂ ಘೋಷಣೆ ಮಾಡಿದ್ದೇನೆ," ಎಂದು ತಮ್ಮ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದರು.
ಎಲ್ಲಾ ವಾಚ್‌ಗಳ ವಿವರ ನೀಡಿದ್ದೇನೆ
ತಮ್ಮ ಬಳಿಯಿರುವ ವಾಚ್‌ಗಳ ಬಗ್ಗೆ ಮಾತನಾಡಿದ ಅವರು, "ನನ್ನ ಬಳಿ ಇರುವ ರೋಲೆಕ್ಸ್ ವಾಚ್ ಬಗ್ಗೆ ಅಫಿಡವಿಟ್‌ನಲ್ಲಿ ಹೇಳಿದ್ದೇನೆ. ಈಗ ಕಟ್ಟಿಕೊಂಡಿರುವ ಈ ಕಾರ್ಟಿಯರ್ ವಾಚ್ ಬಗ್ಗೆಯೂ ಹೇಳಿದ್ದೇನೆ. ಅರ್ಥ ಆಯ್ತಾ? ನಾನು ನಾರಾಯಣಸ್ವಾಮಿ ಅವರ ಹತ್ತಿರ ಕಲಿಯಬೇಕಾದ ಪಾಠ ಏನೂ ಇಲ್ಲ," ಎಂದು ಖಾರವಾಗಿ ನುಡಿದರು.
'ಇದು ಕದ್ದ ವಾಚ್ ಇರಬಹುದೇ' ಎಂಬ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಮಾಧ್ಯಮಗಳು ಕೇಳಿದಾಗ, ಡಿ.ಕೆ. ಶಿವಕುಮಾರ್ ತಮ್ಮದೇ ಶೈಲಿಯಲ್ಲಿ, "ಹೌದು, ಅವರ ಮನೆಯಿಂದನೇ ಕದ್ದಿದ್ದೇನೆ," ಎಂದು ವ್ಯಂಗ್ಯಭರಿತ ಉತ್ತರ ನೀಡುವ ಮೂಲಕ ಆರೋಪವನ್ನು ಸಂಪೂರ್ಣವಾಗಿ ಹಗುರಗೊಳಿಸುವ ಪ್ರಯತ್ನ ಮಾಡಿದರು.

